ಬೆಂಗಳೂರು: ಬೆಂಗಳೂರು ಮೂಲದ ಇ–ಕಾಮರ್ಸ್ ದೈತ್ಯ ’ಫ್ಲಿಪ್‌ಕಾರ್ಟ್’ ಕಂಪನಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯನ್ನು ಇದೇ ಮೊದಲ ಬಾರಿಗೆ ಚಾಲನೆಗೆ ತಂದಿದೆ.
ಫ್ಲಿಪ್‌ಕಾರ್ಟ್ ಬಳಕೆದಾರರು ಇನ್ನುಮುಂದೆ ಫ್ಲಿಫ್‌ಕಾರ್ಟ್ ಆ್ಯಪ್‌ನಲ್ಲೇ ಯುಪಿಐ ಬಳಸಬಹುದು. ಅದೇ ಆ್ಯಪ್‌ನಲ್ಲಿ ಯುಪಿಐ ಚಾಲನೆಗೊಳಿಸಿ ತ್ವರಿತವಾಗಿ ಪಾವತಿ ಹಾಗೂ ಇತರ ಸೇವೆಗಳನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ.
ಈ ಕುರಿತು ಫ್ಲಿಪ್‌ಕಾರ್ಟ್ ತನ್ನ ಆ್ಯಪ್‌ನಲ್ಲಿ ಯುಪಿಐ ಚಾಲನೆಗೊಳಿಸಲು ಗ್ರಾಹಕರಿಗೆ ಉತ್ತೇಜಿಸುವ ಜಾಹೀರಾತುಗಳನ್ನು ಪೋಸ್ಟ್ ಮಾಡಿದೆ.
ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದೊಡನೆ ಫ್ಲಿಪ್‌ಕಾರ್ಟ್ ಯುಪಿಐ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಸದ್ಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಫ್ಲಿಪ್‌ಕಾರ್ಟ್ ಯುಪಿಐ ಕೆಲಸ ಮಾಡಲಿದೆ.
ಇತ್ತೀಚೆಗೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಆರ್‌ಬಿಐ ನಿಷೇಧ ಹೇರಿರುವ ಬೆನ್ನಲ್ಲೇ ಫ್ಲಿಪ್‌ಕಾರ್ಟ್ ಈ ಮಹತ್ವದ ಕ್ರಮ ಕೈಗೊಂಡಿದೆ. 2019ರಲ್ಲಿ ಕೋಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಸೇವೆಯನ್ನೂ ಈ ಕಂಪನಿ ಜಾರಿಗೊಳಿಸಿತ್ತು.
ತನ್ನ ಗ್ರಾಹಕರಿಗೆ ತ್ವರಿತ ಹಾಗೂ ಗ್ರಾಹಕ ಸ್ನೇಹಿ ಸೇವೆಯನ್ನು ಒದಗಿಸಿ ಕೊಡುವುದಕ್ಕಾಗಿ ಯುಪಿಐ ಸೇವೆ ಚಾಲನೆಗೊಳಿಸಲಾಗಿದೆ ಎಂದು ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಹೇಳಿದೆ.