ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರನೇ ಸಿರಿವಂತ ದೇಶದ ರೂಪಾಯಿ ಪತನ!

ಆರ್‌ಬಿಐನ ಸ್ವಾಯತ್ತತೆ ಸಂಘರ್ಷ
Last Updated 29 ಡಿಸೆಂಬರ್ 2018, 19:08 IST
ಅಕ್ಷರ ಗಾತ್ರ

ವಿಶ್ವದ 6ನೆ ಸಿರಿವಂತ ದೇಶ, ಅತಿ ಹೆಚ್ಚು ಸಂಖ್ಯೆಯ ಕುಬೇರರು ಇರುವ ದೇಶಗಳ ಜಾಗತಿಕ ಪಟ್ಟಿಯಲ್ಲಿ ಮೂರನೆ ಸ್ಥಾನ, ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ (ಜಿಡಿಪಿ) ದಾಖಲಿಸುತ್ತಿರುವ ಮತ್ತು ಚೀನಾ ಹಿಂದಿಕ್ಕಿರುವ ಖ್ಯಾತಿಯ ಆರ್ಥಿಕತೆಯು 2018ರಲ್ಲಿ ಹಲವಾರು ಅನಪೇಕ್ಷಿತ ವಿದ್ಯಮಾನಗಳಿಗೂ ಸಾಕ್ಷಿಯಾಗಿ ನಿಂತಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆಗಿನ ಸಂಘರ್ಷ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯದ ದಾಖಲೆ ಕುಸಿತ, ಬ್ಯಾಂಕಿಂಗ್‌ ಕ್ಷೇತ್ರದ ಖ್ಯಾತನಾಮರ ಪದತ್ಯಾಗ, ಆರ್ಥಿಕ ತಜ್ಞರ ಹುದ್ದೆ ತೆರವು, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹ 14 ಸಾವಿರ ಕೋಟಿ ವಂಚನೆ ಮುಂತಾದವು ಈ ವರ್ಷ ದೇಶಿ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರದಲ್ಲಿನ ಪ್ರಮುಖ ಏಳುಬೀಳುಗಳಾಗಿವೆ.

6ನೇ ಸಿರಿವಂತ ದೇಶ: ದೇಶದ ಜನರು ಹೊಂದಿರುವ ಒಟ್ಟಾರೆ ಸಂಪತ್ತಿನ ಲೆಕ್ಕದಲ್ಲಿ ಭಾರತ ವಿಶ್ವದಲ್ಲಿ ಸದ್ಯಕ್ಕೆ 6ನೇ ಸ್ಥಾನದಲ್ಲಿ ಇದೆ. ಭಾರತೀಯರ ಒಟ್ಟಾರೆ ಸಂಪತ್ತು ₹ 534 ಲಕ್ಷ ಕೋಟಿಗಳಷ್ಟಿದೆ.

ರೂಪಾಯಿ ಮೌಲ್ಯ ಕುಸಿತ: ಡಾಲರ್‌ ಎದುರು ರೂಪಾಯಿ ಮೌಲ್ಯದ ಕುಸಿತ ಸಾರ್ವಕಾಲಿಕ ದಾಖಲೆ (₹ 74.48) ಮಟ್ಟಕ್ಕೆ ತಲುಪಿತ್ತು. ಕಚ್ಚಾ ತೈಲ ಬೆಲೆ ಇಳಿಕೆಯಿಂದ ಇತ್ತೀಚಿಗೆ ಕೆಲ ಮಟ್ಟಿಗೆ ಚೇತರಿಸಿಕೊಂಡಿದೆ.

ಬ್ಯಾಂಕ್‌ಗಳ ವಿಲೀನ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ, ದೇನಾ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಸಾಲದ ಸುಳಿಗೆ ಸಿಲುಕಿರುವ ಬ್ಯಾಂಕಿಂಗ್‌ ಕ್ಷೇತ್ರದ ಬಲವರ್ಧನೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

‘ಪಿಎನ್‌ಬಿ’ಗೆ ಭಾರಿ ವಂಚನೆ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ₹ 14 ಸಾವಿರ ಕೋಟಿ ವಂಚನೆ ಎಸಗಿರುವುದು ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಅತಿದೊಡ್ಡ ಹಗರಣವಾಗಿದೆ.

ಆಸ್ತಿ ಮುಟ್ಟುಗೋಲು: ಆರ್ಥಿಕ ಅಪರಾಧ ಎಸಗಿ ದೇಶ ಬಿಟ್ಟು ಪರಾರಿಯಾಗುವ ಘೋಷಿತ ಅಪರಾಧಿ
ಗಳು ಮತ್ತು ಸುಸ್ತಿದಾರರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ವಂಚಕರಿಗೆ ಪಾಠವಾಗಿರಲಿದೆ.

ಫ್ಲಿಪ್‌ಕಾರ್ಟ್‌ ಮಾರಾಟ: ಬೆಂಗಳೂರಿನ ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿನ ಶೇ 77ರಷ್ಟು ಪಾಲು ಬಂಡವಾಳವನ್ನು, ಅಮೆರಿಕದ ರಿಟೇಲ್‌ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ ಇಂಕ್‌ ₹ 1.07 ಲಕ್ಷ ಕೋಟಿಗೆ ಖರೀದಿಸಿದೆ. ಅತಿದೊಡ್ಡ ಮೊತ್ತದ ಸ್ವಾಧೀನ ಪ್ರಕ್ರಿಯೆಗಳಲ್ಲಿ ಇದೂ ಒಂದು.

ಅಂಚೆ ಇಲಾಖೆ ಪೇಮೆಂಟ್ಸ್‌ ಬ್ಯಾಂಕ್‌:ಸರ್ಕಾರಿ ಸ್ವಾಮ್ಯದ ಭಾರತೀಯ ಅಂಚೆ ಪಾವತಿ ಬ್ಯಾಂಕ್‌, ಬ್ಯಾಂಕಿಂಗ್‌ ಸೌಲಭ್ಯ ವಂಚಿತರ ನೆರವಿಗೆ ಬಂದಿದೆ.

ಹೊಸ ಸಿಇಎ: ಹೈದರಾಬಾದ್‌ನ ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್‌ನ ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿ (ಸಿಇಎ) ನೇಮಕಗೊಂಡಿದ್ದಾರೆ.

ರಾಜೀನಾಮೆ ಪರ್ವ

ಹಲವಾರು ಕಾರಣಗಳಿಗೆ ತಾವು ನಿರ್ವಹಿಸುತ್ತಿದ್ದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ ಖ್ಯಾತನಾಮರಲ್ಲಿ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌, ಫ್ಲಿಪ್‌ಕಾರ್ಟ್‌ನ ಬನ್ಸಲ್‌, ಐಸಿಐಸಿಐ ಬ್ಯಾಂಕ್‌ನ ಚಂದಾ ಕೊಚ್ಚರ್‌, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಇದ್ದಾರೆ.

ಉರ್ಜಿತ್‌ ಪಟೇಲ್ ರಾಜೀನಾಮೆ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್ ಅವರು ಹಠಾತ್ತಾಗಿ ರಾಜೀನಾಮೆ ನೀಡಿರುವುದು ಅಚ್ಚರಿದಾಯಕ ವಿದ್ಯಮಾನಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಸೇವಾವಧಿ ಪೂರ್ಣಗೊಳ್ಳುವ ಮೊದಲೇ ಗವರ್ನರ್‌ ಹುದ್ದೆಯಲ್ಲಿದ್ದವರು ರಾಜೀನಾಮೆ ನೀಡಿದ ಎರಡನೆ ನಿದರ್ಶನ ಇದಾಗಿದೆ. ಕೇಂದ್ರೀಯ ಬ್ಯಾಂಕ್‌ನ ಮೀಸಲು ನಿಧಿಯಲ್ಲಿನ ಹೆಚ್ಚುವರಿ ಹಣವನ್ನು ತನಗೆ ನೀಡಬೇಕು ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿತ್ತು. ಆರ್‌ಬಿಐನ ಸ್ವಾಯತ್ತತೆಗೆ ಧಕ್ಕೆ ತರುವ ಯತ್ನ ಇದಾಗಿದೆ ಎಂದು ಪಟೇಲ್‌ ನಿಲುವು ತಳೆದಿದ್ದರು. ಈ ಸಂಘರ್ಷದ ಫಲವಾಗಿಯೇ ಅವರು ಹುದ್ದೆ ತೊರೆಯಬೇಕಾಯಿತು.

ಶಕ್ತಿಕಾಂತ್‌ ದಾಸ; ಹೊಸ ಗವರ್ನರ್‌

ಪಟೇಲ್‌ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಕೇಂದ್ರ ಸರ್ಕಾರದ ಮಾಜಿ ಅಧಿಕಾರಿ ಶಕ್ತಿಕಾಂತ್‌ ದಾಸ್‌ ಅವರು, 2016ರಲ್ಲಿ ನಡೆದಿದ್ದ ಗರಿಷ್ಠ ಮುಖಬೆಲೆಯ ನೋಟು ರದ್ದು ನಿರ್ಧಾರ ಮತ್ತು ನಂತರ ಉದ್ಭವಿಸಿದ್ದ ನಗದು ಬಿಕ್ಕಟ್ಟು ಪರಿಹರಿಸುವ ಗುರುತರ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದವರು. ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನ ಇತಿಹಾಸ ಪದವೀಧರರಾಗಿರುವ ಇವರು 1980ರ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು.

ಅರವಿಂದ್‌ ರಾಜೀನಾಮೆ

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅವರೂ ತಮ್ಮ ಸೇವಾವಧಿ ಪೂರ್ಣಗೊಳ್ಳುವ ಮೊದಲೇ ಹಣಕಾಸು ಸಚಿವಾಲಯದಿಂದ ನಿರ್ಗಮಿಸಿದರು. ಕೌಟುಂಬಿಕ ಕಾರಣಗಳಿಗಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಫ್ಲಿಪ್‌ಕಾರ್ಟ್‌ನ ಸಿಇಒ ಬಿನ್ನಿ ಬನ್ಸಲ್‌ ಪದತ್ಯಾಗ

ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಿಇಒ ಬಿನ್ನಿ ಬನ್ಸಲ್‌ ಅವರು ತಮ್ಮ ವಿರುದ್ಧ ಕೇಳಿ ಬಂದಿದ್ದ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ಆರೋಪಗಳ ಕಾರಣಕ್ಕೆ ರಾಜೀನಾಮೆ ನೀಡಬೇಕಾಯಿತು. ಜಾಗತಿಕ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ ಸ್ವಾಧೀನಪಡಿಸಿಕೊಂಡ 6 ತಿಂಗಳಲ್ಲಿ ಈ ಬೆಳವಣಿಗೆ ನಡೆದಿತ್ತು. ಬಿನ್ನಿ ಬನ್ಸಲ್‌ ಅವರು, ಸಚಿನ್‌ ಬನ್ಸಲ್‌ ಜತೆಗೂಡಿ ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಆನ್‌ಲೈನ್‌ ಮಾರಾಟ ಮಳಿಗೆ ಫ್ಲಿಪ್‌ಕಾರ್ಟ್‌ಗೆ ಚಾಲನೆ ನೀಡಿದ್ದರು.

‘ಐಎಲ್‌ ಆ್ಯಂಡ್‌ ಎಫ್‌ಎಸ್‌’ ಬಿಕ್ಕಟ್ಟು

ಮೂಲಸೌಕರ್ಯ ಯೋಜನೆಗಳಿಗೆ ದೀರ್ಘಾವಧಿಯ ಸಾಲ ಸೌಲಭ್ಯ ಒದಗಿಸುವ ಇನ್‌ಫ್ರಾಸ್ಟಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಎಲ್‌ಆ್ಯಂಡ್‌ಎಫ್‌ಎಸ್‌) ಸಾಲದ ಸುಳಿಗೆ ಸಿಲುಕಿ ಹಣಕಾಸು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು.ಸಾಲ ಮರುಪಾವತಿ ಮಾಡದ ಬಿಕ್ಕಟ್ಟು ಎದುರಿಸುತ್ತಿರುವ ಇದನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಖಾಸಗಿ ಬ್ಯಾಂಕ್‌ಗಳಿಗೂ ಹಬ್ಬಿದ ಪಿಡುಗು

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ವಂಚನೆ, ವಸೂಲಾಗದ ಸಾಲದ ಪ್ರಮಾಣ ಹೆಚ್ಚಳ ಮತ್ತಿತರ ಪಿಡುಗುಗಳು ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಿಗೂ ಹಬ್ಬಿ ಕೆಲವರ ತಲೆದಂಡಕ್ಕ ಈ ವರ್ಷ ಸಾಕ್ಷಿಯಾಯಿತು. ‘ಸ್ವಹಿತಾಸಕ್ತಿ ಸಂಘರ್ಷ’ದ ಆರೋಪ ಕೇಳಿ ಬಂದಿದ್ದರಿಂದ ಐಸಿಐಸಿಐ ಬ್ಯಾಂಕ್‌ ಸಿಇಒ ರಾಜೀನಾಮೆ ನೀಡಬೇಕಾಯಿತು. ಆ್ಯಕ್ಸಿಸ್‌ ಬ್ಯಾಂಕ್‌ ಮುಖ್ಯಸ್ಥೆ ಮತ್ತು ಯೆಸ್ ಬ್ಯಾಂಕ್‌ ಸಿಇಒಗಳ ಸೇವಾವಧಿ ವಿಸ್ತರಣೆಗೆ ಆರ್‌ಬಿಐ ಅನುಮತಿ ನೀಡಲಿಲ್ಲ.

ಚಂದಾ ಕೊಚ್ಚರ್‌ ರಾಜೀನಾಮೆ

ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ಚಂದಾ ಕೊಚ್ಚರ್‌ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ವಿಡಿಯೊಕಾನ್‌ ಸೇರಿದಂತೆ ಕೆಲ ಸಾಲ ಮಂಜೂರಾತಿ ಪ್ರಕರಣಗಳಲ್ಲಿ ಅವರ ವಿರುದ್ಧ ‘ಹಿತಾಸಕ್ತಿ ಸಂಘರ್ಷ’ದ ದೂರುಗಳು ಕೇಳಿ ಬಂದಿದ್ದವು. ಕೊಚ್ಚರ್‌ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಂದೀಪ್‌ ಬಕ್ಷಿ ಅವರನ್ನು ನೇಮಿಸಲಾಗಿದೆ.

ಶಿಖಾ ಶರ್ಮಾಗೆ ಸಿಗದ ವಿಸ್ತರಣೆ

ಆ್ಯಕ್ಸಿಸ್‌ ಬ್ಯಾಂಕ್‌ನ ಸಿಇಒ ಶಿಖಾ ಶರ್ಮಾ ಅವರಿಗೆ ಎರಡನೆ ಬಾರಿಗೆ ಸೇವಾವಧಿ ವಿಸ್ತರಿಸುವ ಪ್ರಸ್ತಾವನೆಯನ್ನು ಆರ್‌ಬಿಐ ತಳ್ಳಿ ಹಾಕಿತ್ತು. ಸಾಲ ನಿರ್ವಹಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಸಮರ್ಪಕವಾಗಿ ಪಾಲನೆ ಮಾಡದಿರುವುದೇ ಇದಕ್ಕೆ ಕಾರಣವಾಗಿತ್ತು.

ರಾಣಾ ಕಪೂರ್‌ ಹಣೆಬರಹವೂ ಇದೆ

ಯೆಸ್‌ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್‌ ಅವರಿಗೂ ಶಿಖಾ ಶರ್ಮಾಗೆ ಒದಗಿದ ಗತಿಯೇ ಒದಗಿದೆ. ಇವರ ಸೇವಾವಧಿ ವಿಸ್ತರಣೆಗೂ ಆರ್‌ಬಿಐ ಮಣೆ ಹಾಕಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT