ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wynk Music ಮುಚ್ಚುವುದಾಗಿ ಘೋಷಿಸಿದ Airtel: ಚಂದಾದಾರಿಕೆ ಪಡೆದವರ ಕಥೆ ಏನು?

Published 28 ಆಗಸ್ಟ್ 2024, 9:51 IST
Last Updated 28 ಆಗಸ್ಟ್ 2024, 9:51 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಂಕ್ ಮ್ಯೂಸಿಕ್‌’ (Wynk Music) ಅನ್ನು ಮುಚ್ಚುವುದಾಗಿ ಭಾರ್ತಿ ಏರ್‌ಟೆಲ್‌ ಹೇಳಿದೆ. ವಿಂಕ್‌ನ ಎಲ್ಲಾ ಉದ್ಯೋಗಿಗಳನ್ನು ಏರ್‌ಟೆಲ್‌ನ ವಿವಿಧ ವಿಭಾಗಗಳಿಗೆ ನಿಯೋಜಿಸುವುದಾಗಿ ಹೇಳಿದೆ.

ಆ್ಯಪಲ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ, ವಿಂಕ್ ಮ್ಯೂಸಿಕ್ ಅನ್ನು ಮುಚ್ಚುವ ಘೋಷಣೆ ಹೊರಬಿದ್ದಿದೆ.

2014ರಲ್ಲಿ ವಿಂಕ್ ಮ್ಯೂಸಿಕ್‌ ಅನ್ನು ಏರ್‌ಟೆಲ್ ಪರಿಚಯಿಸಿತ್ತು. ಆಫ್‌ಲೈನ್‌ನಲ್ಲಿ ಹಾಡುಗಳನ್ನು ಕೇಳಲು ಡೌನ್‌ಲೋಡ್‌ ಮಾಡಿಕೊಳ್ಳಲು, ಕಾಲರ್‌ ಟ್ಯೂನ್‌ ಅಗಿ ಹಾಡನ್ನು ಹಾಕಿಕೊಳ್ಳಲು, ಪಾಡ್‌ಕಾಸ್ಟ್‌ ಹಾಗೂ ವಿವಿಧ ಭಾಷೆಗಳ ಹಾಡುಗಳನ್ನು ಆಲಿಸಲು ಇದರಲ್ಲಿ ಸಾಧ್ಯವಿತ್ತು.

‘ವಿಂಕ್ ಮ್ಯೂಸಿಕ್‌ ಅನ್ನು ಮುಚ್ಚುತ್ತಿದ್ದೇವೆ. ಅದರ ಎಲ್ಲಾ ಉದ್ಯೋಗಿಗಳನ್ನು ಏರ್‌ಟೆಲ್‌ನ ವಿವಿಧ ವಿಭಾಗಳಲ್ಲಿ ತೊಡಗಿಸಿಕೊಳ್ಳಲಿದ್ದೇವೆ’ ಎಂದು ‘ಮನಿಕಂಟ್ರೋಲ್‌’ ಸುದ್ದಿ ಸಂಸ್ಥೆಗೆ ಭಾರ್ತಿ ಏರ್‌ಟೆಲ್‌ನ ವಕ್ತಾರ ಹೇಳಿದ್ದಾರೆ.

ಭಾರತೀಯ ಬಳಕೆದಾರರಿಗೆ ಒಟಿಟಿ ವಿಡಿಯೊ ಹಾಗೂ ಸಂಗೀತ ಸೇವೆಗಳಿಗೆ, ಆ್ಯಪಲ್ ಟಿವಿ+ ಹಾಗೂ ಆ್ಯಪಲ್ ಮ್ಯೂಸಿಕ್‌ ಸೌಲಭ್ಯಕ್ಕೆ ಆ್ಯಪಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ಭಾರ್ತಿ ಏರ್‌ಟೆಲ್ ಹೇಳಿದೆ.

ಏರ್‌ಟೆಲ್‌ನ ಎಲ್ಲಾ ಬಳಕೆದಾರರಿಗೆ ಆ್ಯಪಲ್ ಮ್ಯೂಸಿಕ್‌ ಸಿಗಲಿದೆ. ವಿಂಕ್ ಪ್ರೀಮಿಯಂ ಬಳಸುತ್ತಿದ್ದವರಿಗೆ ಆ್ಯಪಲ್‌ ಮ್ಯೂಸಿಕ್‌ನಲ್ಲಿ ವಿಶೇಷ ಕೊಡುಗೆ ನೀಡುವುದಾಗಿ ಏರ್‌ಟೆಲ್‌ ವಕ್ತಾರ ತಿಳಿಸಿದ್ದಾರೆ. ವರ್ಷಾಂತ್ಯದ ಒಳಗಾಗಿ ಈ ವಿಶೇಷ ಕೊಡುಗೆ ಕೇವಲ ಏರ್‌ಟೆಲ್‌ ಗ್ರಾಹಕರಿಗೆ ಮಾತ್ರ ಲಭಿಸಲಿದೆ ಎಂದು ಗೊತ್ತಾಗಿದೆ.

‘10 ವರ್ಷಗಳ ಹಿಂದೆ ಆರಂಭವಾದ ಸಂಗೀತ ವೇದಿಕೆ, 10 ಕೋಟಿಗೂ ಅಧಿಕ ಬಳೆದಾರರನ್ನು ಹೊಂದಿತ್ತು. ಇನ್ನು ಮುಂದೆ ಸ್ವಂತ ಘಟಕವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ’ ಎಂದು ಏರ್‌ಟೆಲ್‌ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಇ–ಮೇಲ್‌ನಲ್ಲಿ ಹೇಳಿದೆ.

ಏರ್‌ಟೆಲ್‌ನ ಡಿಜಿಟಲ್ ಸೇವೆಗಳ ಭಾಗವಾಗಿದ್ದ ವಿಂಕ್ ಮ್ಯೂಸಿಕ್‌ನ ವಾರ್ಷಿಕ ವಹಿವಾಟು ಸರಿ ಸುಮಾರು ₹ 250 ಕೋಟಿಯಿಂದ ₹300 ಕೋಟಿವರೆಗೂ ಇತ್ತು.

ಭಾರತದಲ್ಲಿ ಮ್ಯೂಸಿಕ್ ಸ್ಟ್ರೀಮಿಂಗ್ ಚಂದಾದಾರಿಕೆ ಕಡಿಮೆ ಇದೆ. ಇಂಥ ಪರಿಸ್ಥಿತಿ ಇರುವಾಗ, ಸರಿಯಾದ ಚಂದಾದಾರಿಕೆ ಯೋಜನೆ ಇಲ್ಲದೆ ವಿಂಕ್ ಅನ್ನು ಮುಂದುವರಿಸುವುದು ಸರಿಯಲ್ಲ ಎಂದು ನಿರ್ಧರಿಸಿ, ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಮ್ಯೂಸಿಕ್ ಸ್ಟ್ರೀಮಿಂಗ್‌ನಲ್ಲಿ ಇನ್ನೂ ಉತ್ತಮ ಸೇವೆ ನೀಡಲು ಏರ್‌ಟೆಲ್ ಬಯಸಿದ್ದು, ಹೀಗಾಗಿ ಈಗಾಗಲೇ ಜಾಗತಿಕವಾಗಿ ತನ್ನದೇ ಮಾರುಕಟ್ಟೆ ಹೊಂದಿರುವ ಆ್ಯಪಲ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಈ ಬಗ್ಗೆ ಮಾಹಿತಿ ಇರುವವರು ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ.

ಈ ಪಾಲುದಾರಿಕೆಯಿಂದ ಆ್ಯಪಲ್‌ಗೂ ಲಾಭವಾಗಲಿದ್ದು, ಚಂದಾದಾರರ ಸಂಖ್ಯೆ ಹೆಚ್ಚಳವಾಗಿದೆ. ಒಪ್ಪಂದದ ಪ್ರಕಾರ ಆ್ಯಪಲ್‌ನ ಚಂದಾದಾರಿಕೆ ಮೊತ್ತಕ್ಕಿಂತ ಕಡಿಮೆ ಶುಲ್ಕವನ್ನು ಏರ್‌ಟೆಲ್ ವಿಧಿಸಲಿದೆ. ಕೆಲವೊಂದು ಪ್ಲಾನ್‌ಗಳು ಕೇವಲ ಏರ್‌ಟೆಲ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT