ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯಲ್ಲೂ ‘ಗೇರು’ ಮೆರುಗು!

ಬೆಳೆ ಪ್ರದೇಶ ವಿಸ್ತರಣೆಗೆ ಮುಂದಾದ ಇಲಾಖೆ; ರೈತರಿಂದ ಉತ್ತಮ ಸ್ಪಂದನೆ
Last Updated 1 ಜೂನ್ 2019, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇವಲ ಕರಾವಳಿ, ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಗೇರು (ಗೋಡಂಬಿ) ಕೃಷಿ, ಈಗ ಬಯಲು ಸೀಮೆಗೂ ವ್ಯಾಪಿಸಿದೆ. ಗೇರು ಬೆಳೆ ಪ್ರದೇಶ ವಿಸ್ತರಣೆ ಮೂಲಕ ರೈತರ ಜೇಬು ತುಂಬಿಸುವ ತೋಟಗಾರಿಕೆ ಇಲಾಖೆ ಪ್ರಯತ್ನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.

ಕಳೆದ ಎರಡು ವರ್ಷಗಳಲ್ಲಿ 37 ಮಂದಿ ರೈತರು ಗೇರು ಬೆಳೆಯಲು ಮುಂದಾಗಿದ್ದು, 112 ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ.

‘ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಗೇರು ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಅಷ್ಟು ಪ್ರಮಾಣದ ಉತ್ಪಾದನೆ ಇಲ್ಲದ ಕಾರಣ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಅದನ್ನು ತಪ್ಪಿಸಲು, 2017ರಿಂದ ರಾಜ್ಯದ 30 ಜಿಲ್ಲೆಗಳಲ್ಲೂ ಗೇರು ಬೆಳೆಯಲು ಉತ್ತೇಜನ ನೀಡಲು ಆರಂಭಿಸಿದ್ದೇವೆ’ ಎಂದು ಇಲ್ಲಿನ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಎಸ್.ಪ್ರಭುರಾಜ್ ಹೇಳುತ್ತಾರೆ.

‘ಉಷ್ಣವಲಯದ ಬೆಳೆಯಾದ ಗೇರು, ಮಾವಿನ ರೀತಿಯೇ ಅನಾಕಾರ್ಡೇಶಿಯಾ ಸಸ್ಯ ಪ್ರಬೇಧಕ್ಕೆ ಸೇರಿದೆ. ಸಾಮಾನ್ಯವಾಗಿ ಮಾವು ಬೆಳೆಯುವ ಎಲ್ಲ ಪ್ರದೇಶದಲ್ಲೂ ಗೇರು ಬೆಳೆಯಬಹುದು. ಕೆಂಪು ಮಣ್ಣು ಹಾಗೂ ಕೆಂಪು ಮಣ್ಣು ಮಿಶ್ರಿತ ಮರಳು ಭೂಮಿಯಲ್ಲಿ ಗೇರು ಚೆನ್ನಾಗಿ ಬೆಳೆಯುತ್ತದೆ. ಆದರೆ ನೀರು ಬಸಿದು ಹೋಗುವಂತಿರಬೇಕು. ವೆಂಗುಲಾ 3, 4, 7, 8 ಹಾಗೂ ಉಳ್ಳಾಲ 1, 2, 3, 4 ತಳಿಯ ಗೇರು ಬಯಲು ಸೀಮೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. 7x7 ವಿಸ್ತೀರ್ಣದಲ್ಲಿ ಪ್ರತಿ ಹೆಕ್ಟೇರ್‌ಗೆ 204 ಗಿಡಗಳನ್ನು ನಾಟಿ ಮಾಡಲಾಗುತ್ತಿದೆ. ಐದು ವರ್ಷಗಳಲ್ಲಿ ಫಲ ನೀಡಲು ಆರಂಭಿಸುತ್ತವೆ’ ಎನ್ನುತ್ತಾರೆ.

ಇಲಾಖೆಯಿಂದ ಸಹಾಯ ಧನ:ಅರ್ಧ ಎಕರೆಯಿಂದ 10 ಎಕರೆವರೆಗೆ ಗೇರು ಬೆಳೆಯುವವರಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಗೇರು ಬೆಳೆಯಲು ಪ್ರತಿ ಎಕರೆಗೆ ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಹಾಯಧನ (₹33,492), ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ 90ರಷ್ಟು ಸಹಾಯಧನ (₹66,286) ನೀಡಲಾಗುವುದು. ಸಸಿ ಕೊಳ್ಳಲು, ಪಾತಿ ಮಾಡಲು, ಹನಿ ನೀರಾವರಿ ವ್ಯವಸ್ಥೆ, ನಾಟಿ ಮಾಡಿದ ಎರಡು ವರ್ಷಗಳ ಅವಧಿವರೆಗೆ ಗಿಡಗಳ ಆರೈಕೆಗೆ ಉದ್ಯೋಗ ಖಾತರಿಯಡಿ ನೆರವು ನೀಡಲಾಗುತ್ತಿದೆ.

ತೋಟಗಾರಿಕೆ ವಿ.ವಿ ನೆರವು:ತಾಂತ್ರಿಕ ನೆರವು ನೀಡುವ ಮೂಲಕ ಗೇರು ಬೆಳೆ ಉತ್ತೇಜನಕ್ಕೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೂಡ ಕೈ ಜೋಡಿಸಿದೆ. ಈಗಾಗಲೇ ನಾಟಿ ಮಾಡಿ ಚೆನ್ನಾಗಿ ಬೆಳೆ ಬಂದಿರುವ ಹೊಲಗಳಿಗೆ ಹೊಸ ರೈತರನ್ನು ಕರೆದೊಯ್ದು ಪ್ರಾತ್ಯಕ್ಷಿಕೆ ನೀಡುವ ಜೊತೆಗೆ ಗೇರು ಕೃಷಿಗೆ ಸಂಬಂಧಿಸಿದ ತರಬೇತಿ, ತಜ್ಞರೊಂದಿಗೆ ಸಂವಾದ ಆಯೋಜಿಸುತ್ತಿದೆ.

ಸಂಸ್ಕರಣೆಗೆ ಎನ್‌ಎಚ್‌ಎಂ ನೆರವು
‘ಬೆಳೆಗಾರರು ವೈಯಕ್ತಿಕವಾಗಿ ಗೇರು ಸಂಸ್ಕರಣಾ ಘಟಕ ಆರಂಭಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‌ಎಚ್‌ಎಂ) ಆರ್ಥಿಕ ನೆರವು ನೀಡಲಿದೆ. ಕಟ್ಟಡ ನಿರ್ಮಾಣ, ಯಂತ್ರೋಪಕರಣ ಕೊಳ್ಳಲು ಸಹಾಯಧನ ಕೊಡಲಾಗುವುದು. 20ರಿಂದ 25 ಎಕರೆಯಷ್ಟು ಗೇರು ಬೆಳೆಯುವವರು ಸಂಸ್ಕರಣಾ ಘಟಕ ಆರಂಭಿಸಿದಲ್ಲಿ ಅನುಕೂಲವಾಗಲಿದೆ. ಸಂಸ್ಕರಣೆಗೆ ಸಂಬಂಧಿಸಿದಂತೆ ಇಲಾಖೆಯಿಂದಲೇ ಸೂಕ್ತ ತರಬೇತಿ ಕೊಡಿಸಲಾಗುವುದು’ ಎಂದು ಪ್ರಭುರಾಜ್ ಹೇಳುತ್ತಾರೆ.

*
ನಿರಂತರವಾಗಿ ಕಬ್ಬು, ಅರಿಸಿನ ಬೆಳೆದು ಭೂಮಿ ಜೌಗು ಮಾಡಿಕೊಳ್ಳುವ ಬದಲು ಗೇರು ಬೆಳೆಯುವಂತೆ ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.
–ಎಚ್.ಎಸ್.ಪ್ರಭುರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT