ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತ ಇಲ್ಲ: ನಿರ್ಮಲಾ ಸೀತಾರಾಮನ್

Last Updated 16 ಆಗಸ್ಟ್ 2021, 15:15 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತ ಮಾಡುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಕೃತಕವಾಗಿ ನಿಗ್ರಹಿಸಿದ ಚಿಲ್ಲರೆ ಮಾರಾಟ ಬೆಲೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದ್ದರಿಂದ ಹೆಚ್ಚಾದ ವೆಚ್ಚದ ನಡುವೆ ಸಮಾನತೆಯನ್ನು ತರಲು ಸಬ್ಸಿಡಿಯನ್ನು ಪಾವತಿಸುವ ಬದಲು, ಅಂದಿನ ಸರ್ಕಾರವು ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ ಒಟ್ಟು ₹1.34 ಲಕ್ಷ ಕೋಟಿ ತೈಲ ಬಾಂಡ್‌ಗಳನ್ನು ನೀಡಿತ್ತು. ಈ ತೈಲ ಬಾಂಡ್‌ಗಳು ಮತ್ತು ಅದರ ಬಡ್ಡಿಯನ್ನು ಈಗ ಪಾವತಿಸಲಾಗುತ್ತಿದೆ ಎನ್ನಲಾಗಿದೆ.

‘ತೈಲ ಬಾಂಡ್‌ಗಳ ಹೊರೆ ಇಲ್ಲದಿರುತ್ತಿದ್ದರೆ ಇಂಧನ ದರದ ಮೇಲಿನ ಎಕ್ಸೈಸ್ ಸುಂಕ ಕಡಿತ ಮಾಡುವ ಸ್ಥಿತಿಯಲ್ಲಿರುತ್ತಿದ್ದೆ. ಹಿಂದಿನ ಸರ್ಕಾರ ತೈಲ ಬಾಂಡ್‌ಗಳನ್ನು ನೀಡುವ ಮೂಲಕ ನಮ್ಮ ಕೆಲಸವನ್ನು ಕಷ್ಟಗೊಳಿಸಿದೆ’ ಎಂದು ಸಚಿವೆ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಳೆದ ವರ್ಷ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ 7 ವರ್ಷಗಳಲ್ಲಿ ತೈಲ ಬಾಂಡ್‌ಗಳ ಮೇಲೆ ₹70,195.72 ಕೋಟಿ ಬಡ್ಡಿ ಪಾವತಿಸಲಾಗಿದೆ ಎಂದಿದ್ದಾರೆ.

₹1.34 ಲಕ್ಷ ಕೋಟಿ ತೈಲ ಬಾಂಡ್‌ಗಳ ಪೈಕಿ ಕೇವಲ ₹3,500 ಕೋಟಿ ಮಾತ್ರ ಪಾವತಿಸಲಾಗಿದೆ. ಉಳಿದ ₹1.3 ಲಕ್ಷ ಕೋಟಿ ಮೊತ್ತ ಪ್ರಸಕ್ತ ಹಣಕಾಸು ವರ್ಷ ಮತ್ತು 2025–26ನೇ ಸಾಲಿನ ಅವಧಿಯಲ್ಲಿ ಮರುಪಾವತಿಸಬೇಕಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

2021–22ನೇ ಸಾಲಿನಲ್ಲಿ ಸರ್ಕಾರವು ₹10,000 ಕೋಟಿ ಪಾವತಿಸಬೇಕಿದೆ. 2023-24ರಲ್ಲಿ ₹31,150 ಕೋಟಿ, ನಂತರದ ಹಣಕಾಸು ವರ್ಷದಲ್ಲಿ ₹52,860.17 ಕೋಟಿ ಮತ್ತು 2025-26ರಲ್ಲಿ 36,913 ಕೋಟಿ ಪಾವತಿಸಬೇಕಿದೆ.

ಬಡ್ಡಿ ಪಾವತಿ ಮತ್ತು ಅಸಲು ಮರುಪಾವತಿಗೆ ಗಮನಾರ್ಹ ಮೊತ್ತ ವ್ಯಯವಾಗುತ್ತಿದೆ. ಇದು ಅನ್ಯಾಯದ ಹೊರೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

‘2014–15ರಲ್ಲಿ ಆರಂಭಿಕ ಬ್ಯಾಲೆನ್ಸ್ ₹1.34 ಲಕ್ಷ ಕೋಟಿ ಮತ್ತು ಬಡ್ಡಿ ಮರುಪಾವತಿ ₹10,255 ಕೋಟಿ ಇತ್ತು. 2015–1ರಿಂದ ಪ್ರತಿ ವರ್ಷ ₹9,989 ಬಡ್ಡಿಯ ಹೊರೆಯಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT