ಬುಧವಾರ, ಜನವರಿ 26, 2022
26 °C
ಗೃಹ ಬಳಕೆಯ ಸಿಲಿಂಡರ್‌ ದರ ಹೆಚ್ಚಳ ಇಲ್ಲ

ವಾಣಿಜ್ಯ ಎಲ್‌ಪಿಜಿ ದರ ಏರಿಕೆ ಉರಿ: ಒಂದೇ ತಿಂಗಳಲ್ಲಿ ₹366 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಣಿಜ್ಯ ಎಲ್‌ಪಿಜಿ ದರ ಏರಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಾದ ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್‌ ಪೆಟ್ರೋಲಿಯಂ ವಾಣಿಜ್ಯ ಬಳಕೆಯ 19 ಕೆ.ಜಿಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ ದರದಲ್ಲಿ ₹100 ಏರಿಕೆ ಮಾಡಿವೆ. ಡಿಸೆಂಬರ್‌ 1ರಿಂದು ಇದು ಜಾರಿಗೆ ಬಂದಿದೆ. ಕಳೆದ 30 ದಿನಗಳಲ್ಲಿ ಈ ಸಿಲಿಂಡರ್ ದರದಲ್ಲಿ ₹366 ಏರಿಕೆ ಆಗಿದೆ. ಈ ದರ ಏರಿಕೆಯಿಂದಾಗಿ ಹೋಟೆಲ್‌ನಲ್ಲಿ ಊಟ ಉಪಾಹಾರದ ದರದಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ.

19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್‌ ದರವು ಬೆಂಗಳೂರಿನಲ್ಲಿ ₹2,164, ದೆಹಲಿಯಲ್ಲಿ ₹2,051, ಮುಂಬೈನಲ್ಲಿ ₹2.174.50, ಕೋಲ್ಕತ್ತದಲ್ಲಿ ₹2,234.50 ಆಗಿದೆ. 

ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯಾಗಿದೆ.

ನವೆಂಬರ್‌ 1ರಂದು ಸಿಲಿಂಡರ್‌ ದರದಲ್ಲಿ ₹266 ಏರಿಕೆ ಮಾಡಲಾಗಿತ್ತು. 

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಮುಖ್ಯವಾಗಿ ಹೋಟೆಲ್‌ಗಳು ಮತ್ತು ಸಣ್ಣ ಚಹಾದಂಗಡಿಗಳಲ್ಲಿ ಬಳಕೆ ಆಗುತ್ತವೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಲ್ಲಿ ತೀವ್ರ ಏರಿಕೆ ಆಗಿರುವುದರ ನಡುವಲ್ಲಿಯೇ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ದೊಡ್ಡ ಏರಿಕೆ ಆಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಇದ್ದ ಎಕ್ಸೈಸ್‌ ಸುಂಕವನ್ನು ಕೇಂದ್ರ ಮತ್ತು ವ್ಯಾಟ್‌ ಅನ್ನು ರಾಜ್ಯವು ಇತ್ತೀಚೆಗೆ ಕಡಿತ ಮಾಡಿತ್ತು. ಹೀಗಾಗಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಇಳಿಕೆ ಆಗಿದೆ. 

ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಪ್ರತಿ ತಿಂಗಳೂ ಪರಿಷ್ಕರಿಸಲಾಗುತ್ತದೆ. 

ಗೃಹ ಬಳಕೆಯ 14.2 ಕೆ.ಜಿ.ಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಏರಿಕೆ ಆಗಿಲ್ಲ. ಐದು ಕೆ.ಜಿಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿಯೂ ಯಾವುದೇ ವ್ಯತ್ಯಾಸ ಆಗಿಲ್ಲ. 

ಜಿಎಸ್‌ಟಿ ವರಮಾನ ಹೆಚ್ಚಳ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ನವೆಂಬರ್‌ನಲ್ಲಿ ₹1.31 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆಯು 2017ರ ಏಪ್ರಿಲ್‌ನಲ್ಲಿ ಅನುಷ್ಠಾನಕ್ಕೆ ಬಂದ ನಂತರ ಸಂಗ್ರಹ ಆಗಿರುವ ಎರಡನೆಯ ಅತಿಹೆಚ್ಚಿನ ಮೊತ್ತ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.

ಜಿಎಸ್‌ಟಿ ವರಮಾನ ಸಂಗ್ರಹವು ಜುಲೈ ತಿಂಗಳಿನಿಂದಲೂ ₹1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಇದೆ. ನವೆಂಬರ್‌ನಲ್ಲಿ ಆಗಿರುವ ಜಿಎಸ್‌ಟಿ ವರಮಾನ ಸಂಗ್ರಹವು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಶೇ 25ರಷ್ಟು ಏರಿಕೆ ಆಗಿದೆ. 2019ರ ನವೆಂಬರ್‌ಗೆ ಹೋಲಿಸಿದರೆ ಶೇ 27ರಷ್ಟು ಹೆಚ್ಚಾಗಿದೆ.

ದರ ಇಳಿಸುವಂತೆ ಪ್ರಧಾನಿಗೆ ಪತ್ರ

ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆ ಮತ್ತೆ ಮಾಡಬಾರದಿತ್ತು. ಈಗಿನ ದರವೇ ಹೋಟೆಲ್ ಉದ್ಯಮಕ್ಕೆ ಹೊರೆಯಾಗಿದೆ. ಹೋಟೆಲ್‌ಗಳ ಉಳಿವಿಗಾಗಿ ಇತ್ತೀಚೆಗಷ್ಟೇ ಆಹಾರಗಳ ದರಗಳನ್ನು ಅನಿವಾರ್ಯವಾಗಿ ಏರಿಸಲಾಗಿದೆ. ಅಗತ್ಯ ವಸ್ತುಗಳು ಹಾಗೂ ಪೆಟ್ರೋಲ್‌, ಡೀಸೆಲ್‌ ದರಗಳ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಹಾಗಾಗಿ, ಮತ್ತೆ ಆಹಾರ ದರಗಳನ್ನು ಏರಿಸುವ ಉದ್ದೇಶವಿಲ್ಲ. ಸಿಲಿಂಡರ್ ದರ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸಾಮಾನ್ಯವಾಗಿ ಈ ಅವಧಿಯಲ್ಲಿ ಸಿಲಿಂಡರ್ ದರ ಏರುವುದರಿಂದ ಒಂದು ತಿಂಗಳವರೆಗೆ ಕಾಯುತ್ತೇವೆ. ಅಷ್ಟರಲ್ಲಿ ದರ ಇಳಿದರೆ ಒಳ್ಳೆಯದು. ಒಂದು ವೇಳೆ ದರ ಏರಿಕೆ ಇದೇ ರೀತಿ ಮುಂದುವರಿದರೆ, ನಮ್ಮ ಮುಂದಿನ ನಿರ್ಧಾರವೂ ಬದಲಾಗಲಿದೆ.

–ಚಂದ್ರಶೇಖರ ಹೆಬ್ಬಾರ್, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು