ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣಗೊಳ್ಳಲು ಆಯ್ಕೆಯಾಗಿರುವ ನಾಲ್ಕು ಬ್ಯಾಂಕ್‌ಗಳಿವು

Last Updated 15 ಫೆಬ್ರುವರಿ 2021, 21:16 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದ ವಿಚಾರದಲ್ಲಿ ಮುಂದಡಿ ಇರಿಸಿರುವ ಕೇಂದ್ರ ಸರ್ಕಾರವು, ಮಧ್ಯಮ ಗಾತ್ರದ ನಾಲ್ಕು ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್ ಓವರ್ಸೀಸ್‌ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೆಸರುಗಳು ಈ ಪಟ್ಟಿಯಲ್ಲಿ ಇವೆ ಎಂದು ಮೂಲಗಳು ತಿಳಿಸಿವೆ. ಈ ನಾಲ್ಕು ಬ್ಯಾಂಕ್‌ಗಳ ಪೈಕಿ ಎರಡು ಬ್ಯಾಂಕ್‌ಗಳಲ್ಲಿನಕೇಂದ್ರದ ಷೇರು ಪಾಲನ್ನು 2021–22ನೇ ಸಾಲಿನಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತದೆ ಎಂದು ಗೊತ್ತಾಗಿದೆ.

ಬ್ಯಾಂಕ್‌ಗಳ ಖಾಸಗೀಕರಣವು ರಾಜಕೀಯವಾಗಿ ಸವಾಲಿನಕೆಲಸವಾದರೂ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎರಡನೆಯ ಹಂತದ ಬ್ಯಾಂಕ್‌ಗಳ ಖಾಸಗೀಕರಣದ ಮೂಲಕ ಆಪ್ರಕ್ರಿಯೆ ಶುರು ಮಾಡಲು ಮುಂದಾಗಿದೆ.

ಕೇಂದ್ರ ಸರ್ಕಾರವು ಮಧ್ಯಮ ಹಾಗೂ ಸಣ್ಣ ಗಾತ್ರದ ಬ್ಯಾಂಕ್‌ಗಳನ್ನು ಮೊದಲ ಹಂತದಲ್ಲಿ ಖಾಸಗಿಯವರಿಗೆ ಒಪ್ಪಿಸಿ, ಅದಕ್ಕೆ ಪ್ರತಿಕ್ರಿಯೆಗಳು ಹೇಗೆ ಬರುತ್ತವೆ ಎಂಬುದನ್ನು ಪರೀಕ್ಷಿಸಲಿದೆ. ಮುಂದಿನ ವರ್ಷಗಳಲ್ಲಿ ಅದು ದೇಶದ ಕೆಲವು ದೊಡ್ಡ ಬ್ಯಾಂಕ್‌ಗಳನ್ನೂ ಖಾಸಗೀಕರಣ ಪ್ರಕ್ರಿಯೆಗೆ ಒಳಪಡಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೇಂದ್ರ ಹಣಕಾಸು ಸಚಿವಾಲಯದ ವಕ್ತಾರರು ನಿರಾಕರಿಸಿದ್ದಾರೆ.

ನಾಲ್ಕೂ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಬಯಸಿತ್ತು. ಆದರೆ, ಬ್ಯಾಂಕ್ ನೌಕರರ ಸಂಘಗಳಿಂದ ಪ್ರತಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಎಚ್ಚರಿಕೆಯ ಹೆಜ್ಜೆ ಇರಿಸಲು ಅಧಿಕಾರಿಗಳು ಸಲಹೆ ನೀಡಿದರು ಎನ್ನಲಾಗಿದೆ.

ಬ್ಯಾಂಕ್‌ ಆಫ್ ಮಹಾರಾಷ್ಟ್ರದಲ್ಲಿ ನೌಕರರ ಸಂಖ್ಯೆ ಕಡಿಮೆ ಇರುವ ಕಾರಣ, ಆ ಬ್ಯಾಂಕನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಸುಲಭ ಆಗಬಹುದು. ಹಾಗಾಗಿ, ಮೊದಲಿಗೆ ಮಾರಾಟ ಆಗುವ ಬ್ಯಾಂಕ್ ಅದೇ ಆಗಬಹುದು ಎಂದು ಮೂಲಗಳು ಹೇಳಿವೆ. ಖಾಸಗೀಕರಣ ಪ್ರಕ್ರಿಯೆ ಆರಂಭವಾಗಲು ಐದರಿಂದ ಆರು ತಿಂಗಳು ಬೇಕಾಗಬಹುದು ಎನ್ನಲಾಗಿದೆ.

‘ನೌಕರರ ಸಂಖ್ಯೆ, ನೌಕರರ ಸಂಘಟನೆಗಳು ತರುವ ಒತ್ತಡ, ರಾಜಕೀಯ ಪರಿಣಾಮಗಳು... ಇವುಗಳು ಕೂಡ ಅಂತಿಮ ತೀರ್ಮಾನದ ಮೇಲೆ ಪ್ರಭಾವ ಬೀರಲಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಸಣ್ಣ ಬ್ಯಾಂಕ್‌ಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಸಂಪನ್ಮೂಲ ಸಂಗ್ರಹಿಸಲು ಸರ್ಕಾರಕ್ಕೆ ಸಾಧ್ಯವಾಗದಿರಬಹುದು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT