ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ: ಹೆಚ್ಚಿನ ವಹಿವಾಟು ನಿರೀಕ್ಷೆಯಲ್ಲಿರುವ ಉದ್ದಿಮೆಗಳಿಗೆ ದುಬಾರಿಯಾದ ಸಾಲ

ಬಂಡವಾಳದ ಸಮಸ್ಯೆ
Last Updated 13 ಜನವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕದ ಅವಧಿಯಲ್ಲಿ ವಹಿವಾಟು ಇಲ್ಲದೆ ಬಸವಳಿದಿದ್ದ ರಾಜ್ಯದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳು ಈಗ ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ.

ಹಣದುಬ್ಬರ ಏರಿಕೆಯನ್ನು ನಿಯಂತ್ರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ 2022ರ ಮೇ ತಿಂಗಳಿನಿಂದ ರೆಪೊ ದರವನ್ನು ಹೆಚ್ಚಿಸುತ್ತ ಬಂದಿದೆ. ಇದರ ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿ ದರವು ಹೆಚ್ಚಾಗಿದೆ. ಇದು ಕೂಡ ಎಂಎಸ್‌ಎಂಇ ವಲಯದ ಉದ್ದಿಮೆಗಳ ಪಾಲಿಗೆ ಬಂಡವಾಳ ಸಂಗ್ರಹವನ್ನು ದುಬಾರಿಯಾಗಿಸಿದೆ.

‘ಕೋವಿಡ್‌ನಿಂದಾಗಿ ಸೃಷ್ಟಿಯಾಗಿದ್ದ ಹಲವು ಅನಿಶ್ಚಿತತೆಗಳು ಈಗ ಮರೆಗೆ ಸರಿದಿವೆ. ಮುಂದಿನ ದಿನಗಳಲ್ಲಿ ವಹಿವಾಟು ಚೆನ್ನಾಗಿ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಎಂಎಸ್‌ಎಂಇ ವಲಯದ ಹಲವು ಉದ್ದಿಮೆಗಳು ಈಗ ಆಧುನೀಕರಣಕ್ಕೆ ಮುಂದಾಗುತ್ತಿವೆ. ಇದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯ ಇದೆ. ಆದರೆ, ಬ್ಯಾಂಕ್‌ಗಳು, ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಾಲ ನೀಡಲು ಹಿಂದೆ–ಮುಂದೆ ನೋಡುತ್ತಿವೆ’ ಎಂದು ರಾಷ್ಟ್ರೀಯ ಎಂಎಸ್‌ಎಂಇ ಮಂಡಳಿಯ ಸದಸ್ಯ ಜೆ.ಆರ್. ಬಂಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘2022ರ ಡಿಸೆಂಬರ್‌ವರೆಗಿನ ಮಾಹಿತಿ ಪ್ರಕಾರ, ರಾಜ್ಯದ ಎಂಎಸ್‌ಎಂಇ ವಲಯಕ್ಕೆ ದೊರೆತಿರುವ ಸಾಲದಲ್ಲಿ ಶೇಕಡ 73ರಷ್ಟು ಸಾಲವು ಖಾಸಗಿ ಬ್ಯಾಂಕ್‌ಗಳಿಂದ ಬಂದಿದೆ. ಸಾಲದಲ್ಲಿ ಶೇ 13ರಷ್ಟು ಪಾಲು ಮಾತ್ರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಂದಿದೆ. ಇನ್ನುಳಿದ ಪಾಲು ವೆಂಚರ್‌ ಕ್ಯಾಪಿಟಲಿಸ್ಟ್‌ಗಳಿಂದ (ವಿ.ಸಿ) ಹಾಗೂ ಖಾಸಗಿ ಮೂಲಗಳಿಂದ ಬಂದಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ, ಉದ್ಯಮಿ ಜೆ. ಕ್ರಾಸ್ತ ಮಾಹಿತಿ ನೀಡಿದರು.

‘ಕರ್ನಾಟಕದ ವಾಣಿಜ್ಯೋದ್ಯಮಗಳಿಗೆ ಬ್ಯಾಂಕ್‌ಗಳಿಂದ ಸಿಗುವ ಸಾಲದ ಪಾಲು ಅವುಗಳ ಆರ್ಥಿಕ ಗಾತ್ರಕ್ಕೆ ಹೋಲಿಸಿದರೆ ಕಡಿಮೆ ಇದೆ’ ಎಂದು 2021–22ನೆಯ ಸಾಲಿನ ರಾಜ್ಯ ಆರ್ಥಿಕ ಸಮೀಕ್ಷೆಯು ಹೇಳಿದೆ. ಅಲ್ಲದೆ, ‘ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ ಮೂಲಕ, ತುರ್ತು ಸಾಲ ಖಾತರಿ ಯೋಜನೆಯ (ಇಸಿಎಲ್‌ಜಿಎಸ್‌) ಅಡಿಯಲ್ಲಿ ಕೋವಿಡ್‌ನಿಂದ ತೊಂದರೆಗೆ ಒಳಗಾದ ಉದ್ದಿಮೆಗಳಿಗೆ ಸಾಲ ಕೊಡುವಂತೆ ಬ್ಯಾಂಕ್‌ಗಳಿಗೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಉತ್ತೇಜನ ನೀಡಬೇಕು’ ಎಂದು ಸಮೀಕ್ಷೆಯು ಹೇಳಿದೆ.

ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಸಿಗುವ ಸಾಲದ ಮೇಲಿನ ಬಡ್ಡಿಯು ಈಗ ಶೇ 9.15ರಿಂದ ಶೇ 10ರವರೆಗೂ ಇದೆ. ಇಸಿಎಲ್‌ಜಿಎಸ್‌ ಯೋಜನೆಯನ್ನು ಜಾರಿಗೆ ತಂದಿದೆಯಾದರೂ, ಅದರ ಅಡಿಯಲ್ಲಿಯೂ ಸಾಲ ಸುಲಭವಾಗಿ ಸಿಗುತ್ತಿಲ್ಲ ಎಂದು ಉದ್ಯಮಿಗಳು ದೂರುತ್ತಾರೆ.

‘ಉದ್ದಿಮೆಗಳು ಹೊಸ ಉಪಕರಣ ಖರೀದಿಗೆ ಸಾಲ ಪಡೆಯಬೇಕಾದರೆ, ಉಪಕರಣದ ಮೌಲ್ಯದ ಶೇಕಡ 25ರಷ್ಟನ್ನು ತಾವೇ ಹೊಂದಿಸಬೇಕು. ಇನ್ನುಳಿದ ಶೇ 75ರಷ್ಟು ಮೊತ್ತವನ್ನು ಬ್ಯಾಂಕ್‌ಗಳು ಸಾಲದ ರೂಪದಲ್ಲಿ ನೀಡುತ್ತವೆ. ಉದ್ದಿಮೆಗಳು ತಾವೇ ಹೊಂದಿಸಿಕೊಡಬೇಕಿರುವ ಮೊತ್ತವು ಈಗಿನ ಸಂದರ್ಭದಲ್ಲಿ ಹೊರೆಯಂತೆ ಆಗುತ್ತಿದ್ದು, ಅದನ್ನು ಈಗ ಶೇ 5ಕ್ಕೆ ಇಳಿಸುವುದು ಸೂಕ್ತ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ ಅಭಿಪ್ರಾಯಪಟ್ಟರು.

‘ಕೋವಿಡ್‌ನಿಂದಾಗಿ ಆದ ತೊಂದರೆಗಳು ಹಾಗೂ ಈಗಿನ ನಗದು ಲಭ್ಯತೆಯ ಕೊರತೆಯು ಶೇ 25ರಷ್ಟು ಮಾರ್ಜಿನ್‌ ಹಣ ಹೊಂದಿಸುವುದನ್ನು ಕಷ್ಟವಾಗಿಸಿವೆ’ ಎಂದು ಬಂಗೇರ ವಿವರಿಸಿದರು. ಸಾಲ ಮರುಪಾವತಿಯಲ್ಲಿ ವಿಫಲವಾಗಿಲ್ಲದ, ಐದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಾಗೂ 3 ವರ್ಷಗಳಿಂದ ಲಾಭದಲ್ಲಿರುವ ಉದ್ದಿಮೆಗಳಿಂದ ಶೇ 5ರ ಮಾರ್ಜಿನ್‌ ಪಡೆದು ಸಾಲ ನೀಡಿದರೆ ಒಳಿತು ಎಂದರು.

*

ಬಡ್ಡಿ ದರ ಹೆಚ್ಚಾಗುತ್ತಿರುವುದು ಎಂಎಸ್‌ಎಂಇ ಪಾಲಿಗೆ ಹೊರೆಯಾಗಿದೆ. ಸಾಲ ಮಂಜೂರಿ ವಿಳಂಬವಾಗುವುದು ಹಾಗೂ ಮಾರ್ಜಿನ್‌ ಪ್ರಮಾಣ ಜಾಸ್ತಿ ಇರುವುದು ಈ ವಲಯಕ್ಕೆ ಸಮಸ್ಯೆಯಾಗಿದೆ.
–ಬಿ.ವಿ. ಗೋಪಾಲ ರೆಡ್ಡಿ, ಅಧ್ಯಕ್ಷ, ಎಫ್‌ಕೆಸಿಸಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT