ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್‌ಟಿ ವಂಚನೆ: ರಾಜ್ಯದಲ್ಲಿ ಕಡಿಮೆ’

ಕೇಂದ್ರ ತೆರಿಗೆ ಇಲಾಖೆಯ ಬೆಂಗಳೂರು ವಲಯದ ಮುಖ್ಯ ಆಯುಕ್ತ
Last Updated 1 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಎಸ್‌ಟಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಕಲಿ ಇನ್‌ವಾಯ್ಸ್‌ ಸೃಷ್ಟಿಸುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ' ಎಂದು ಕೇಂದ್ರೀಯ ತೆರಿಗೆ ಇಲಾಖೆಯ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತ ನಾಗೇಂದ್ರ ಕುಮಾರ್‌ ಡಿ.ಪಿ ಅವರು ಮಾಹಿತಿ ನೀಡಿದರು.

ಜಿಎಸ್‌ಟಿಗೆ ಎರಡು ವರ್ಷವ ಪೂರ್ಣಗೊಂಡಿರುವ ಕುರಿತು ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ವಂಚನೆ ಪತ್ತೆ ಮಾಡುವುದು ಸುಲಭವಾಗುತ್ತಿದೆ. ಹೊಸ ತೆರಿಗೆ ವ್ಯವಸ್ಥೆಯು ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಸ್ಥಿರತೆ ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘2018–19ರಲ್ಲಿ ಕರ್ನಾಟಕ ಕೇಂದ್ರೀಯ ತೆರಿಗೆ ವಲಯವು 475 ವಂಚನೆ ಪಕ್ರರಣಗಳನ್ನು ದಾಖಲಿಸಿದ್ದು, ಒಟ್ಟಾರೆ ವಂಚನೆ ಮೊತ್ತ ₹ 1,296.83 ಕೋಟಿಗಳಷ್ಟಿದೆ. ಇದರಲ್ಲಿ ₹ 383.30 ಕೋಟಿ ವಸೂಲಿ ಮಾಡಲಾಗಿದೆ.ಕಬ್ಬಿಣ ಮತ್ತು ಅದಿರು, ಪ್ಲಾಸ್ಟಿಕ್‌, ಅಡಿಕೆ, ರಾಸಾಯನಿಕ, ಜವಳಿ ವಲಯಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಿಗೆ ಇವೆ. ನಕಲಿ ಇನ್‌ವಾಯ್ಸ್‌, ನಕಲಿ ಇ–ವೇ ಬಿಲ್‌ ಸೃಷ್ಟಿಸಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪಡೆಯಲಾಗುತ್ತಿದೆ.

‘ವಲಯವು 2018ರ ಏಪ್ರಿಲ್‌ನಿಂದ 2019ರ ಮಾರ್ಚ್‌ವರೆಗೆ ₹ 38,374 ಕೋಟಿ ವರಮಾನ ಸಂಗ್ರಹಿಸಿದೆ. 2018ರ ಜುಲೈನಿಂದ 2019ರ ಮಾರ್ಚ್‌ವರೆಗಿನ ಅವಧಿಯಲ್ಲಿ ಸಂಗ್ರಹವಾಗಿರುವ ವರಮಾನವು 2017ರ ಜುಲೈನಿಂದ 2018ರ ಮಾರ್ಚ್‌ವರೆಗೆ ಸಂಗ್ರಹವಾಗಿರುವ ವರಮಾನಕ್ಕಿಂತಲೂ ಶೇ 23ರಷ್ಟು ಹೆಚ್ಚಿಗೆ ಇದೆ.

ಸೇವಾ ಕೇಂದ್ರದ ನೆರವು: ‘ತೆರಿಗೆದಾರರ ಅನುಕೂಲಕ್ಕಾಗಿ ವಲಯದ ಮುಖ್ಯ ಕಚೇರಿ ಮತ್ತು ಪ್ರತಿಯೊಂದು ಕಮಿಷನರೇಟ್‌ ಮಟ್ಟದಲ್ಲಿ ಜಿಎಸ್‌ಟಿ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಎಂಎಸ್‌ಎಂಇ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಾಲಕಾಲಕ್ಕೆ ಬದಲಾಗುವ ನಿಯಮಗಳ ಬಗ್ಗೆಯೂ ಅವರು ಮಾಹಿತಿ ನೀಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT