ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3 | ಹಾರಿದ ರಾಕೇಟಿಗೆ ನೆರವಾದ ಕಂಪನಿಗಳ ಷೇರು ಬೆಲೆ ಏರುವ ನಿರೀಕ್ಷೆ

Published 21 ಜುಲೈ 2023, 7:23 IST
Last Updated 21 ಜುಲೈ 2023, 7:23 IST
ಅಕ್ಷರ ಗಾತ್ರ

ಮುಂಬೈ: ಭಾರತದ 140ಕೋಟಿ ಜನರ ಆಶೋತ್ತರಗಳೊಂದಿಗೆ ಇತ್ತೀಚೆಗೆ ನಭಕ್ಕೆ ಚಿಮ್ಮಿದ ಚಂದ್ರಯಾನ–3 ಯೋಜನೆಯಲ್ಲಿ ಇಸ್ರೊದೊಂದಿಗೆ ಕೈಜೋಡಿಸಿದ ಹಲವು ಕಂಪನಿಗಳು ಷೇರುಗಳ ಕುರಿತು ಹೂಡಿಕೆದಾರರು ಕುತೂಹಲದಿಂದ ನೋಡುತ್ತಿದ್ದಾರೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಇವುಗಳ ಬೆಲೆಯೂ ಏರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪಂಡಿತರು ವಿಶ್ಲೇಷಿಸಿದ್ದಾರೆ.

ನೌಕೆಯನ್ನು ಸರಿಯಾದ ಕಕ್ಷೆ ಸೇರಿಸುವಲ್ಲಿ ನೆರವಾಗುವ ತಂತ್ರಾಂಶವನ್ನು ಸಿದ್ಧಪಡಿಸಿದ ಟಾಟಾ ಎಲೆಕ್ಸಿ ಕಂಪೆನಿಯ ಷೇರು ಸದ್ಯ ಇಳಿಮುಖದಲ್ಲಿದೆ. ಉಡ್ಡಯನವಾದ ಜಲೈ 14ರಂದು ಕಂಪನಿಯ ಒಂದು ಷೇರಿನ ಬೆಲೆ ₹7600 ಇತ್ತು. ಅದು ಶುಕ್ರವಾರ ಬೆಳಿಗ್ಗೆ ₹7360ಕ್ಕೆ ಇಳಿದಿದೆ.

ಚಂದ್ರಯಾನ–3ರ ಲ್ಯಾಂಡರ್‌ ಅಭಿವೃದ್ಧಿಪಡಿಸಿದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಂನ ಷೇರು ಅಷ್ಟಾಗಿ ಕ್ರಿಯಾತ್ಮಕವಾಗಿಲ್ಲದಿದ್ದರೂ, ಯೋಜನೆಯ ನಂತರ ಈ ಷೇರುಗಳತ್ತ ಮುಖ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದೆನ್ನಲಾಗಿದೆ. ಈ ಷೇರು ಶೇ 7ರ ವೃದ್ಧಿ ದರದಲ್ಲಿ ₹14.95 ಇದೆ.

ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರದಲ್ಲಿನ ಲ್ಯಾಂಚ್‌ಪ್ಯಾಡ್‌ ನಿರ್ಮಿಸಿದ ಎಲ್‌ ಆ್ಯಂಡ್‌ ಟಿ ಕಂಪನಿಯು ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ಶುಕ್ರವಾರ ₹2557ರಲ್ಲಿ ಲಭ್ಯ. ಜುಲೈ 14ರಂದು ಈ ಷೇರಿನ ಬೆಲೆ ₹2460 ಇತ್ತು.

ಶಕ್ತಿಶಾಲಿ ಮಾರ್ಕ್‌–3 ರಾಕೇಟಿನ ಎಂಜಿನ್‌ ಮತ್ತು ಕೋರ್‌ ಪಂಪ್‌ಗಳನ್ನು ಸಿದ್ಧಪಡಿಸಿದ ಎಂಟಿಎಆರ್‌ ಟೆಕ್‌ನ ಷೇರು ಕೂಡಾ ಏರುಮುಖವಾಗಿದೆ. ಜುಲೈ 14ರಂದು ಇದರ ಒಂದು ಷೇರಿನ ಬೆಲೆ ₹2120 ಇತ್ತು. ಅದು ಶುಕ್ರವಾರ ಬೆಳಿಗ್ಗೆ ₹2124ಕ್ಕೆ ಏರಿಕೆಯಾಗಿದೆ.

ಲ್ಯಾಂಡರ್ ಹಾಗೂ ರೋವರ್‌ ಹೊತ್ತೊಯ್ಯುವ ಪೇಲೋಡ್‌ ಸಿದ್ಧಪಡಿಸಿದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಷೇರು ಶುಕ್ರವಾರ ₹125ರ ಆಸುಪಾಸಿನಲ್ಲಿದೆ. ಇದು ಕೂಡಾ ಬೆಳವಣಿಗೆಯ ಹಾದಿಯಲ್ಲಿದೆ.

ಲ್ಯಾಂಡರ್ ಸಿದ್ಧಪಡಿಸುವುದು ಹಾಗೂ ಇತರ ಮೆಕ್ಯಾನಿಕಲ್ ಭಾಗಗಳನ್ನು ಸಜ್ಜುಗೊಳಿಸುವಲ್ಲಿ ನೆರವಾಗಿರುವ ಹಿಂದೂಸ್ಥಾನ್ ಏರೊನಾಟಿಕ್ಸ್‌ ಲಿಮಿಟೆಡ್ (ಎಚ್ಎಎಲ್‌) ನ ಒಂದು ಷೇರಿನ ಬೆಲೆ ಶುಕ್ರವಾರ ₹3873 ಇದೆ. ತೇಜಸ್‌ ವಿಮಾನದ ಮಾರಾಟ ಹಾಗೂ ಇನ್ನಿತರ ಪ್ರಗತಿಯಿಂದಾಗಿ ಎಚ್‌ಎಎಲ್‌ನ ಒಂದು ಷೇರಿನ ಬೆಲೆ ಏರುಮುಖವಾಗಿದೆ. ಉಡ್ಡಯನದ ದಿನ ಈ ಷೇರಿನ ಬೆಲೆ ₹3840 ಇತ್ತು.

ಬಾಹ್ಯಾಕಾಶ ಯಾನದಲ್ಲಿನ ಉಪಕರಣದ ಎಲೆಕ್ಟ್ರಾನಿಕ್‌ ಭಾಗಗಳನ್ನು ಅಭಿವೃದ್ಧಿಪಡಿಸಿದ ಸೆಂಟಮ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಒಂದು ಷೇರಿನ ಬೆಲೆ ಶುಕ್ರವಾರ ₹1396ರಲ್ಲಿದೆ.

ಹಿಂದಿನ ಆರು ದಿನಗಳ ಉತ್ತಮ ಸ್ಥಿತಿಯ ನಂತರ ಷೇರು ಮಾರುಕಟ್ಟೆ ಶುಕ್ರವಾರ ಕುಸಿತ ಕಂಡಿದೆ. ಸೆನ್ಸೆಕ್ಸ್‌ 750 ಅಂಶಗಳಷ್ಟು ಹಾಗೂ ನಿಫ್ಟಿ 50 ಇಂಡೆಕ್ಸ್‌ 190 ಅಂಶಗಳಷ್ಟು ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT