ಶನಿವಾರ, ಜುಲೈ 31, 2021
27 °C

ವಿಳಂಬ ರಿಟರ್ನ್‌ಗೆ ಪರಿಹಾರ: ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಳಂಬ ಶುಲ್ಕ ಮತ್ತು ವಿಳಂಬ ತೆರಿಗೆ ಪಾವತಿಗೆ ಬಡ್ಡಿ ವಿಧಿಸುವ ಸಂಬಂಧ ಜಿಎಸ್‌ಟಿ ಮಂಡಳಿ ಸಭೆಯು ಪರಿಹಾರ ಪ್ರಕಟಿಸಿದೆ.

ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರಿಗೆ ವಿಳಂಬ ಶುಲ್ಕ ಕಡಿಮೆ ಮಾಡಲಾಗಿದೆ. ತೆರಿಗೆ ಬಾಕಿ ಉಳಿಸಿಕೊಳ್ಳದವರಿಗೆ ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

ವಾರ್ಷಿಕ ₹ 5 ಕೋಟಿ ಮೊತ್ತದ ವಹಿವಾಟು ನಡೆಸುವವರು ತಡವಾಗಿ ಲೆಕ್ಕಪತ್ರ (ರಿಟರ್ನ್‌) ಸಲ್ಲಿಸಿರುವುದಕ್ಕೆ ವಿಧಿಸುವ ಬಡ್ಡಿಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಫೆಬ್ರುವರಿ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ರಿಟರ್ನ್‌ಗಳ ವಿಳಂಬ  ಸಲ್ಲಿಕೆಗೆ ವಿಧಿಸಲಾಗುವ ಬಡ್ಡಿಯನ್ನು ಶೇ 18 ರಿಂದ ಶೇ 9ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್‌ವರೆಗೆ ಈ ಬಡ್ಡಿ ಅನ್ವಯವಾಗಲಿದೆ.

‘ಮೇ, ಜೂನ್‌ ಮತ್ತು ಜುಲೈ ತಿಂಗಳ ರಿಟರ್ನ್‌ ಸಲ್ಲಿಕೆ ಗಡುವನ್ನು ಯಾವುದೇ ಬಡ್ಡಿ ಅಥವಾ ವಿಳಂಬ ಶುಲ್ಕ ಪಾವತಿ ಇಲ್ಲದೆ ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯ ನಂತರ ಅವರು ಈ ವಿವರ ನೀಡಿದ್ದಾರೆ.

 2017ರ ಜುಲೈನಿಂದ 2020ರ ಜನವರಿ ಅವಧಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರದ ನೋಂದಾಯಿತ ಸಂಸ್ಥೆಗಳು ಜಿಎಸ್‌ಟಿ ರಿಟರ್ನ್‌ ಸಲ್ಲಿಸಿರದಿದ್ದರೆ ಅವುಗಳಿಗೆ ವಿಳಂಬ ಶುಲ್ಕ ವಿಧಿಸುವುದಿಲ್ಲ. ತಿಂಗಳ ಮಾರಾಟ ರಿಟರ್ನ್‌ ಸಲ್ಲಿಸದ ಇತರರಿಗೂ ವಿಳಂಬ ಶುಲ್ಕವನ್ನು ಗರಿಷ್ಠ ₹ 500ಕ್ಕೆ ಮಿತಿಗೊಳಿಸಲಾಗಿದೆ.

ಸಿದ್ಧ ಸರಕಿನ ಆಮದು ಸುಂಕವು ಕಚ್ಚಾ ಸರಕಿಗಿಂತ ಹೆಚ್ಚು ಇರುವುದನ್ನು ಸರಿಪಡಿಸಲು  ಮಂಡಳಿಯು ಕಾರ್ಯಪ್ರವೃತ್ತವಾಗಿದೆ. ಪಾನ್‌ ಮಸಾಲಾ ಮೇಲೆ ತೆರಿಗೆ ವಿಧಿಸುವುದು ಮಂಡಳಿಯ ಮುಂದಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.

‘ಜಿಎಸ್‌ಟಿ ಸಂಗ್ರಹವು ಶೇ 45ರಷ್ಟು ಕಡಿಮೆಯಾಗಿದೆ. ಇದರಿಂದ ರಾಜ್ಯಗಳಿಗೆ ನೀಡುವ ಜಿಎಸ್‌ಟಿ ಪರಿಹಾರದಲ್ಲಿ ಸಮಸ್ಯೆ ಎದುರಾಗಿದೆ. ಜುಲೈನಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಒದಗಿಸುವುದರ ಒಂದೇ ಕಾರ್ಯಸೂಚಿಯು ಇರಲಿದೆ’ ಎಂದೂ ನಿರ್ಮಲಾ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು