ಬುಧವಾರ, ಆಗಸ್ಟ್ 4, 2021
20 °C

ಜಿಡಿಪಿಗೆ ಪೆಟ್ಟು ನೀಡಿದ ಲಾಕ್‌ಡೌನ್‌: ರಾಹುಲ್‌ ಜತೆ ರಾಜೀವ್‌ ಬಜಾಜ್‌ ಸಂವಾದ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ದೋಷಪೂರಿತ ಕಠಿಣ ಸ್ವರೂಪದ ಲಾಕ್‌ಡೌನ್‌ನಿಂದಾಗಿ ದೇಶಿ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದೆ’ ಎಂದು ಉದ್ಯಮಿ ರಾಜೀವ್‌ ಬಜಾಜ್‌ ವಿಶ್ಲೇಷಿಸಿದ್ದಾರೆ.

‘ದೇಶದಾದ್ಯಂತ ಜಾರಿಗೊಳಿಸಿದ್ದ ದಿಗ್ಬಂಧನದಿಂದಾಗಿ ಕೊರೊನಾ–2 ವೈರಾಣು ಸೋಂಕು ಪ್ರಕರಣಗಳು ಕಡಿಮೆಯಾಗುವ ಬದಲಿಗೆ ಆರ್ಥಿಕ ವೃದ್ಧಿ ದರ ಕುಸಿಯುತ್ತಿದೆ. ಆರ್ಥಿಕತೆಯನ್ನು ಲಾಕ್‌ಡೌನ್‌ ದುಷ್ಪರಿಣಾಮಗಳಿಂದ ಮುಕ್ತಗೊಳಿಸುವುದು ಪ್ರಯಾಸಕರ  ಆಗಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ವಿಶಿಷ್ಟ ನಿರೂಪಣಾ ತಂತ್ರದಿಂದ ಜನರ ಮನಸ್ಸಿನಲ್ಲಿನ ಭಯವನ್ನು ಹೊರ ಹಾಕಬೇಕಾಗಿದೆ‘ ಎಂದು ಹೇಳಿದ್ದಾರೆ.

ಗುರುವಾರ ನಡೆದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಜತೆಗಿನ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಬಜಾಜ್‌ ಆಟೊ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ರಾಜೀವ್‌ ಬಜಾಜ್‌ ಭಾಗವಹಿಸಿದ್ದರು.

’ಆರ್ಥಿಕತೆಯು ಲಾಕ್‌ಡೌನ್‌ನಿಂದ ಹೊರ ಬರಲು ಸರಳ ವಿಧಾನ, ಸಮನ್ವಯತೆ ಮತ್ತು ಲಯಬದ್ಧತೆ ಕಂಡು ಬಂದಿಲ್ಲ. ಜನರ ಮನಸ್ಸಿನಲ್ಲಿನ ಭಯವನ್ನು ಮೊದಲು ದೂರ ಮಾಡಬೇಕಾಗಿದೆ. ಲಾಕ್‌ಡೌನ್‌ ತೆರವುಗೊಳಿಸುವ ಹಂತದಲ್ಲಿಯೂ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ವೈರಾಣುವಿಗೆ ಕಡಿವಾಣ ಹಾಕುವುದು ಸಾಧ್ಯವಾಗಿರದಿರುವುದು ಇದರಿಂದ ದೃಢಪಡುತ್ತದೆ.

’ಆರ್ಥಿಕತೆಯಲ್ಲಿ ಎಲ್ಲಕ್ಕೂ ಮುಖ್ಯವಾಗಿ ಈಗ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಗೊಳ್ಳಬೇಕು ಎಂಬುದು ಉದ್ಯಮ ವಲಯದ ನಿರೀಕ್ಷೆಯಾಗಿದೆ. ಜನರ ಕೈಯಲ್ಲಿ ಹಣ ಇರುವಂತಹ ಉತ್ತೇಜನಾ ಕೊಡುಗೆಗಳ ಅಗತ್ಯ ಇದೆ. ಜನರಲ್ಲಿ ಖರೀದಿ ಉತ್ಸಾಹ ಹೆಚ್ಚಿಸುವಂತಹ ಕೆಲಸ ತುರ್ತಾಗಿ ಆಗಬೇಕಾಗಿದೆ’ ಎಂದು ರಾಜೀವ್‌ ಬಜಾಜ್‌ ಹೇಳಿದ್ದಾರೆ.

’ಆರ್ಥಿಕ ಸಂಕಷ್ಟಗಳಿಂದಾಗಿ ಕಾರ್ಮಿಕರು, ದಿನಗೂಲಿಗಳು, ರೈತರು, ಸಣ್ಣ ಉದ್ಯಮಿಗಳು ನೋವಿನಿಂದ ಚೀರುತ್ತಿದ್ದಾರೆ. ಕೋವಿಡ್‌ ಹೊಡೆತ ತಾಳಲಾರದೆ ದೊಡ್ಡ ಉದ್ಯಮಿಗಳೂ ನೋವಿನಿಂದ ಒದ್ದಾಡುತ್ತಿದ್ದಾರೆ. ಇವರೆಲ್ಲರ ಭವಿಷ್ಯ ಮಸುಕಾಗಿದೆ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

*
ಇದೊಂದು ವಿಫಲಗೊಂಡ ಲಾಕ್‌ಡೌನ್‌. ದಿಗ್ಬಂಧನ ತೆರವುಗೊಳಿಸುತ್ತಿದ್ದಂತೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ.
–ರಾಹುಲ್‌ ಗಾಂಧಿ, ಕಾಂಗ್ರೆಸ್ ಮುಖಂಡ

*
ಸ್ವಚ್ಛ ಗಾಳಿ ಸೇವಿಸಲು ಹೊರ ಬರುವ ಹಿರಿಯ ನಾಗರಿಕರನ್ನೂ ಲಾಕ್‌ಡೌನ್ ಉಲ್ಲಂಘನೆ ಕಾರಣಕ್ಕೆ ಅಗೌರವದಿಂದ ಕಾಣಲಾಗುತ್ತಿದೆ.
–ರಾಜೀವ್‌ ಬಜಾಜ್, ಬಜಾಜ್‌ ಆಟೊ ವ್ಯವಸ್ಥಾಪಕ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು