ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಔಷಧ, ಪರಿಕರ ಮೇಲಿನ ತೆರಿಗೆ ಇಳಿಕೆ

Last Updated 12 ಜೂನ್ 2021, 18:01 IST
ಅಕ್ಷರ ಗಾತ್ರ

ನವದೆಹಲಿ: ಕಪ್ಪು ಶಿಲೀಂಧ್ರದ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಮೇಲಿನ ತೆರಿಗೆಯನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶನಿವಾರ ರದ್ದುಮಾಡಿದೆ. ಕೋವಿಡ್‌ ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಬಳಸುವ ವೆಂಟಿಲೇಟರ್‌ಗಳು, ಪರೀಕ್ಷಾ ಕಿಟ್‌ಗಳು, ಸ್ಯಾನಿಟೈಸರ್‌ ಮತ್ತು ಇತರ ಪರಿಕರಗಳ ಮೇಲಿನ ತೆರಿಗೆಯ ಪ್ರಮಾಣವನ್ನು ತಗ್ಗಿಸಿದೆ.

ಈ ಕ್ರಮದಿಂದಾಗಿ, ಕೋವಿಡ್‌ ಚಿಕಿತ್ಸೆಯಲ್ಲಿ ಬಳಕೆಯಾಗುವ ಕೆಲವು ಅಗತ್ಯ ವಸ್ತುಗಳ ಬೆಲೆ ತಗ್ಗಲಿದೆ. ಕಪ್ಪು ಶಿಲೀಂಧ್ರಕ್ಕೆ ಔಷಧವಾಗಿ ಬಳಸುವ ಆ್ಯಂಫೊಟೆರಿಸಿನ್ ಮತ್ತು ಟಾಸಿಲಿಜ್ಯುಮ್ಯಾಬ್‌ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್‌ ಮೇಲಿನ ತೆರಿಗೆಯನ್ನು ಶೇಕಡ 5ಕ್ಕೆ ಇಳಿಸಲಾಗಿದೆ. ಆದರೆ, ಕೋವಿಡ್ ಲಸಿಕೆ ಮೇಲಿನ ತೆರಿಗೆಯು ಶೇ 5ರ ಪ್ರಮಾಣದಲ್ಲಿ ಮುಂದುವರಿಯಲಿದೆ.

ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್‌, ಪಲ್ಸ್ ಆಕ್ಸಿಮೀಟರ್ ಮತ್ತು ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳ ಮೇಲಿನ ತೆರಿಗೆಯನ್ನು ಈಗಿರುವ ಶೇ 12ರಿಂದ ಶೇ 5ಕ್ಕೆ ತಗ್ಗಿಸಲು ತೀರ್ಮಾನಿಸಲಾಗಿದೆ. ಆಂಬುಲೆನ್ಸ್‌ಗಳ ಮೇಲಿನ ತೆರಿಗೆಯನ್ನು ಶೇ 12ಕ್ಕೆ ಇಳಿಸಲು ಒಪ್ಪಿಗೆ ನೀಡಲಾಗಿದೆ. ಹೊಸ ತೆರಿಗೆ ಪ್ರಮಾಣವು ಸೆಪ್ಟೆಂಬರ್‌ವರೆಗೆ ಜಾರಿಯಲ್ಲಿ ಇರಲಿದೆ.

‘ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ತಗ್ಗಿಸಿರುವುದು ಒಳ್ಳೆಯದು. ಆದರೆ, ತೆರಿಗೆ ವಿನಾಯಿತಿ ಅವಧಿಯನ್ನು ಮಿತಿಗೊಳಿಸಿರುವ ಕಾರಣ, ಉದ್ದಿಮೆಗಳಿಗೆ ಹೊಸ ಹೂಡಿಕೆಗಳ ಬಗ್ಗೆ ಯೋಜನೆ ರೂಪಿಸಿಕೊಳ್ಳಲು ಹಾಗೂ ತಮ್ಮ ಸರಕು ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸಿಕೊಳ್ಳಲು ಕಷ್ಟವಾಗುತ್ತದೆ’ ಎಂದು ಡೆಲಾಯ್ಟ್‌ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್. ಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೋವಿಡ್ ಪರಿಹಾರ ಸಾಮಗ್ರಿಗಳಿಗೆ ಶೂನ್ಯ ತೆರಿಗೆಗೆ ಒಪ್ಪಿಗೆ ನೀಡಿಲ್ಲ ಎಂದು ಕಾಂಗ್ರೆಸ್ ಆಡಳಿತದ ರಾಜ್ಯಗಳ ಹಣಕಾಸು ಸಚಿವರು ಜಿಎಸ್‌ಟಿ ಮಂಡಳಿಯ ಸಭೆಯಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT