ಶನಿವಾರ, ಮೇ 28, 2022
31 °C

2ನೇ ಹಂತದ ನಗರಗಳಲ್ಲಿ ನೇಮಕಾತಿ ಆದ್ಯತೆ: ಎಎಂಡಿ ಇಂಡಿಯಾ ನಿರ್ಧಾರ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಂಪ್ಯೂಟರ್‌ಗಳ ಕಾರ್ಯನಿರ್ವಹಣೆಯಲ್ಲಿ ಬಳಕೆಯಾಗುವ ಸೆಮಿಕಂಡಕ್ಟರ್‌ಗಳನ್ನು ತಯಾರಿಸುವ ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಾಗಿರುವ ಅಡ್ವಾನ್ಸಡ್ ಮೈಕ್ರೊ ಡಿವೈಸಸ್‌ (ಎಎಂಡಿ) ಭಾರತದ ಅಂಗಸಂಸ್ಥೆಯು, ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳ ಪ್ರತಿಭಾನ್ವಿತ ತಂತ್ರಜ್ಞರನ್ನು ನೇಮಿಸಿಕೊಳ್ಳಲು ಗಮನ ಕೇಂದ್ರಿಕರಿಸಿದೆ.

‘ಹೊಸ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಯಂತ್ರ ಬುದ್ಧಿಮತ್ತೆ ಮತ್ತು ವೈರ್‌ಲೆಸ್‌ ತಂತ್ರಜ್ಞಾನ ಕ್ಷೇತ್ರಗ
ಳಲ್ಲಿ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ ತಂಡಗಳನ್ನು ಕಟ್ಟಲು ಮಹಾನಗರಗಳ ಆಚೆಗಿನ ಎಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ’ ಎಂದು ಎಎಂಡಿ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಫಾತೀಮಾ ಫರೂಕ್‌ ಹೇಳಿದ್ದಾರೆ.

‘ಹೊಸ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ), ಮಷಿನ್‌ ಲರ್ನಿಂಗ್‌ ಕ್ಷೇತ್ರಗಳಲ್ಲಿ ಕುಶಲ ತಂತ್ರಜ್ಞರಿಗೆ ಬೇಡಿಕೆ ಇದೆ. ಆದರೆ, ಲಭ್ಯತೆ ಪ್ರಮಾಣ ಕಡಿಮೆ ಇದೆ. ಈ ಬೇಡಿಕೆ ಮತ್ತು ಪೂರೈಕೆ ಅಸಮತೋಲನ ಸರಿಪಡಿಸಲು ಎರಡು ಮತ್ತು ಮೂರನೇ ಹಂತದ ನಗರಗಳ ಎಂಜಿನಿಯರಿಂಗ್ ಕಾಲೇಜ್‌ಗಳಿಂದ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಂಡು ಅವರಿಗೆ ಅಗತ್ಯ ತರಬೇತಿ ನೀಡಲು ಕಂಪನಿ ಮುಂದಾಗಿದೆ. ಈ ಉದ್ದೇಶ ಸಾಕಾರಗೊಳಿಸಲು ಕರ್ನಾಟಕವೂ ಸೇರಿದಂತೆ ದಕ್ಷಿಣದ ಮೂರು ರಾಜ್ಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಸುರತ್ಕಲ್‌, ಉಡುಪಿ ಮತ್ತಿತರ ನಗರಗಳಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಸ್ಥಳೀಯ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಕಂಪ್ಯೂಟರ್ ಸೈನ್ಸ್‌, ಅಡ್ವಾನ್ಸಡ್‌ ಕಂಪ್ಯೂಟರ್‌ ಆರ್ಕಿಟೆಕ್ಚರ್‌, ಪ್ಯಾರೆಲ್ಲೆಲ್ ಪ್ರೊಗ್ರಾಮಿಂಗ್‌, ಹೈ ಪರಫಾರ್ಮನ್ಸ್‌ ಕಂಪ್ಯೂಟಿಂಗ್ ವಿಷಯಗಳಲ್ಲಿ ಬಿ.ಟೆಕ್‌ ಮತ್ತು ಎಂ.ಟೆಕ್‌ ಮಾಡಿದವರಿಗೆ ಎಎಂಡಿಯಲ್ಲಿ ಉದ್ಯೋಗ ಅವಕಾಶಗಳು ಇವೆ.

‘ಆಯ್ಕೆಯಾದ ಎಂ.ಟೆಕ್‌ ಕೊನೆಯ ವರ್ಷದ ವಿದ್ಯಾರ್ಥಿಗಳು 9 ತಿಂಗಳ ಕಾಲ ಎಎಂಡಿ ಕಚೇರಿಯಲ್ಲಿ ಕಂಪನಿಯ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುವ ತಂಡಗಳ ಜತೆ ಕೆಲಸ ಮಾಡಬೇಕಾಗುತ್ತದೆ. ಸರಾಸರಿ ಶೇ 90ರಷ್ಟು ವಿದ್ಯಾರ್ಥಿಗಳು ಇಲ್ಲಿಯೇ ಕಾಯಂ ಉದ್ಯೋಗಿಗಳಾಗಿ ನೇಮಕಗೊಳ್ಳುತ್ತಾರೆ.

‘ಕಾಲೇಜ್‌ಗಳ ಹೊಸ ಪದವೀಧರರ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌, ಅಡ್ವಾನ್ಸಡ್ ಕಂಪ್ಯೂಟರ್‌ ಆರ್ಕಿಟೆಕ್ಚರ್‌, ಹೈಪರಫಾರ್ಮನ್ಸ್‌ ಕಂಪ್ಯೂಟಿಂಗ್‌ ಮತ್ತಿತರ ವಿಷಯಗಳಲ್ಲಿ ಬಿ.ಟೆಕ್‌ ಅಥವಾ ಎಂ.ಟೆಕ್‌ ಮಾಡಿರಬೇಕು.

‘ಬೆಂಗಳೂರಿನಂತಹ ಮಹಾನಗರಗಳು ಮತ್ತು ಎರಡನೆ ಹಂತದ ನಗರಗಳ ಪ್ರತಿಭಾನ್ವಿತರ ವೇತನದಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ಎಲ್ಲರಿಗೂ ಸಮಾನ ವೇತನ –ಭತ್ಯೆ ನೀಡಲಾಗುವುದು’ ಎಂದೂ ಅವರು ಸ್ಪಷ್ಟಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು