ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಶಿ ಅಡಿಕೆ: ₹40 ಸಾವಿರಕ್ಕೆ ಸ್ಥಿರ!

ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದ ಬೆಲೆ
Last Updated 6 ಜನವರಿ 2021, 19:31 IST
ಅಕ್ಷರ ಗಾತ್ರ

ಶಿರಸಿ: ಫಸಲು ಕಳೆದ ವರ್ಷಕ್ಕಿಂತ ಕಡಿಮೆಯಾದ ಚಿಂತೆಯಲ್ಲಿದ್ದ ಕೃಷಿಕರಿಗೆ ರಾಶಿ ಅಡಿಕೆ (ಕೆಂಪಡಿಕೆ) ದರ ವಾರದಿಂದ ಪ್ರತಿ ಕ್ವಿಂಟಾಲ್‍ಗೆ ₹40 ಸಾವಿರದ ಆಸುಪಾಸು ಸ್ಥಿರವಾಗಿರುವುದು ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಅಡಿಕೆ ಕೊಯ್ಲು ಅರ್ಧದಷ್ಟು ಮುಗಿದಿದೆ. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಗೆ ಹೊಸ ಕೆಂಪಡಿಕೆ ಆವಕವಾಗುತ್ತಿದೆ. ಇದರ ಬೆನ್ನಲ್ಲೇ ದರವೂ ಏರಿಕೆಯಾಗುತ್ತಿದೆ.

ಮಳೆಗಾಲದಲ್ಲಿ ಕೊಳೆರೋಗ, ಹಿಡಿಮುಂಡಿಗೆ ರೋಗಬಾಧೆಯಿಂದ ರೈತರು ಹೈರಾಣಾಗಿದ್ದರು. ಈಗ, ಇರುವ ಬೆಳೆಗೆ ಉತ್ತಮ ಬೆಲೆ ಸಿಗಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಚಾಲಿ ಅಡಿಕೆ ಮಾಡುವ ಆಸಕ್ತಿಯಲ್ಲಿದ್ದ ರೈತರು ಕೂಡ ರಾಶಿ ಅಡಿಕೆಯನ್ನೇ ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.

ರಾಶಿ ಅಡಿಕೆಗೆ ಕಳೆದ ತಿಂಗಳು ಸರಾಸರಿ ₹ 35 ಸಾವಿರದಿಂದ ರಿಂದ ₹ 38 ಸಾವಿರ ದರವಿತ್ತು. ಹೊಸ ಅಡಿಕೆ ಆವಕವಾದ ದಿನ ₹ 39 ಸಾವಿರದವರೆಗೆ ತಲುಪಿತ್ತು. ಮಾರನೆ ದಿನ ಮತ್ತೆ ಬೆಲೆ ಇಳಿಕೆಯಾಗಿತ್ತು. ಆದರೆ, ಈಗ ಒಂದು ವಾರದಿಂದ ಸರಾಸರಿ ₹40 ಸಾವಿರದ ಆಸುಪಾಸಿನಲ್ಲಿ ಅಡಿಕೆ ವಹಿವಾಟು ನಡೆಯುತ್ತಿದೆ.

‘ಬೆಳೆ ಪ್ರಮಾಣ ಕಡಿಮೆ ಇದೆ. ಕೂಲಿಕಾರ್ಮಿಕರ ಕೊರತೆಯಿಂದ ಕೆಂಪಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಕಾರಣದಿಂದ ಅಡಿಕೆ ದಾಸ್ತಾನು ಹೆಚ್ಚು ಇರಲಿಲ್ಲ. ಇವೆಲ್ಲ ಕಾರಣಕ್ಕೆ ಈಗ ಹೆಚ್ಚು ದರ ಬಂದಿರಬಹುದು’ ಎನ್ನುತ್ತಾರೆ ಶಿರಸಿಯ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

ಪ್ರತಿ ಬಾರಿ ಬೆಳೆಕೊಯ್ಲು ಆರಂಭದಲ್ಲಿ ಹೆಚ್ಚು ದರ ಸಿಗುತ್ತದೆ. ಆದರೆ, ಸಿದ್ಧ ಅಡಿಕೆ ಮಾರುಕಟ್ಟೆಗೆ ಹೆಚ್ಚು ಬರುತ್ತಿದ್ದಂತೆ ಬೆಲೆ ಇಳಿಕೆಯಾಗುತ್ತಿತ್ತು. ಈಗಿದ್ದ ದರ ಮುಂದುವರೆದರೆ ಕೃಷಿಕರಿಗೆ ಅನುಕೂಲವಾಗಬಹುದು ಎಂದು ಕೃಷಿಕ ರಾಘವೇಂದ್ರ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT