ಭಾನುವಾರ, ಡಿಸೆಂಬರ್ 4, 2022
19 °C

ಬ್ಯಾಂಕಿಂಗ್ ವಂಚನೆ ಪ್ರಕರಣ: ಸಿಬಿಐನಿಂದ ರಿಷಿ ಅಗರ್ವಾಲ್ ಬಂಧನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: 28 ಬ್ಯಾಂಕ್‌ಗಳಿಗೆ ₹ 22,848 ಕೋಟಿ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಿಷಿ ಅಗರ್ವಾಲ್ ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. 

ಬ್ಯಾಂಕ್‌ಗಳಿಗೆ ವಂಚಿಸಿರುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ ದಾಖಲಿಸಿಕೊಂಡಿರುವ ಅತಿದೊಡ್ಡ ಮೊತ್ತದ ಪ್ರಕರಣ ಇದು. 

ಸಿಬಿಐ ಅಧಿಕಾರಿಗಳು ಅಗರ್ವಾಲ್ ಅವರನ್ನು ಹಲವು ಬಾರಿ ವಿಚಾರಣೆಗೆ ಒಳಪಡಿಸಿದ್ದರು. ಹಣದ ವರ್ಗಾವಣೆಗೆ ಸಂಬಂಧಿಸಿದ ವಿವಿಧ ಆಯಾಮಗಳ ಕುರಿತು ಮುಂದಿನ ದಿನಗಳಲ್ಲಿ ಕೂಡ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.

ಆರೋಪಿ ಸ್ಥಾನದಲ್ಲಿ ನಿಂತಿರುವ ಕಂಪನಿಯ ಖಾತೆಗಳ ಪುಸ್ತಕ ಹಾಗೂ ಇತರ ಕೆಲವು ಮಹತ್ವದ ದಾಖಲೆಗಳು ದೊರೆತಿವೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದರು. ಈ ವಂಚನೆಯ ವಿಚಾರವಾಗಿ ಬ್ಯಾಂಕ್‌ಗಳ ಕಡೆಯಿಂದ 2019ರ ನವೆಂಬರ್ 8ರಂದು ಮೊದಲ ದೂರು ದಾಖಲಾಗಿತ್ತು. ದೂರಿನ ವಿಚಾರವಾಗಿ ಕೆಲವು ಸ್ಪಷ್ಟನೆಗಳನ್ನು ಒದಗಿಸುವಂತೆ ಸಿಬಿಐ 2020ರ ಮಾರ್ಚ್ 12ರಂದು ಕೋರಿತ್ತು.

2020ರ ಆಗಸ್ಟ್‌ನಲ್ಲಿ ಬ್ಯಾಂಕ್‌ಗಳು ಹೊಸದಾಗಿ ದೂರು ಸಲ್ಲಿಸಿದವು. ದೂರನ್ನು ಪರಿಶೀಲಿಸಿದ ಸಿಬಿಐ ಒಂದೂವರೆ ವರ್ಷದ ನಂತರ, ಈ ವರ್ಷದ ಫೆಬ್ರುವರಿ 7ರಂದು, ಪ್ರಥಮ ಮಾಹಿತಿ ವರದಿ (ಎಫ್ಐಆರ್‌) ದಾಖಲಿಸಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು