ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೊಕರೆನ್ಸಿಗಳ ನಿಯಂತ್ರಣ ಅಗತ್ಯವಿದೆ: ಗೀತಾ ಗೋಪಿನಾಥ್

Last Updated 16 ಡಿಸೆಂಬರ್ 2021, 15:52 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಪ್ಟೊಕರೆನ್ಸಿಗಳನ್ನು ನಿಯಂತ್ರಣಕ್ಕೆ ಒಳಪಡಿಸಬೇಕಾದ ಅಗತ್ಯ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಪ್ರತಿಪಾದಿಸಿದರು.

‘ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳ ಪಾಲಿಗೆ ಕ್ರಿಪ್ಟೊಕರೆನ್ಸಿಗಳು ಒಂದು ಸವಾಲು. ಅಲ್ಲಿ ಕ್ರಿಪ್ಟೊಕರೆನ್ಸಿಗಳ ಬಳಕೆಯು ಹೆಚ್ಚು ಆಕರ್ಷಕವಾಗಿ ಇರುತ್ತದೆ’ ಎಂದು ಗೀತಾ ಅವರು ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.

ಕ್ರಿಪ್ಟೊ ಕರೆನ್ಸಿಗಳನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸಲು ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ಈಗ ಕ್ರಿಪ್ಟೊ ಕರೆನ್ಸಿಗಳಿಗೆ ನಿಷೇಧವೂ ಇಲ್ಲ, ಅವುಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಕಾನೂನು ಸಹ ಇಲ್ಲ.

‘ಈ ಕರೆನ್ಸಿಗಳನ್ನು ನಿಯಂತ್ರಿಸಬೇಕಾದ ಅಗತ್ಯ ಖಂಡಿತ ಇದೆ. ವಿಶ್ವದಾದ್ಯಂತ ಬೇರೆ ಬೇರೆ ದೇಶಗಳು ಬಗೆಬಗೆಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿವೆ. ಇವುಗಳನ್ನು ನಿಷೇಧಿಸುವುದರಲ್ಲಿಯೂ ಸವಾಲುಗಳು ಇವೆ’ ಎಂದು ಗೀತಾ ಅವರು ಹೇಳಿದರು.

ಕ್ರಿಪ್ಟೊಕರೆನ್ಸಿ ವಹಿವಾಟುಗಳು ದೇಶಗಳ ಗಡಿಗಳನ್ನು ಮೀರಿ ನಡೆಯುವ ಕಾರಣ, ಕ್ರಿಪ್ಟೊಕರೆನ್ಸಿಗಳಿಂದ ಸೃಷ್ಟಿಯಾಗುವ ಸಮಸ್ಯೆಗಳನ್ನು ಬಗೆಹರಿಸುವುದು ಯಾವುದೇ ಒಂದು ದೇಶದಿಂದ ಸಾಧ್ಯವಿಲ್ಲ. ಹೀಗಾಗಿ, ಈ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ನೀತಿಯೊಂದನ್ನು ತುರ್ತಾಗಿ ರೂಪಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿ ಇದೆ. ಈ ಸಂದರ್ಭದಲ್ಲಿ ಹೊಂದಾಣಿಕೆಯಹಣಕಾಸು ನೀತಿಯನ್ನು ಇನ್ನೂ ಕೆಲವು ತ್ರೈಮಾಸಿಕಗಳವರೆಗೆ ಮುಂದುವರಿಸಬೇಕು. ನಂತರದಲ್ಲಿ ಹಂತ ಹಂತವಾಗಿ ಈ ನೀತಿಯಿಂದ ಹಿಂದಕ್ಕೆ ಸರಿಯಬಹುದು ಎಂದು ಅವರು ಹೇಳಿದರು. ದೇಶದ ಸಗಟು ಹಣದುಬ್ಬರ ದರವು ನವೆಂಬರ್‌ನಲ್ಲಿ ಶೇಕಡ 14.23ಕ್ಕೆ ತಲುಪಿದ್ದು, ಇದು 12 ವರ್ಷಗಳ ಗರಿಷ್ಠ ಮಟ್ಟ.

ಹೊಂದಾಣಿಕೆಯ ಹಣಕಾಸು ನೀತಿಯನ್ನು ಮುಂದುವರಿಸಿಕೊಳ್ಳುವುದರ ಜೊತೆಯಲ್ಲೇ ಹಣದುಬ್ಬರ ಪ್ರಮಾಣದ ಮೇಲೆಯೂ ಗಮನ ಇರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT