ಭಾನುವಾರ, ಡಿಸೆಂಬರ್ 8, 2019
21 °C
ದೀರ್ಘಸಮಯದವರೆಗೆ ಮಂದಗತಿಯ ಆರ್ಥಿಕ ಬೆಳವಣಿಗೆ

ಆರ್ಥಿಕ ವೃದ್ಧಿ ದರ ಶೇ 5.1: ಕ್ರಿಸಿಲ್‌ ಅಂದಾಜು

Published:
Updated:

ಮುಂಬೈ: ಆರ್ಥಿಕತೆಯಲ್ಲಿನ ಮಂದಗತಿಯು ನಿರೀಕ್ಷೆಗಿಂತ ಹೆಚ್ಚು ತೀವ್ರಗೊಂಡಿದ್ದು, ದೀರ್ಘ ಸಮಯದವರೆಗೆ ಮುಂದುವರೆಯಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಅಂದಾಜಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಿ ಆರ್ಥಿಕತೆಯ ಬೆಳವಣಿಗೆ ದರವು ಈ ಮೊದಲಿನ ಅಂದಾಜು ಶೇ 6.3 ರಿಂದ ಶೇ 5.1ರಷ್ಟಕ್ಕೆ ಕುಸಿಯಲಿದೆ ಎಂದು ತಿಳಿಸಿದೆ. ಇದು, ಇದುವರೆಗಿನ ಅಂದಾಜಿನಲ್ಲಿಯೇ ಅತ್ಯಂತ ಕಡಿಮೆ ಮಟ್ಟವಾಗಿದ್ದರೂ, ಜಪಾನಿನ ದಲ್ಲಾಳಿ ಸಂಸ್ಥೆ ನೊಮುರಾದ ಶೇ 4.7ಕ್ಕಿಂತ ಹೆಚ್ಚಿಗೆ ಇದೆ.

ಜಿಎಸ್‌ಟಿ, ರಿಯಲ್‌ ಎಸ್ಟೇಟ್‌ ನಿಯಂತ್ರಣ, ದಿವಾಳಿ ಸಂಹಿತೆ ನಿರ್ಧಾರಗಳು ಆರ್ಥಿಕತೆಗೆ ಚೇತರಿಕೆ ನೀಡಲು ಸಾಧ್ಯವಾಗಿಲ್ಲ. ರಿಯಲ್‌ ಎಸ್ಟೇಟ್‌ ವಲಯದ ಕಳಪೆ ಸಾಧನೆ ಮತ್ತು ಹಣಕಾಸು ವಲಯದಲ್ಲಿನ ನಗದು ಬಿಕ್ಕಟ್ಟಿನ ಮಧ್ಯೆ ನೇರ ಸಂಬಂಧ ಇದೆ ಎಂದು ಕ್ರಿಸಿಲ್‌ ವರದಿಯಲ್ಲಿ ತಿಳಿಸಲಾಗಿದೆ.

ಕೈಗಾರಿಕಾ ಉತ್ಪಾದನೆ, ಸರಕುಗಳ ರಫ್ತು, ಬ್ಯಾಂಕ್‌ ಸಾಲ ಪಡೆಯುವ ಪ್ರಮಾಣ, ಸರಕುಗಳ ಸಾಗಾಣಿಕೆ, ವಿದ್ಯುತ್‌ ಉತ್ಪಾದನೆ ಮುಂತಾದವು ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಂಡಿರುವುದನ್ನು ಸೂಚಿಸುತ್ತವೆ.

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಅಲ್ಪಮಟ್ಟಿಗೆ ಚೇತರಿಕೆ ಕಂಡು ಬರಲಿದೆ. ಮೊದಲಾರ್ಧದಲ್ಲಿನ ಶೇ 4.75ರ ಬದಲಿಗೆ ಶೇ 5.5ರಷ್ಟು ವೃದ್ಧಿ ಕಾಣಲಿದೆ. ಬಂಡವಾಳ ಹೂಡಿಕೆ ಮತ್ತು ಸರಕು – ಸೇವೆಗಳ ಬಳಕೆ ಪ್ರಮಾಣದಲ್ಲಿನ ಕುಸಿತವು ಬೇಡಿಕೆಯನ್ನು ಗಮನಾರ್ಹವಾಗಿ ತಗ್ಗಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌, ಇದೇ 5ರಂದು ತನ್ನ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸುವ ಮುಂಚೆ ಕ್ರಿಸಿಲ್‌ ವರದಿ ಪ್ರಕಟಗೊಂಡಿದೆ. 

ದ್ವಿತೀಯ ತ್ರೈಮಾಸಿಕದ ವೃದ್ಧಿ ದರಕ್ಕೆ ಸಂಬಂಧಿಸಿದ ಸರ್ಕಾರದ ಅಧಿಕೃತ ಅಂಕಿ ಅಂಶಗಳು ಶೇ 4.5ರಷ್ಟು ಬೆಳವಣಿಗೆ ಅಂದಾಜಿಸಿವೆ. ಇದು 78 ತಿಂಗಳಲ್ಲಿನ ಕನಿಷ್ಠ ಮಟ್ಟವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು