ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಕ್ಷೇತ್ರ ಬಲ ತುಂಬುವುದೇ ಆರ್‌ಬಿಐ?

Last Updated 18 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸಹಕಾರಿ ಬ್ಯಾಂಕ್‌ಗಳು ನಂಬಿಕೆ ಆಧಾರದ ಮೇಲೆ ನಡೆಯುತ್ತವೆ. ಈ ಬ್ಯಾಂಕುಗಳು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಹಣಕಾಸಿನ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿವೆ. ಆದರೆ, ಇತ್ತೀಚೆಗೆ ನಡೆದಿರುವ ಎರಡು ಬೆಳವಣಿಗೆಗಳು ಠೇವಣಿದಾರರ ನಿದ್ದೆಗೆಡಿಸಿದೆ.

ಮಹಾರಾಷ್ಟ್ರದ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ) ಮತ್ತು ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿದ್ದು, ಗ್ರಾಹಕರಿಗೆ ಠೇವಣಿ ಪಡೆಯಲು ಮಿತಿ ಹೇರಿದೆ. ಇದರಿಂದ ಠೇವಣಿದಾರರು ಅದರಲ್ಲಿಯೂ ನಿವೃತ್ತಿ ಜೀವನ ಸಾಗಿಸುತ್ತಿರುವವರು ಬಹಳಷ್ಟು ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದಾರೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆಯುವ ಅವ್ಯವಹಾರ ಅಥವಾ ಅಕ್ರಮಗಳಿಂದಾಗಿ ಠೇವಣಿದಾರರು ತಮ್ಮದೇ ಹಣವನ್ನು ಅಗತ್ಯಬಿದ್ದಾಗ ಬೇಕಾದಷ್ಟು ಪಡೆಯದೇ ಇರುವ ವಾತಾವರಣ ನಿರ್ಮಾಣವಾಗಿದೆ. ಇದು ಸಹಕಾರಿ ಬ್ಯಾಂಕ್‌ಗಳ ಬಗ್ಗೆ ಜನಸಾಮಾನ್ಯರಲ್ಲಿ ಅಭದ್ರತೆಯ ಭಾವ ಮೂಡಿಸುತ್ತಿದೆ.

ಆರೋಪಗಳೇನು?

ಸಹಕಾರಿ ಬ್ಯಾಂಕ್‌ಗಳನ್ನು ರಾಜಕಾರಣಿಗಳು ಮತ್ತು ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಂತ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆ. ನಿರ್ದೇಶಕ ಮಂಡಳಿಗಳು ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳನ್ನು ಗಾಳಿಗೆ ತೂರುತ್ತಿವೆ. ವಸೂಲಾಗದ ಸಾಲದ (ಎನ್‌ಪಿಎ) ಹೊರೆ ಹೆಚ್ಚುತ್ತಿದೆ. ಠೇವಣಿದಾರರ ಹಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ. ಆಡಳಿತ ಮಂಡಳಿಯ ಅದಕ್ಷತೆ ಕಾರಣಕ್ಕೆ ಹಲವಾರು ಸಹಕಾರಿ ಬ್ಯಾಂಕ್‌ಗಳು ಗ್ರಾಹಕರ ಹಿತರಕ್ಷಣೆ ಮಾಡದೇ ವೈಫಲ್ಯದ ಹಾದಿಯಲ್ಲಿ ಸಾಗುತ್ತಿವೆ ಎನ್ನುವುದು ಅವುಗಳ ಮೇಲಿರುವ ಗಂಭೀರ ಆರೋಪಗಳಾಗಿವೆ.

ತಜ್ಞರು ಹೇಳುವುದೇನು?

‘ಒಂದೆರಡು ಸಹಕಾರಿ ಬ್ಯಾಂಕ್‌ಗಳಲ್ಲಿ ಸಮಸ್ಯೆ ಆಗಿದೆ ಎಂದಾಕ್ಷಣ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ಅಳೆಯಲು ಬರುವುದಿಲ್ಲ’ ಎಂದು ಸಹಕಾರಿ ವಲಯದ ಹೆಸರು ಹೇಳಲು ಇಚ್ಛಿಸದ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

'ಸಹಕಾರಿ ಬ್ಯಾಂಕ್‌ಗಳು ಮೊದಲಿನಿಂದಲೂ ಗ್ರಾಹಕರ ವಿಶ್ವಾಸ ಕಾಯ್ದುಕೊಂಡು ಬಂದಿವೆ. ಹಾಗಂತ ದುಡಿದಿದ್ದೆಲ್ಲವನ್ನೂ ಒಂದೇ ಕಡೆ ಉಳಿತಾಯ ಮಾಡುವುದು ಅಥವಾ ಹೂಡಿಕೆ ಮಾಡುವುದು ತಪ್ಪು. ₹ 50 ಲಕ್ಷ ಇದ್ದರೆ ಅದನ್ನು ಒಂದೇ ಕಡೆ ಇಡದೆ ಬೇರೆ ಬೇರೆ ಕಡೆ ಇಟ್ಟರೆ ಭವಿಷ್ಯದ ದೃಷ್ಟಿಯಿಂದ ಒಳಿತು’ ಎಂದು ಅವರು ಸಲಹೆ ನೀಡುತ್ತಾರೆ.

ಏನು ಮಾಡಬಹುದು

ಪ್ರತಿ ಮೂರು ತಿಂಗಳಿಗೊಮ್ಮೆ ಬ್ಯಾಂಕುಗಳು ತಮ್ಮ ವಹಿವಾಟಿನ ಪ್ರತಿಯೊಂದು ಮಾಹಿತಿಯನ್ನೂ ಆರ್‌ಬಿಐಗೆ ನೀಡಬೇಕು. ಆಗ ಮಾತ್ರವೇ ಬ್ಯಾಂಕ್‌ ವ್ಯವಹಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ಮತ್ತು ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ’ ಎಂದೂ ಅವರು ಸಲಹೆ ನೀಡಿದ್ದಾರೆ.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಹಕಾರಿ ಬ್ಯಾಂಕ್‌ಗಳನ್ನು ನಿಯಂತ್ರಿಸಲು ಆರ್‌ಬಿಐಗೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬ್ಯಾಂಕ್‌ಗಳನ್ನು ಹಗರಣಗಳಿಂದ ಮುಕ್ತಗೊಳಿಸಿ, ಗ್ರಾಹಕರ ಠೇವಣಿಗೆ ಹೆಚ್ಚಿನ ಭದ್ರತೆ ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ.

ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಈಚೆಗಷ್ಟೇ ಒಪ್ಪಿಗೆ ನೀಡಿದೆ.ಅದರಂತೆಆಡಳಿತಾತ್ಮಕ ವಿಷಯಗಳು ರಿಜಿಸ್ಟ್ರಾರ್‌ ಆಫ್‌ ಕೋ ಆಪರೇಟಿವ್‌ ಅಡಿಯಲ್ಲಿಯೇ ಮುಂದುವರಿಯಲಿವೆ. ಆದರೆ, ಆರ್‌ಬಿಐನ ಬ್ಯಾಂಕಿಂಗ್‌ ಮಾರ್ಗಸೂಚಿಯ ನಿಯಂತ್ರಣಕ್ಕೆ ಈ ಬ್ಯಾಂಕ್‌ಗಳು ಒಳಪಡಲಿವೆ. ಆರ್‌ಬಿಐ ನಿಯಮದಂತೆಯೇ ಲೆಕ್ಕಪತ್ರ ಪರಿಶೀಲನೆಯೂ ನಡೆಯಲಿದೆ ಎನ್ನುವುದು ಸದ್ಯಕ್ಕೆ ಸರ್ಕಾರವೇ ಹಂಚಿಕೊಂಡಿರುವ ಮಾಹಿತಿಯಾಗಿದೆ.

ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಸಿಇಒ ನೇಮಕಾತಿ ಪರಿಗಣಿಸಲಾಗುವುದು. ಆರ್‌ಬಿಐನ ಅನುಮತಿ ಇಲ್ಲದೇ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವಂತಿಲ್ಲ. ಸಾಲ ಮನ್ನಾ ವಿಷಯಗಳಲ್ಲಿ ಆರ್‌ಬಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.ಹಣಕಾಸಿನ ಬಿಕ್ಕಟ್ಟು ಎದುರಾದಾಗ ಯಾವುದೇ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾ ಮಾಡುವ ಅಧಿಕಾರ ಆರ್‌ಬಿಐ ಬಳಿ ಇರಲಿದೆ. ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿದಾಗ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ.

ಒಟ್ಟಾರೆಯಾಗಿ ಹಗರಣಗಳು ಕಡಿಮೆಯಾಗಿ ಜನರು ಇಡುವ ಠೇವಣಿಗೆ ಭದ್ರತೆ ಸಿಗುವಂತೆ ಮಾಡುವ ತುರ್ತು ಅಗತ್ಯ ಎದುರಾಗಿದೆ. ಇಲ್ಲವಾದರೆ ಸಹಕಾರಿ ಬ್ಯಾಂಕ್‌ಗಳ ಮೇಲೆ ಸಾರ್ವಜನಿಕರು ಇರಿಸಿರುವ ನಂಬಿಕೆ, ವಿಶ್ವಾಸಕ್ಕೆ ತೀವ್ರ ಧಕ್ಕೆ ಒದಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT