ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಡ ಸೋರುವಿಕೆ: ತೆಂಗಿಗೆ ಆಯುರ್ವೇದ ಚಿಕಿತ್ಸೆ

ತುಮಕೂರಿನ ಸಹಜ ಬೇಸಾಯ ಶಾಲೆಯ ಪರಿಹಾರ
Last Updated 1 ಜನವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ತುಮಕೂರು: ಬಡ್ಡೆ ಸೋರುವಿಕೆ ಅಥವಾ ಕಾಂಡ ಸೋರುವಿಕೆ ತೆಂಗಿನ ಮರಗಳನ್ನು ಬಾಧಿಸುವ ಪ್ರಮುಖ ರೋಗ. ಈ ರೋಗಕ್ಕೆ ತುತ್ತಾದ ಮರಗಳಲ್ಲಿ ಫಸಲು ಕಡಿಮೆ ಆಗುತ್ತದೆ. ರೋಗ ಗರಿಷ್ಠ ಮಟ್ಟ ತಲುಪಿದಾಗ ಆ ಮರವೇ ಸತ್ತು ಹೋಗುತ್ತದೆ. ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ, ಸೂಚನೆಗಳ ನಡುವೆಯೂ ರೋಗ ವ್ಯಾಪಿಸುತ್ತಲೇ ಇದೆ.

ತೆಂಗು ಪ್ರಧಾನವಾಗಿ ಬೆಳೆಯುವ ಭಾಗಗಳ ರೈತರಿಗೆ ಬಡ್ಡೆ ಸೋರುವಿಕೆ ಇಂದಿಗೂ ತಲೆನೋವಾಗಿದೆ. ತುಮಕೂರಿನ ಸಹಜ ಬೇಸಾಯ ಶಾಲೆಯು ಈ ರೋಗ ಗುಣಪಡಿಸಲು ತೆಂಗಿನ ಮರಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಆರಂಭಿಸಿದೆ. ಇದು ರೈತರ ಗಮನ ಸೆಳೆಯುತ್ತಿದೆ.

ಚಿಕಿತ್ಸೆ ಹೇಗೆ: ‘ರಸ ಸೋರುತ್ತಿರುವ ಭಾಗದ ತೊಗಟೆ ತೆಗೆಯಬೇಕು. 10 ಗ್ರಾಂ ಇಂಗು, ಬೇವು ಮತ್ತು ಎಕ್ಕದ ಎಲೆ ತಲಾ ಒಂದು ಕೆ.ಜಿ, ಬೇವಿನ ಹಿಂಡಿ 25 ಗ್ರಾಂ, ಸ್ವಲ್ಪ ಹೊಗೆಸೊಪ್ಪು, ಕರ್ಪೂರ, ಲಂಟಾನ 250 ಗ್ರಾಂ ಮತ್ತು 20 ಬೆಳ್ಳುಳ್ಳಿಯನ್ನು ಚೆನ್ನಾಗಿ ಅರೆಯಬೇಕು. ದೇಸಿ ಹಸುವಿನ ಸಗಣಿ, ಗಂಜಲ ಮಿಶ್ರಣ ಮಾಡಿಕೊಂಡು ರಸ ಸೋರುವ ಕಡೆ ಮೆತ್ತಬೇಕು. ಹೊಂಗೆ ಎಣ್ಣೆಯಲ್ಲಿ ಅದ್ದಿದ ಕಾಟನ್‌ ಬಟ್ಟೆಯನ್ನು ಈ ಭಾಗಕ್ಕೆ ಸುತ್ತಬೇಕು. ಬಟ್ಟೆ ಒಣಗದಂತೆ ಮೂರು ದಿನಕ್ಕೆ ಒಮ್ಮೆ ಹೊಂಗೆ ಎಣ್ಣೆ ಸಿಂಪಡಿಸಬೇಕು. ಹೀಗೆ ಸರಾಸರಿ ಒಂದೂವರೆ ತಿಂಗಳು ಮಾಡುವುದರಿಂದ ರೋಗ ವಾಸಿ ಆಗುತ್ತದೆ’ ಎಂದು ಸಹಜ ಬೇಸಾಯ ಶಾಲೆ ವಿಜ್ಞಾನಿ ಡಾ.ಎಚ್.ಮಂಜುನಾಥ್ ಮಾಹಿತಿ ನೀಡುವರು.

‘ತೆಂಗು ಪ್ರಧಾನವಾಗಿರುವ ಕಡೆಗಳಲ್ಲಿ ಈ ರೋಗ ಇದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ತಾಲ್ಲೂಕಿನಲ್ಲಿ ಹೆಚ್ಚಿದೆ. ತುರುವೇಕೆರೆ ತಾಲ್ಲೂಕಿನಲ್ಲಿ ಈಗ ವ್ಯಾಪಿಸುತ್ತಿದೆ. ಗಾಳಿ ಮತ್ತು ನೀರಿನ ಮೂಲಕ ಈ ಶಿಲೀಂಧ್ರ ರೋಗ ಹರಡುತ್ತದೆ. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈ ಆಯುರ್ವೇದ ಚಿಕಿತ್ಸೆಯಿಂದ ಮರಗಳು ರೋಗ ಮುಕ್ತವಾಗಿವೆ’ ಎಂದು ತಿಳಿಸಿದರು.

‘ಸಹಜ ಬೇಸಾಯ ಶಾಲೆ ಮಾರ್ಗದರ್ಶನದಲ್ಲಿ ಕೃಷಿ ನಡೆಸುತ್ತಿರುವ ರೈತರ ಮರಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಬೇರೆಯವರಿಗೂ ಈ ಬಗ್ಗೆ ಮಾರ್ಗದರ್ಶನ ನೀಡಿದ್ದೇವೆ’ ಎಂದು ತಿಳಿಸಿದರು.

ಆಯುರ್ವೇದ ಚಿಕಿತ್ಸೆ ನೀಡುತ್ತಿರುವುದು

ಚಿಕಿತ್ಸೆಗೆ ಗರಿಷ್ಠ ₹ 100 ವೆಚ್ಚ

‘ಒಂದು ತೆಂಗಿನ ಮರದಲ್ಲಿ ಕಂದು ಬಣ್ಣಕ್ಕೆ ಸಣ್ಣ ಪ್ರಮಾಣದಲ್ಲಿ ರಸ ಸೋರುತ್ತಿತ್ತು. ನಂತರ 31 ತೆಂಗಿನ ಮರಗಳಿಗೂ ವ್ಯಾಪಿಸಿತು. ಒಂದು ವಾರದಿಂದ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಹಿರಿಯೂರು ತಾಲ್ಲೂಕಿನ ಕೋವೇರ ಹಟ್ಟಿಯ ರೈತ ಮಂಜುನಾಥ್ ತಿಳಿಸಿದರು.

‘ಚಿಕಿತ್ಸೆಗೆ ಬಳಸುವ ವಸ್ತುಗಳೆಲ್ಲವೂ ನಮ್ಮ ಸುತ್ತಮುತ್ತಲೇ ಸಿಗುತ್ತವೆ. ಚಿಕಿತ್ಸೆಗೆ ಒಂದು ಮರಕ್ಕೆ ಗರಿಷ್ಠ ₹ 100 ಖರ್ಚು ಆಗಿದೆ. ಅಕ್ಕಪಕ್ಕದ ಊರಿನವರು ಸಹ ಇದನ್ನು ನೋಡಿಕೊಂಡು ಹೋಗಿದ್ದಾರೆ’ ಎಂದರು.

ಸಂಪರ್ಕಕ್ಕೆ 96322 26229.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT