ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುತ್ತಿದೆ ಸಣ್ಣ ಕಂಪನಿಗಳ ಆದಾಯ: ಎಸ್‌ಬಿಐನ ಎಕೊವ್ರ್ಯಾಪ್ ವರದಿ

3,700 ಕಂಪನಿಗಳ ಹಣಕಾಸಿನ ಫಲಿತಾಂಶ ಪರಿಶೀಲನೆ
Last Updated 2 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 20.1ರಷ್ಟು ಬೆಳವಣಿಗೆ ಸಾಧಿಸಿದ್ದರೂ, ಸಣ್ಣ ಕಂಪನಿಗಳ ಪಾಲಿಗೆ ಎಲ್ಲವೂ ಹಿತಕರವಾಗಿ ಇಲ್ಲ ಎಂಬುದನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

‘ವಾರ್ಷಿಕ ₹ 500 ಕೋಟಿವರೆಗೆ ವಹಿವಾಟು ಹೊಂದಿರುವ ಸಣ್ಣ ಪ್ರಮಾಣದ ಕಂಪನಿಗಳು ತಮ್ಮ ವೆಚ್ಚಗಳನ್ನು ನಿರಂತರವಾಗಿ ತಗ್ಗಿಸುತ್ತಿವೆ. ಈ ಕಂಪನಿಗಳು ತಮ್ಮ ನೌಕರರ ಮೇಲೆ ಮಾಡುವ ವೆಚ್ಚವನ್ನೂ ಕಡಿಮೆ ಮಾಡುತ್ತಿವೆ’ ಎಂದು ಎಸ್‌ಬಿಐನ ಎಕೊವ್ರ್ಯಾಪ್ ವರದಿಯಲ್ಲಿ ಹೇಳಲಾಗಿದೆ.

ದೇಶದ ಷೇರುಪೇಟೆಗಳಲ್ಲಿ ನೋಂದಾಯಿತ ಆಗಿರುವ ಒಟ್ಟು 3,700ಕ್ಕೂ ಹೆಚ್ಚಿನ ಕಂಪನಿಗಳ ಹಣಕಾಸಿನ ಫಲಿತಾಂಶವನ್ನು ಪರಿಶೀಲಿಸಿರುವ ಎಸ್‌ಬಿಐ, ‘₹ 50 ಕೋಟಿವರೆಗೆ ವಹಿವಾಟು ನಡೆಸುವ ಕಂಪನಿಗಳು ನೌಕರರಿಗಾಗಿ ಮಾಡುವ ವೆಚ್ಚದಲ್ಲಿ ಗರಿಷ್ಠ ಶೇಕಡ 5ರಷ್ಟು ಇಳಿಕೆ ಕಂಡುಬಂದಿದೆ. ಇದೇ ವೇಳೆ ದೊಡ್ಡ ಕಾರ್ಪೊರೇಟ್ ಕಂಪನಿಗಳು ನೌಕರರಿಗೆ ಮಾಡುವ ವೆಚ್ಚದಲ್ಲಿ ಶೇ 2ರಿಂದ ಶೇ 3ರವರೆಗೆ ಹೆಚ್ಚಳ ಆಗಿದೆ’ ಎಂದು ಹೇಳಿದೆ.

ಈ ವರ್ಷದ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಗಳು ನೌಕರರಿಗಾಗಿ ಮಾಡಿದ್ದ ವೆಚ್ಚದೊಂದಿಗೆ ಜೂನ್‌ ತ್ರೈಮಾಸಿಕದ ವೆಚ್ಚವನ್ನು ಹೋಲಿಸಲಾಗಿದೆ. ಒಟ್ಟಾರೆಯಾಗಿ, ಎಲ್ಲ ವರ್ಗಗಳಿಗೆ ಸೇರಿದ ಕಂಪನಿಗಳನ್ನು ಪರಿಗಣಿಸಿದರೆ ಆದಾಯದಲ್ಲಿ ಶೇಕಡ 9ರಷ್ಟು ಇಳಿಕೆ ಆಗಿದೆ, ನೌಕರರಿಗಾಗಿ ಮಾಡುವ ವೆಚ್ಚದಲ್ಲಿ ಶೇ 2ರಷ್ಟು ಏರಿಕೆ ಆಗಿದೆ.

‘ಜಿಡಿಪಿ ಬೆಳವಣಿಗೆಯು ದಾಖಲೆಯ ಮಟ್ಟದಲ್ಲಿ ಇದ್ದಿರಬಹುದು. ಆದರೆ ಎಲ್ಲ ಉದ್ಯಮ ವಲಯಗಳೂ ಚೇತರಿಕೆ ಕಂಡುಕೊಂಡಿಲ್ಲ. ಲಾಕ್‌ಡೌನ್‌ ನಂತರದಲ್ಲಿ ಉದ್ಯಮ ಚಟುವಟಿಕೆಗಳು ಹೆಚ್ಚಾದವು. ಆದರೆ, ಜನರ ಬಳಿ ಹಾಗೂ ವ್ಯಾಪಾರಿಗಳ ಬಳಿ ಯಾವೆಲ್ಲ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲವೋ ಅಂತಹ ಉತ್ಪನ್ನಗಳಿಗೆ ಮಾತ್ರ ಬೇಡಿಕೆ ಬಂದಿದೆ. ಇನ್ನುಳಿದ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಿಲ್ಲ, ಆ ವಲಯಗಳ ಉದ್ಯಮಗಳು ಚೇತರಿಕೆ ಕಂಡುಕೊಂಡಿಲ್ಲ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ನಾವು ಕೋವಿಡ್‌ಗೂ ಮೊದಲಿನ ಸ್ಥಿತಿಯನ್ನು ಇನ್ನೂ ತಲುಪಿಲ್ಲ. ಹಿಂದಿನ ವರ್ಷದ ಕುಸಿತಕ್ಕೆ ಹೋಲಿಸಿದರೆ ಈ ಬಾರಿ ಬೆಳವಣಿಗೆ ದಾಖಲಾಗಿದೆ. ಸೇವಾ ವಲಯದ ಎಲ್ಲ ಉದ್ಯಮಗಳು ಚೇತರಿಸಿಕೊಂಡಿಲ್ಲ. ಉದಾಹರಣೆಗೆ ಹೇಳುವುದಾದರೆ ಹೋಟೆಲ್, ಪ್ರವಾಸ, ಟ್ಯಾಕ್ಸಿ ಸೇವೆಗಳಗಳನ್ನು ಒಳಗೊಂಡಿರುವ ಆತಿಥ್ಯ ಉದ್ಯಮ, ಶಿಕ್ಷಣ ಉದ್ಯಮ, ಸಿನಿಮಾ ಮಂದಿರಗಳನ್ನು ಒಳಗೊಂಡ ಮನರಂಜನಾ ಉದ್ಯಮ ಬೆಳವಣಿಗೆ ಕಂಡಿಲ್ಲ’ ಎಂದು ಹೇಳಿದರು. ಕೋವಿಡ್‌ ಮೂರನೆಯ ಅಲೆಯ ಭೀತಿ ಇರುವ ಕಾರಣದಿಂದಾಗಿ ಹೊಸ ಹೂಡಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT