ಮಂಗಳವಾರ, ಜುಲೈ 14, 2020
28 °C
ಸಂಪನ್ಮೂಲ ಸಂಗ್ರಹಿಸಲು ತೆರಿಗೆ ಅಧಿಕಾರಿಗಳ ಸಲಹೆ

ಅತಿ ಶ್ರೀಮಂತರಿಗೆ ಶೇ 40ರಷ್ಟು ತೆರಿಗೆ: ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಕೊರೊನಾ–2’ ವೈರಾಣು ವಿರುದ್ಧದ ಸಮರದಲ್ಲಿ ಬೇಕಾಗಿರುವ ಸಂಪನ್ಮೂಲ ಸಂಗ್ರಹಿಸಲು  ಅತಿ ಶ್ರೀಮಂತರ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಲು ಮತ್ತು ವಿದೇಶಿ ಕಂಪನಿಗಳಿಗೆ ಸರ್ಚಾರ್ಜ್‌ ಹೇರಲು ಹಿರಿಯ ತೆರಿಗೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ರೆವಿನ್ಯೂ ಸೇವೆಗಳ ಅಧಿಕಾರಿಗಳ ತಂಡವು ಸಿದ್ಧಪಡಿಸಿರುವ, ‘ವಿತ್ತೀಯ ಆಯ್ಕೆ ಮತ್ತು ಕೋವಿಡ್ ಪಿಡುಗಿಗೆ ಪ್ರತಿಕ್ರಿಯೆ’ ವರದಿಯಲ್ಲಿ ಹಣದ ಲಭ್ಯತೆ ಮತ್ತು ಹರಿವು ನಿರಂತರವಾಗಿರಲು ಅಲ್ಪಾವಧಿಯಲ್ಲಿಈ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. 50  ಅಧಿಕಾರಿಗಳು ಜಂಟಿಯಾಗಿ ಈ ವರದಿ ಸಿದ್ಧಪಡಿಸಿದ್ದಾರೆ.

ಸಲಹೆಗಳು: ವಾರ್ಷಿಕ ₹ 1 ಕೋಟಿ ಆದಾಯ ಇರುವವರಿಗೆ ವಿಧಿಸಲಾಗುತ್ತಿರುವ ಶೇ 30ರಷ್ಟು ತೆರಿಗೆಯನ್ನು ಶೇ 40ಕ್ಕೆ ಹೆಚ್ಚಿಸಬೇಕು ಮತ್ತು ₹ 5 ಕೋಟಿ ಆದಾಯದವರಿಗೆ ಸಂಪತ್ತು ತೆರಿಗೆ ವ್ಯವಸ್ಥೆಯನ್ನು 3 ರಿಂದ  6 ತಿಂಗಳ ಅಲ್ಪಾವಧಿವರೆಗೆ ಮರಳಿ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ.

2020–21ನೇ ಸಾಲಿನ ಬಜೆಟ್‌ನಲ್ಲಿ ಜಾರಿಗೆ ತಂದಿರುವ ಅತಿ ಶ್ರೀಮಂತರ ಆದಾಯದ ಮೇಲಿನ ಸರ್ಚಾರ್ಜ್‌ದಿಂದ ಬೊಕ್ಕಸಕ್ಕೆ ಕೇವಲ ₹ 2,700 ಕೋಟಿ ಸಂಗ್ರಹವಾಗಲಿದೆ. ಈ ಕಾರಣಕ್ಕೆ ತೆರಿಗೆ ಹಂತ ಹೆಚ್ಚಿಸಲು ಸಲಹೆ ನೀಡಲಾಗಿದೆ.

ಅತಿ ಶ್ರೀಮಂತರು: ₹1 ಕೋಟಿ ಮೊತ್ತದ ತೆರಿಗೆಗೆ ಒಳಪಡುವ ಆದಾಯ ಹೊಂದಿದವರನ್ನು ಅತಿ ಶ್ರೀಮಂತ ಎಂದು ಪರಿಗಣಿಸಲಾಗುತ್ತಿದೆ.

ವಿದೇಶಿ ಕಂಪನಿಗಳಿಂದ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಅವುಗಳ ವರಮಾನದ ಮೇಲಿನ ಶೇ 2ರಷ್ಟು ಸರ್ಚಾರ್ಜ್‌ ಹೆಚ್ಚಿಸಲು ಸಲಹೆ ನೀಡಲಾಗಿದೆ. ಸದ್ಯಕ್ಕೆ ₹ 1 ಕೋಟಿಯಿಂದ ₹ 10 ಕೋಟಿ ವರಮಾನಕ್ಕೆ ಶೇ 2ರಷ್ಟು ಮತ್ತು ₹ 10 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಶೇ 5ರಷ್ಟು ಸರ್ಚಾರ್ಜ್‌ ವಿಧಿಸಲಾಗುತ್ತಿದೆ.

ಕೋವಿಡ್‌ ಪರಿಹಾರ ಸೆಸ್‌: ಹೆಚ್ಚುವರಿ ವರಮಾನ ಸಂಗ್ರಹಿಸಲು ಸರ್ಕಾರ ಶೇ 4ರಷ್ಟು ‘ಕೋವಿಡ್‌ ಪರಿಹಾರ ಸೆಸ್‌’ ವಿಧಿಸಬೇಕು. ಇದರಿಂದ ಬರುವ ಮೊತ್ತವನ್ನು ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಹೆಚ್ಚುವರಿ ಸೆಸ್‌ನಿಂದ ಬೊಕ್ಕಸಕ್ಕೆ ₹ 18 ಸಾವಿರ ಕೋಟಿ  ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ತೆರಿಗೆ ಪರಿಹಾರಕ್ಕೆ ಮಿತಿ: ಸಕಾಲದಲ್ಲಿ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್‌) ಸಲ್ಲಿಸುವ ಪ್ರಾಮಾಣಿಕರಿಗೆ ತೆರಿಗೆ ಪರಿಹಾರ ಕ್ರಮಗಳನ್ನು ಸೀಮಿತಗೊಳಿಸಬೇಕು ಎಂದೂ ಸಮಿತಿ ಸೂಚಿಸಿದೆ.

ನಕಲಿ ದಾಖಲೆ ಸೃಷ್ಟಿಸಿ ನಷ್ಟವಾಗಿದೆ ಎಂದು ಹೇಳಿಕೊಂಡು ಕಡಿಮೆ ತೆರಿಗೆ ಪಾವತಿಸುವ, ರಿಟರ್ನ್ಸ್‌ ಸಲ್ಲಿಸದ, ಮೂಲದಲ್ಲಿಯೇ ತೆರಿಗೆ ಮುರಿದುಕೊಳ್ಳದ (ಟಿಡಿಎಸ್‌) ಮತ್ತು ಮುರಿದುಕೊಂಡ ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದೆ ಬಳಸಿಕೊಳ್ಳುವ ಹಲವಾರು ನಿದರ್ಶನಗಳಿವೆ. ಇಂತಹವರಿಗೆ ಯಾವುದೇ ಪರಿಹಾರ ಒದಗಿಸಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.

ಅಪಕ್ವ ಚಿಂತನೆ; ಹಣಕಾಸು ಸಚಿವಾಲಯ ಟೀಕೆ
‘ಐಆರ್‌ಎಸ್‌’ ಅಧಿಕಾರಿಗಳ ವರದಿಯು ಅಪಕ್ವ ಚಿಂತನೆಯಾಗಿದ್ದು, ಸೇವಾ ನಿಯಮಗಳ ಉಲ್ಲಂಘನೆ  ಮತ್ತು ಅಶಿಸ್ತಿನ ನಡೆಯಾಗಿದೆ ಎಂದು ಹಣಕಾಸು ಸಚಿವಾಲಯ ಪ್ರತಿಕ್ರಿಯಿಸಿದೆ.

ಇಂತಹ ವರದಿ ನೀಡಲು ಸರ್ಕಾರ ಕೇಳಿಕೊಂಡಿರಲಿಲ್ಲ. ಇದು ಅವರ ಕೆಲಸವೂ ಅಲ್ಲ. ವರದಿಯನ್ನು ಬಹಿರಂಗಗೊಳಿಸಿರುವುದು ಬೇಜವಾಬ್ದಾರಿಯ ನಡೆಯಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆಯಬೇಕು ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ಪಿ. ಸಿ. ಮೋದಿ ಅವರಿಗೆ ಸೂಚಿಸಲಾಗಿದೆ.

ಅಂಕಿ ಅಂಶ
* ₹ 2,700 ಕೋಟಿ: ಬಜೆಟ್‌ನಲ್ಲಿನ ಅತಿ ಶ್ರೀಮಂತರ ಸರ್ಚಾರ್ಜ್‌ನಿಂದ ಸಂಗ್ರಹವಾಗಲಿರುವ ಮೊತ್ತ

* ₹ 18 ಸಾವಿರ ಕೋಟಿ: ಹೆಚ್ಚುವರಿ ಸೆಸ್‌ನಿಂದ ಸಂಗ್ರಹವಾಗಲಿರುವ ಮೊತ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು