ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಪ್ರತಿದಿನ 2 ಕೋಟಿ ಮೊಟ್ಟೆ ಉತ್ಪಾದನೆ: ದರ ಹೆಚ್ಚಳ ನಿರೀಕ್ಷೆ

Published 25 ಡಿಸೆಂಬರ್ 2023, 15:56 IST
Last Updated 25 ಡಿಸೆಂಬರ್ 2023, 18:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ತಿಂಗಳಿನಲ್ಲಿ ಕೋಳಿ ಮೊಟ್ಟೆಯ ಸಗಟು ಧಾರಣೆ ಹೆಚ್ಚಾಗಿದೆ. ಹಾಗಾಗಿ, ಹೊಸ ವರ್ಷಕ್ಕೆ ಚಿಲ್ಲರೆ ಮಾರಾಟ ತುಟ್ಟಿಯಾಗುವ ನಿರೀಕ್ಷೆಯಿದೆ.

ಅಕ್ಟೋಬರ್‌ನಲ್ಲಿ ಸಗಟು ದರ ₹535 (ಪ್ರತಿ 100 ಮೊಟ್ಟೆಗಳಿಗೆ) ಇತ್ತು. ಈ ತಿಂಗಳಿನಲ್ಲಿ ₹625ಕ್ಕೆ ಮುಟ್ಟಿದೆ. ಒಟ್ಟಾರೆ 95 ಪೈಸೆ ಹೆಚ್ಚಳವಾಗಿದೆ.

ಜನರು ಜನವರಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಾರೆ. ಇದರಿಂದ ಕೇಕ್‌ಗಳ ತಯಾರಿಕೆಗೆ ಬೇಡಿಕೆ ಹೆಚ್ಚುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಮನೆ ಸೇರಿದಂತೆ ಹೋಟೆಲ್‌ಗಳಲ್ಲಿ ಮೊಟ್ಟೆಗಳನ್ನು ಬಳಕೆ ಮಾಡುವುದು ಹೆಚ್ಚು. ಹಾಗಾಗಿ, ಒಂದು ಮೊಟ್ಟೆಗೆ ಸಗಟು ದರ ₹6.50ರಿಂದ ₹6.75 ದಾಟುವ ಸಾಧ್ಯತೆಯಿದೆ. ಹಾಗಾಗಿ, ಚಿಲ್ಲರೆ ಮಾರಾಟ ದರವು ₹7ರಿಂದ ₹7.50ಕ್ಕೆ ಹೆಚ್ಚಳವಾಗಲಿದೆ ಎನ್ನುತ್ತಾರೆ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ಪ್ರತಿನಿಧಿಗಳು.

ಪ್ರಸ್ತುತ ರಾಜ್ಯದಲ್ಲಿ ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಕೊಪ್ಪಳ ಜಿಲ್ಲೆ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಟ್ಟೆ ಕೋಳಿ (ಫಾರಂ ಕೋಳಿ) ಸಾಕಾಣಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ 2 ಕೋಟಿಯಷ್ಟು ಮೊಟ್ಟೆಗಳ ಉತ್ಪಾದನೆಯಾಗುತ್ತದೆ.

‘ಬೆಂಗಳೂರಿನಲ್ಲಿ ಜನರು ಪ್ರತಿದಿನ 90 ಲಕ್ಷ ಮೊಟ್ಟೆಗಳನ್ನು ಬಳಸುತ್ತಾರೆ. ದಾವಣಗೆರೆ, ಹೊಸಪೇಟೆ ಸೇರಿದಂತೆ ರಾಜಧಾನಿ ಸುತ್ತಮುತ್ತಲಿನ ಪ್ರದೇಶದಿಂದ ಇಲ್ಲಿಗೆ ನಿತ್ಯ 40 ಲಕ್ಷ ಮೊಟ್ಟೆಗಳು ಪೂರೈಕೆಯಾಗುತ್ತವೆ. ಉಳಿದಂತೆ ತಮಿಳುನಾಡಿನ ನಾಮಕ್ಕಲ್‌ನಿಂದ 40 ಲಕ್ಷದಿಂದ 50 ಲಕ್ಷ ಮೊಟ್ಟೆಗಳು ಪೂರೈಕೆಯಾಗುತ್ತಿವೆ’ ಎಂದು ವಿವರಿಸುತ್ತಾರೆ ಎನ್‌ಇಸಿಸಿ ಬೆಂಗಳೂರು ವಲಯದ ಪ್ರಭಾರ ಉಸ್ತುವಾರಿಯಾಗಿರುವ ರವೀಂದ್ರ ರೆಡ್ಡಿ.

ವಾರ್ಷಿಕ ವಹಿವಾಟು ₹5 ಸಾವಿರ ಕೋಟಿ 
ನೆರೆಯ ಗೋವಾ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೂ ರಾಜ್ಯದಲ್ಲಿ ಉತ್ಪಾದನೆಯಾಗುವ ಕೋಳಿ ಮೊಟ್ಟೆಗಳು ಪೂರೈಕೆಯಾಗುತ್ತವೆ. ಬಳ್ಳಾರಿ ಭಾಗದ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳು ತೆಲಂಗಾಣದ ರಾಯಲಸೀಮೆ ಭಾಗಕ್ಕೆ ಹೆಚ್ಚಾಗಿ ಪೂರೈಕೆಯಾಗುತ್ತವೆ. ‘ಕರ್ನಾಟಕದಲ್ಲಿ ಪ್ರತಿವರ್ಷ ಮೊಟ್ಟೆ ಉತ್ಪಾದನೆಯು ಶೇ 5ರಿಂದ 6ರಷ್ಟು ಹೆಚ್ಚಳವಾಗುತ್ತಿದೆ. ಜತೆಗೆ ಬಳಕೆ ಪ್ರಮಾಣವೂ ಹೆಚ್ಚುತ್ತಿದೆ’ ಎಂದು ಹೇಳುತ್ತಾರೆ ರವೀಂದ್ರ ರೆಡ್ಡಿ.   ‘ಕರ್ನಾಟಕವು ಮೊಟ್ಟೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಹೊರರಾಜ್ಯಗಳ ಅವಲಂಬನೆಯ ಅಗತ್ಯವಿಲ್ಲ. ಆದರೆ ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಸಾಗಾಣಿಕೆ ವೆಚ್ಚ ದುಬಾರಿಯಾಗಲಿದೆ. ಹಾಗಾಗಿ ತಮಿಳುನಾಡಿನಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳ ಖರೀದಿಗೆ ಇಲ್ಲಿನ ಡೀಲರ್‌ಗಳು ಹೆಚ್ಚು ಆಸ್ಥೆವಹಿಸುತ್ತಾರೆ’ ಎಂದು ಹೇಳುತ್ತಾರೆ.   ‘ಅಲ್ಲದೇ ರಾಜ್ಯದಲ್ಲಿ ಪ್ರತಿದಿನ ಮೊಟ್ಟೆ ವಹಿವಾಟು ₹10 ಕೋಟಿ ದಾಟುತ್ತದೆ. ಕೋಳಿಗಳು ಮೊಟ್ಟೆ ಹಾಗೂ ಗೊಬ್ಬರ ಮಾರಾಟದ ವಹಿವಾಟು ಪರಿಗಣಿಸಿದರೆ ಈ ಉದ್ಯಮದಲ್ಲಿ ವಾರ್ಷಿಕವಾಗಿ ಸುಮಾರು ₹4500 ಕೋಟಿಯಿಂದ ₹5 ಸಾವಿರ ಕೋಟಿವರೆಗೆ ವಹಿವಾಟು ನಡೆಯುತ್ತದೆ’ ಎಂಬುದು ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT