ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

Published 24 ಏಪ್ರಿಲ್ 2024, 14:12 IST
Last Updated 24 ಏಪ್ರಿಲ್ 2024, 14:12 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ತಲೆದೋರಿದ್ದ ಉದ್ವಿಗ್ನತೆಯು ತುಸು ತಗ್ಗಿರುವುದರಿಂದ ದೇಶದ ಷೇರು‍ಪೇಟೆಗಳಲ್ಲಿ ಬುಧವಾರವೂ ಸಕಾರಾತ್ಮಕ ವಹಿವಾಟು ನಡೆಯಿತು. 

ಸತತ ನಾಲ್ಕು ದಿನಗಳ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,363 ಅಂಶ (ಶೇ 1.88) ಹೆಚ್ಚಳವಾಗಿದೆ. ಇದರಿಂದ ಹೂಡಿಕೆದಾರರ ಸಂಪತ್ತು ₹8.48 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮೌಲ್ಯವು ₹401 ಲಕ್ಷ ಕೋಟಿ ದಾಟಿದೆ.

ಸೆನ್ಸೆಕ್ಸ್‌ 114 ಅಂಶ ಏರಿಕೆ ಕಂಡು 73,852ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 34 ಅಂಶ ಏರಿಕೆಯಾಗಿ 22,402ಕ್ಕೆ ಕೊನೆಗೊಂಡಿತು.

ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಸ್ಟೀಲ್‌, ಪವರ್‌ ಗ್ರಿಡ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಎನ್‌ಟಿಪಿಸಿ, ಬಜಾಜ್‌ ಫೈನಾನ್ಸ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ನ ಷೇರಿನ ಮೌಲ್ಯ ಏರಿಕೆಯಾಗಿದೆ. 

ಟೆಕ್‌ ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), ಮಾರುತಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟೈಟನ್‌ ಷೇರಿನ ಮೌಲ್ಯ ಇಳಿಕೆ ಕಂಡಿದೆ. ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. 

ಕಚ್ಚಾ ತೈಲದ ಬೆಲೆ ಏರಿಕೆ  

ಲಂಡನ್‌: ಕಳೆದ ವಾರ ಅಮೆರಿಕದ ಕಚ್ಚಾ ತೈಲದ ದಾಸ್ತಾನಿನಲ್ಲಿ ಕುಸಿತ ಕಂಡಿದ್ದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬುಧವಾರ ಕಚ್ಚಾ ತೈಲದ ಬೆಲೆಯು ಏರುಗತಿ ಕಂಡಿದೆ. ಬ್ರೆಂಟ್ ಕಚ್ಚಾ ತೈಲ ಶೇ 0.29ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 88.68 (₹7389) ಡಾಲರ್‌ ತಲುಪಿದೆ.

ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲ ದರವು ಶೇ 0.31 ಹೆಚ್ಚಳವಾಗಿ ಪ್ರತಿ ಬ್ಯಾರೆಲ್‌ 83.62 ಡಾಲರ್‌ಗೆ (₹6968) ಮುಟ್ಟಿದೆ. ಏಪ್ರಿಲ್ 19ಕ್ಕೆ ಕೊನೆಗೊಂಡ ವಾರದಲ್ಲಿ ಅಮೆರಿಕದ ಕಚ್ಚಾ ದಾಸ್ತಾನು ಅಂದಾಜು 30 ಲಕ್ಷ ಬ್ಯಾರೆಲ್‌ಗೆ ಕುಸಿದಿತ್ತು. 

ಮಧ್ಯಪ್ರಾಚ್ಯ ಬಿಕ್ಕಟ್ಟು ಕೂಡ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು‌ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ‘ಈ ವರ್ಷದ ಅಂತ್ಯದ ವೇಳೆಗೆ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ ₹7449ಕ್ಕೆ ಮುಟ್ಟುವ ಸಾಧ್ಯತೆಯಿದೆ’ ಎಂದು ಸಿಂಗಪುರದ ಯುನೈಟೆಡ್ ಓವರ್‌ಸೀಸ್‌ ಬ್ಯಾಂಕ್‌ನ ಮಾರುಕಟ್ಟೆಗಳ ಮುಖ್ಯಸ್ಥ ಹೆಂಗ್ ಕೂನ್ ಹೌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT