ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Google Layoffs: ಹೊಸ ಅಭ್ಯರ್ಥಿಯನ್ನು ಸಂದರ್ಶಿಸುತ್ತಿರುವಾಗಲೇ ಬಂತು ‘ಆ’ ಸಂದೇಶ!

Last Updated 28 ಜನವರಿ 2023, 14:01 IST
ಅಕ್ಷರ ಗಾತ್ರ

ನವದೆಹಲಿ: ಟೆಕ್ ದೈತ್ಯ ಗೂಗಲ್‌ ಕಂಪನಿಯಲ್ಲಿ ನೇಮಕಾತಿದಾರರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೊಸ ಅಭ್ಯರ್ಥಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಸಂದರ್ಶನ ಮಾಡುತ್ತಿರುವಾಗಲೇ ‘ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ’ ಎಂದು ಸಂದೇಶ ಬಂದಿದ್ದು, ಅಚ್ಚರಿ ಮೂಡಿಸಿದಂತಾಗಿದೆ.

ಡ್ಯಾನ್ ಲಾನಿಗನ್ ಯಾನ್ ಅವರು ಹೊಸ ಅಭ್ಯರ್ಥಿಯೊಬ್ಬರನ್ನು ಸಂದರ್ಶನ ನಡೆಸುತ್ತಿದ್ದ ವೇಳೆ ತಾವೇ ಉದ್ಯೋಗ ಕಳೆದುಕೊಂಡವರಾಗಿದ್ದಾರೆ. ತಮಗಾದ ಕಹಿ ಅನುಭವದ ಬಗ್ಗೆ ಲಿಂಕ್ಡ್​​ಇನ್​​ನಲ್ಲಿ ಅವರು ​ವಿವರಿಸಿದ್ದಾರೆ.

‘ದುರಾದೃಷ್ಟವಶಾತ್, ಸಾವಿರಾರು ಉದ್ಯೋಗಿಗಳ ಜತೆ ಕಳೆದ ಶುಕ್ರವಾರ ನಾನೂ ಗೂಗಲ್​ನಿಂದ ವಜಾಗೊಂಡಿದ್ದೇನೆ. ಗೂಗಲ್​ನಲ್ಲಿ ನನ್ನ ಉದ್ಯೋಗಾವಧಿಯು ಹೀಗೆ ಏಕಾಏಕಿ ಕೊನೆಗೊಳ್ಳಬಹುದು ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಸಂದರ್ಶನವೊಂದನ್ನು ನಡೆಸುತ್ತಿದ್ದಾಗಲೇ ನನ್ನ ಸಿಸ್ಟಂ ಅನ್ನು ಲಾಕ್ ಮಾಡಲಾಯಿತು’ ಎಂದು ಡ್ಯಾನ್ ಬರೆದುಕೊಂಡಿದ್ದಾರೆ.

‘ಒಂದು ವರ್ಷದ ಹಿಂದೆ, ನಾನು ಕನಸಿನ ಕಂಪನಿಯಲ್ಲಿ ಕನಸಿನ ಕೆಲಸವನ್ನು ಗಿಟ್ಟಿಸಿಕೊಂಡಿದ್ದೆ. ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದಾಗ ನನಗೆ ನೇಮಕಾತಿ ಕರೆ ಬಂದಿತ್ತು. ಆ ಕ್ಷಣ ನನಗೆ ಹೆಚ್ಚು ಸಂತೋಷಪಡಿಸಿತ್ತು’ ಎಂದು ಡ್ಯಾನ್ ನೆನಪಿಸಿಕೊಂಡಿದ್ದಾರೆ.

‘ಹೊಸಬರನ್ನು ಸಂದರ್ಶನ ನಡೆಸುತ್ತಿದ್ದಾಗಲೇ ಕಂಪನಿಯ ಆಂತರಿಕ ವೆಬ್​ಸೈಟ್ ಪ್ರವೇಶ ಬ್ಲಾಕ್ ಆಯಿತು. ಇದಾದ ಕೆಲವೇ ಕ್ಷಣಗಳಲ್ಲಿ ಕಂಪನಿಯ ಇ-ಮೇಲ್ ಕೂಡ ಬ್ಲಾಕ್ ಮಾಡಿದರು. ಅದಾದ 15-20 ನಿಮಿಷಗಳ ನಂತರ, ಗೂಗಲ್​ 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂಬ ಸುದ್ದಿ ಕಾಣಿಸಿತು’ ಎಂದು ಯಾನ್ ಹೇಳಿಕೊಂಡಿದ್ದಾರೆ.

ಗೂಗಲ್ ಕಂಪನಿಯು ಒಟ್ಟು 12 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಕಳೆದ ವಾರ ಘೋಷಿಸಿತ್ತು. ಜಾಗತಿಕವಾಗಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಭೀತಿಯ ನಡುವೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವ ತಂತ್ರಜ್ಞಾನ ಕಂಪನಿಗಳ ಸಾಲಿಗೆ ಈಗ ಗೂಗಲ್ ಕೂಡ ಸೇರಿದೆ.

‘ತುಸು ತಾಪತ್ರಯದ ಸುದ್ದಿಯೊಂದನ್ನು ನಾನು ಹಂಚಿಕೊಳ್ಳಬೇಕಿದೆ. ನಾವು ನಮ್ಮ ನೌಕರರ ಸಂಖ್ಯೆಯನ್ನು 12 ಸಾವಿರದಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದೇವೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್ ಪಿಚೈ ಅವರು ನೌಕರರಿಗೆ ಬರೆದಿರುವ ಇ–ಮೇಲ್‌ನಲ್ಲಿ ಹೇಳಿದ್ದರು.

ಇನ್ನಷ್ಟು ಕಠಿಣ ಸಮಸ್ಯೆ ಎದುರಿಸುವುದನ್ನು ತಪ್ಪಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಪಿಚೈ ಹೇಳಿದ್ದಾರೆ.

ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿದೆ.

ಇತ್ತೀಚೆಗೆ ಇ–ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ, ಭಾರತದಲ್ಲಿ 1 ಸಾವಿರ ಸೇರಿದಂತೆ ಜಾಗತಿಕವಾಗಿ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿತ್ತು.

ಎಚ್‌ಪಿ, ಮೆಟಾ, ಮತ್ತು ಟ್ವಿಟರ್‌ನಂತಹ ಕಂಪನಿಗಳು ಕೂಡ ವೆಚ್ಚ ತಗ್ಗಿಸುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿತದ ಮೊರೆ ಹೋಗಿವೆ.

ಮೆಟಾ ಮಾಲೀಕತ್ವದ ಫೇಸ್‌ಬುಕ್‌ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿತ್ತು. ಟ್ವಿಟರ್ ಕಂಪನಿಯು ಉದ್ಯಮಿ ಇಲಾನ್‌ ಮಸ್ಕ್ ಅವರ ತೆಕ್ಕೆಗೆ ಸೇರಿದ ನಂತರದಲ್ಲಿ ಶೇಕಡ 50ರಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT