ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ರಚನೆಗೆ ಅಧಿಸೂಚನೆ

Published 15 ಸೆಪ್ಟೆಂಬರ್ 2023, 15:47 IST
Last Updated 15 ಸೆಪ್ಟೆಂಬರ್ 2023, 15:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ 31 ಪೀಠಗಳ ರಚನೆಗೆ ಕೇಂದ್ರ ಹಣಕಾಸು ಸಚಿವಾಲಯವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೀಠಗಳ ಸ್ಥಾಪನೆ ಆಗಲಿದೆ.

ಇವು ಜಿಎಸ್‌ಟಿಗೆ ಸಂಬಂಧಿಸಿದ 14 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನೆರವಾಗುವ ನಿರೀಕ್ಷೆ ಇದೆ.

ಈಗ, ಜಿಎಸ್‌ಟಿ ಅಧಿಕಾರಿಗಳು ನೀಡುವ ಆದೇಶದ ಬಗ್ಗೆ ತಕರಾರು ಹೊಂದಿರುವವರು ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಹೈಕೋರ್ಟ್‌ಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ದೊಡ್ಡದಿದೆ. ಅಲ್ಲಿ ಜಿಎಸ್‌ಟಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ಪರಿಣತಿ ಇರುವ ಪೀಠಗಳು ಇಲ್ಲ.

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ಈಚೆಗೆ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ತೆರಿಗೆ ಪಾವತಿಸುವಂತೆ ಸೂಚಿಸಿ ನೀಡಿರುವ ನೋಟಿಸ್‌ಗಳಿಗೆ ಸಂಬಂಧಿಸಿದ ವ್ಯಾಜ್ಯಗಳ ಸಂಖ್ಯೆಯು ಜೂನ್ ಅಂತ್ಯದ ಹೊತ್ತಿಗೆ 14,227ಕ್ಕೆ ಏರಿಕೆ ಕಂಡಿದೆ. ಇದು 2021ರ ಮಾರ್ಚ್‌ ವೇಳೆಗೆ 5,499 ಮಾತ್ರ ಆಗಿತ್ತು.

ರಾಜ್ಯಗಳ ಮಟ್ಟದಲ್ಲಿ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ರಚನೆಯಿಂದ, ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ಅವಕಾಶವಾಗುತ್ತದೆ. ಆ ಮೂಲಕ ಉದ್ದಿಮೆಗಳಿಗೆ, ವರ್ತಕರಿಗೆ ಸಹಾಯ ಆಗುತ್ತದೆ. ಅಧಿಸೂಚನೆಯ ಪ್ರಕಾರ ಕರ್ನಾಟಕದಲ್ಲಿ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ ಎರಡು ಪೀಠಗಳು ರಚನೆಯಾಗಲಿವೆ.

ಇಂತಹ ನ್ಯಾಯಮಂಡಳಿ ಇಲ್ಲದಿದ್ದ ಸಂದರ್ಭದಲ್ಲಿ ಉದ್ದಿಮೆಗಳು, ವರ್ತಕರು ಹೈಕೋರ್ಟ್‌ ಮೊರೆ ಹೋಗಬೇಕಿತ್ತು. ಅಲ್ಲಿ ವ್ಯಾಜ್ಯ ಇತ್ಯರ್ಥವಾಗುವುದಕ್ಕೆ ದೀರ್ಘಕಾಲ ಬೇಕಾಗುತ್ತಿತ್ತು ಎಂದು ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT