ಮಂಗಳವಾರ, ಜನವರಿ 19, 2021
17 °C
ಅಕ್ಟೋಬರ್‌ನಲ್ಲಿ ದಾಖಲೆ ನಿರ್ಮಿಸಿದ ದಕ್ಷಿಣ ರೈಲ್ವೆ

PV Web Exclusive: ಪ್ರಯಾಣಿಕರ ಕೊರತೆ ನೀಗಿಸಿದ ಸರಕು

ಚಿದಂಬರ‍ಪ್ರಸಾದ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19 ಸಂದರ್ಭದಲ್ಲಿ ಪ್ರಯಾಣಿಕ ರೈಲುಗಳ ಸೇವೆ ಸ್ಥಗಿತವಾಗಿದ್ದರೂ, ಸರಕು ಸಾಗಣೆ ಮಾತ್ರ ನಿರಂತರವಾಗಿ ನಡೆದಿದೆ. ಸಾಂಕ್ರಾಮಿಕದ ಮಧ್ಯೆಯೇ ಅಕ್ಟೋಬರ್‌ನಲ್ಲಿ ದಕ್ಷಿಣ ರೈಲ್ವೆ ಸರಕು ಸಾಗಣೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಒಂದೇ ತಿಂಗಳಲ್ಲಿ ದಕ್ಷಿಣ ರೈಲ್ವೆ 20 ಲಕ್ಷ ಟನ್ ಸರಕು ಸಾಗಣೆ ಮಾಡುವ ಮೂಲಕ ₹162.42 ಕೋಟಿ ಆದಾಯ ಗಳಿಸಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ದಕ್ಷಿಣ ರೈಲ್ವೆ 1.47 ಕೋಟಿ ಟನ್‌ ಸರಕು ಸಾಗಿಸುವ ಮೂಲಕ ₹1,167 ಕೋಟಿ ಆದಾಯವನ್ನು ತನ್ನದಾಗಿಸಿಕೊಂಡಿದೆ.

ಕೋವಿಡ್ ಸಂದರ್ಭದಲ್ಲಿ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ದಿನಬಳಕೆ ವಸ್ತುಗಳ ಪೂರೈಕೆಯೂ ಬಹುದೊಡ್ಡ ಸವಾಲಾಗಿತ್ತು. ಇದನ್ನು ಅವಕಾಶವಾಗಿ ಬಳಸಿಕೊಂಡ ದಕ್ಷಿಣ ರೈಲ್ವೆ, ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಜನರ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ಆದಾಯವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

ಇದೇ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ತಮಿಳುನಾಡು ಆಹಾರ ನಿಗಮದಿಂದ 2.16 ಲಕ್ಷ ಟನ್‌ ಅಕ್ಕಿಯನ್ನು ಸಾಗಣೆ ಮಾಡಲಾಗಿದೆ. ಇದೇ ರೀತಿ 56 ರೈಲುಗಳ ಮೂಲಕ ಅಟೊಮೊಬೈಲ್‌ ಬಿಡಿಭಾಗಗಳನ್ನು ಸಾಗಣೆ ಮಾಡಲಾಗಿದೆ. ಇದರ ಜೊತೆಗೆ ಚಿನ್ನಸೇಲಂನಿಂದ ಕೊಯ್ಲು ಯಂತ್ರಗಳನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶಕ್ಕೆ ಸಾಗಣೆ ಮಾಡಲಾಗಿದೆ.

ಮಂಗಳೂರಿನ ಕೈಗಾರಿಕಾ ಘಟಕ ತಯಾರಿಸಿದ 2,200 ಟನ್ ತಾಳೆ ಎಣ್ಣೆಯನ್ನು ಉತ್ತರ ಪ್ರದೇಶದ ಲಕ್ನೋಗೆ ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗದಿಂದ ಸಾಗಣೆ ಮಾಡಲಾಗಿದೆ. ಇದರಿಂದ ರೈಲ್ವೆಗೆ ₹37.05 ಲಕ್ಷ ಆದಾಯ ದೊರೆತಿದೆ ಎಂದು ಪಾಲ್ಘಾಟ್‌ ವಿಭಾಗದ ಹಿರಿಯ ವಾಣಿಜ್ಯ ಪ್ರಬಂಧಕ ಜೆರಿನ್‌ ಜಿ. ಆನಂದ್‌ ತಿಳಿಸಿದ್ದಾರೆ.

ಹರಿಯಾಣದ ಸೋನೆಪತ್‌ನ ಶಿಶು ಆಹಾರ ತಯಾರಿಕೆ ಕಂಪನಿಯು ಬಾಂಗ್ಲಾದೇಶಕ್ಕೆ ಸರಕು ಸಾಗಿಸಲು ಮುಂದಾಗಿದೆ. ಶಿಶು ಆಹಾರವನ್ನು ಹೊತ್ತ 15 ಬೋಗಿಗಳು ಸೋನೆಪತ್‌ನಿಂದ ಮಂಗಳೂರಿಗೆ ಬಂದಿದ್ದು, ಇಲ್ಲಿಂದ ಎನ್‌ಎಂಪಿಟಿ ಮೂಲಕ ಬಾಂಗ್ಲಾದೇಶಕ್ಕೆ ಸರಕು ರವಾನಿಸಲಾಗಿದೆ. ಕಾಸರಗೋಡಿನ ಅಡಿಕೆಯನ್ನು ತಮಿಳುನಾಡಿನ ಕುಂಭಕೋಣಂಗೆ ರವಾನಿಸಲಾಗಿದೆ. ಇದೇ ರೀತಿ ಹಲವು ಸರಕುಗಳ ಸಾಗಣೆಯ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಫಲ ನೀಡಿದ ಬಿಡಿಜಿ:

ಪ್ರಯಾಣಿಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯು ಸರಕು ಸಾಗಣೆಯ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು.

ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗೀಯ ಮಹಾಪ್ರಬಂಧಕ ಪ್ರತಾಪ್‌ಸಿಂಗ್‌ ಶಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಹಿವಾಟು ಅಭಿವೃದ್ಧಿ ಘಟಕ(ಬುಸಿನೆಸ್ ಡೆವಲಪ್‌ಮೆಂಟ್‌ ಗ್ರೂಪ್‌)ವು, ಸಹಾಯಕ ವಿಭಾಗೀಯ ಮಹಾಪ್ರಬಂಧಕ ಸಿ.ಟಿ. ಶಕೀರ್ ಹುಸೇನ್‌, ಹಿರಿಯ ವಿಭಾಗೀಯ ನಿರ್ವಹಣಾ ಪ್ರಬಂಧಕ ಪಿ.ಎಲ್‌. ಅಶೋಕಕುಮಾರ್‌ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಿರಿಯ ವಿಭಾಗೀಯ ವಾಣಿಜ್ಯ ಪ್ರಬಂಧಕ ಜೆರಿನ್‌ ಜಿ. ಆನಂದ, ಹಿರಿಯ ಮೆಕ್ಯಾನಿಕಲ್‌ ಪ್ರಬಂಧಕ ಕೆ.ವಿ. ಸುಂದರೇಶನ್‌, ಹಿರಿಯ ವಿಭಾಗೀಯ ಹಣಕಾಸು ಪ್ರಬಂಧಕ ಎ.ಪಿ. ಸಿವಚಂದರ್ ಈ ಘಟಕದ ಸದಸ್ಯರಾಗಿದ್ದಾರೆ.

‘ಈ ಘಟಕದ ಸದಸ್ಯರು ಸರಕು ಸಾಗಣೆಯ ಹೊಸ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ಕೈಗಾರಿಕೋದ್ಯಮಿಗಳು, ವರ್ತಕರ ಸಂಘಗಳ ಜತೆಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ. ಸದ್ಯದ ಸರಕು ಸಾಗಣೆ ಮಾದರಿ ಹಾಗೂ ಬರಲಿರುವ ದಿನಗಳಲ್ಲಿ ಅನುಸರಿಸಬೇಕಾದ ಮಾದರಿಗಳ ಕುರಿತು ಚರ್ಚೆ ನಡೆಸುವ ಮೂಲಕ ರೈಲ್ವೆಯಿಂದ ಸರಕು ಸಾಗಣೆ ಹೆಚ್ಚಿಸಲು ಕಾರ್ಯಯೋಜನೆ ರೂಪಿಸಿದ್ದಾರೆ’ ಎಂದು ಪಾಲ್ಘಾಟ್‌ನ ವಿಭಾಗೀಯ ಮಹಾಪ್ರಬಂಧಕ ಪ್ರತಾಪ್‌ಸಿಂಗ್‌ ಶಮಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು