ಬುಧವಾರ, ಅಕ್ಟೋಬರ್ 21, 2020
22 °C

ಶೇ 7ಕ್ಕೆ ಏರಲಿದೆ ದೇಶದ ವಿತ್ತೀಯ ಕೊರತೆ: ಬ್ರಿಕ್‌ವರ್ಕ್‌ ರೇಟಿಂಗ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದು, ವರಮಾನ ಸಂಗ್ರಹ ತಗ್ಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಬಜೆಟ್‌ ಅಂದಾಜಿನ ಶೇಕಡ 3.5ರಷ್ಟನ್ನೂ ಮೀರಿ, ಶೇ 7ಕ್ಕೆ ತಲುಪಲಿದೆ ಎಂದು ಬ್ರಿಕ್‌ವರ್ಕ್‌ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ರಾಜ್ಯಗಳಿಗೆ ಜಿಡಿಪಿಯ ಶೇ 2ರಷ್ಟು ಹೆಚ್ಚುವರಿ ಸಾಲ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಪರಿಗಣಿಸಿದರೆ, ಒಟ್ಟಾರೆಯಾಗಿ ವಿತ್ತೀಯ ಕೊರತೆಯು ಜಿಡಿಪಿಯ ಶೇ 12ಕ್ಕೆ ತಲುಪುವ ಸಾಧ್ಯತೆಯೂ ಇದೆ ಎಂದಿದೆ.

ಜಾಗತಿಕ ಮಟ್ಟದ ದೊಡ್ಡ ಆರ್ಥಿಕತೆಗಳಲ್ಲಿ ಸದ್ಯ ಅಮೆರಿಕದ ವಿತ್ತೀಯ ಕೊರತೆಯು ಇದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂದು ಹೇಳಿದೆ.

ಮಹಾಲೇಖಪಾಲರ (ಸಿಜಿಎ) ವರದಿಯ ಪ್ರಕಾರ, 2020–21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವರಮಾನ ಸಂಗ್ರಹವು ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕಿಂತಲೂ ಭಾರಿ ಇಳಿಕೆ ಕಂಡಿದೆ.

ಆದಾಯ ತೆರಿಗೆ ಸಂಗ್ರಹ ಶೇ 30.5ರಷ್ಟು ಹಾಗೂ ಜಿಎಸ್‌ಟಿ ಸಂಗ್ರಹ ಶೇ 34ರಷ್ಟು ಕಡಿಮೆಯಾಗಿದೆ. ಇದೇ ವೇಳೆ, ವೆಚ್ಚವು ಶೇ 13.1ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್‌ನಿಂದ ಜನರನ್ನು ರಕ್ಷಿಸಲು ಹೆಚ್ಚುವರಿ ವೆಚ್ಚ ಮಾಡಬೇಕಾಗಿ ಬಂದಿದ್ದು ಹಾಗೂ ಆತ್ಮನಿರ್ಭರ ಭಾರತ ಕಾರ್ಯಕ್ರಮದ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ವೆಚ್ಚ ಮಾಡಲಾಗಿದೆ.

ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಕಂಡುಕೊಳ್ಳಲಿದೆ ಎಂದು ನಿರೀಕ್ಷೆ ಮಾಡಿದೆ. ವಾಣಿಜ್ಯ ವಹಿವಾಟುಗಳು ಮತ್ತೆ ಆರಂಭವಾಗಿವೆ. ಹೀಗಾಗಿ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ವರಮಾನ ಸಂಗ್ರಹವು ಕೋವಿಡ್‌–19ಕ್ಕೂ ಮುಂಚೆ ಇದ್ದ ಮಟ್ಟವನ್ನು ತಲುಪುವ ನಿರೀಕ್ಷೆ ಇದೆ.

ಒಂದೊಮ್ಮೆ ಸದ್ಯದ ಪರಿಸ್ಥಿತಿಯು ಇನ್ನೂ ಹೆಚ್ಚಿನ ದಿನಗಳವರೆಗೆ ಮುಂದುವರಿದಲ್ಲಿ, ₹ 12 ಲಕ್ಷ ಕೋಟಿ ಸಾಲವನ್ನು ಸಂಗ್ರಹಿಸಿದರೂ ತನ್ನ ಬಜೆಟ್‌ ವೆಚ್ಚವನ್ನು ತಲುಪಲು ಬಂಡವಾಳ ಕೊರತೆ ಎದುರಿಸಬೇಕಾಗಿ ಬರಲಿದೆ. ಇದರ ಪರಿಣಾಮವಾಗಿ, ಬಂಡವಾಳ ವೆಚ್ಚದಲ್ಲಿ ಭಾರಿ ಕಡಿತ ಮಾಡಬೇಕಾಗಲಿದೆ. ನರೇಗಾ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನಂತಹ ಯೋಜನೆಗಳ ಮೇಲಿನ ವೆಚ್ಚವನ್ನೂ ಕಡಿಮೆ ಮಾಡಬೇಕಾಗಿ ಬರಲಿದೆ ಎಂದೂ ಅದು ಎಚ್ಚರಿಕೆ ನೀಡಿದೆ.

ಆರ್ಥಿಕ ಬೆಳವಣಿಗೆ ದರವು ಈಗಾಗಲೇ ಅಂದಾಜು ಮಾಡಿರುವುದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇಳಿಕೆ ಕಂಡಲ್ಲಿ, ಸಾಲ ಸಂಗ್ರಹದಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಎಂದೂ ಹೇಳಿದೆ.

ಮುಖ್ಯಾಂಶಗಳು

* ಕೋವಿಡ್‌ನಿಂದಾಗಿ ವರಮಾನ ಸಂಗ್ರಹ ಇಳಿಕೆ

* ಬಂಡವಾಳ ವೆಚ್ಚದಲ್ಲಿ ಭಾರಿ ಕಡಿತ ನಿರೀಕ್ಷೆ

ವಿತ್ತೀಯ ಕೊರತೆ

3.5%: 2020–21ಕ್ಕೆ ಸರ್ಕಾರದ ಅಂದಾಜು

7%: 2020–21ಕ್ಕೆ ಬ್ರಿಕ್‌ವರ್ಕ್‌ ರೇಟಿಂಗ್ಸ್‌ ಮಾಡಿರುವ ಅಂದಾಜು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು