ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ಕು ತ್ಯಾಜ್ಯ: ಸಾವಿರಾರು ಕೋಟಿ ಜಿಎಸ್‌ಟಿ ನಷ್ಟ

Published : 21 ಆಗಸ್ಟ್ 2023, 20:58 IST
Last Updated : 21 ಆಗಸ್ಟ್ 2023, 20:58 IST
ಫಾಲೋ ಮಾಡಿ
Comments

ಬೆಂಗಳೂರು: ಕಬ್ಬಿಣ ಹಾಗೂ ಉಕ್ಕು ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಕಬ್ಬಿಣ, ಉಕ್ಕು ತಯಾರಿಕಾ ಘಟಕಗಳಿಗೆ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲೇ ಪ್ರತಿ ವರ್ಷ ಸರಿಸುಮಾರು ₹1,000 ಕೋಟಿಗೂ ಹೆಚ್ಚು ಮೊತ್ತದ ಜಿಎಸ್‌ಟಿ ವರಮಾನ ನಷ್ಟವಾಗುತ್ತಿದೆ. ಇಡೀ ದೇಶದಲ್ಲಿ ಅಂದಾಜು ಕನಿಷ್ಠ ₹10 ಸಾವಿರ ಕೋಟಿ ಮೊತ್ತದ ಜಿಎಸ್‌ಟಿ ವರಮಾನ ನಷ್ಟವಾಗುತ್ತಿದೆ.

ಈಗಿರುವ ವ್ಯವಸ್ಥೆಯಲ್ಲಿ ಕಬ್ಬಿಣ ಮತ್ತು ಉಕ್ಕು ತ್ಯಾಜ್ಯವನ್ನು ಕಬ್ಬಿಣ, ಉಕ್ಕು ತಯಾರಿಕಾ ಘಟಕಗಳಿಗೆ ಮಾರಾಟ ಮಾಡುವವರು, ತ್ಯಾಜ್ಯ ಮಾರಾಟದಿಂದ ಪಡೆದ ಮೊತ್ತದ ಮೇಲೆ ಶೇಕಡ 18ರಷ್ಟನ್ನು ಜಿಎಸ್‌ಟಿ ರೂಪದಲ್ಲಿ ಪಾವತಿ ಮಾಡಬೇಕು. ತೆರಿಗೆ ರೂಪದಲ್ಲಿ ಕೊಡಬೇಕಿರುವ ಮೊತ್ತವನ್ನು ತ್ಯಾಜ್ಯ ಮಾರಾಟ ಮಾಡುವವರು, ತಯಾರಿಕಾ ಘಟಕಗಳಿಂದ ಸಂಗ್ರಹಿಸುತ್ತಾರೆ. ಅದಕ್ಕೆ ಅವರಲ್ಲಿ ಕೆಲವರು ಘಟಕಗಳಿಗೆ ಬಿಲ್ ಕೂಡ ನೀಡುತ್ತಿದ್ದಾರೆ.

ಆದರೆ, ನಂತರದ ಹಂತದಲ್ಲಿ ಜಿಎಸ್‌ಟಿ ರೂಪದಲ್ಲಿ ಪಾವತಿ ಮಾಡಬೇಕಿರುವ ಮೊತ್ತವನ್ನು ಪಾವತಿಸದೆ ನುಣುಚಿಕೊಳ್ಳುತ್ತಿದ್ದಾರೆ. ಕೆಲವರು ನಕಲಿ ಬಿಲ್ ತೋರಿಸಿ ಐಟಿಸಿ (ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್) ಸೌಲಭ್ಯವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.‌

ಈ ವಂಚನೆಯನ್ನು ತಡೆಯಬೇಕು ಎಂಬ ಉದ್ದೇಶದಿಂದ ಅಖಿಲ ಭಾರತ ಮಟ್ಟದ ಎಐಐಎಫ್‌ಎ ಸಂಘಟನೆಯು, ‘ತೆರಿಗೆಯನ್ನು ತ್ಯಾಜ್ಯ ಮಾರಾಟ ಮಾಡುವವರಿಂದ ಸಂಗ್ರಹಿಸುವ ಬದಲು, ಘಟಕಗಳಿಂದಲೇ ಪಡೆದುಕೊಳ್ಳುವುದು ಸೂಕ್ತ. ಇದರಿಂದ ತೆರಿಗೆ ಸೋರಿಕೆ ತಪ್ಪುತ್ತದೆ’ (ಜಿಎಸ್‌ಟಿ ಪರಿಭಾಷೆಯಲ್ಲಿ, ರಿವರ್ಸ್‌ ಚಾರ್ಜ್‌ ಮೆಕಾನಿಸಂ) ಎಂದು ಈ ವರ್ಷದ ಆರಂಭದಲ್ಲಿ ಜಿಎಸ್‌ಟಿ ಮಂಡಳಿಗೆ ಮನವಿ ಕೂಡ ಮಾಡಿದೆ. ಆದರೆ, ಈ ಮನವಿಗೆ ಪೂರಕವಾಗಿ ಮಂಡಳಿಯು ತೀರ್ಮಾನ ಕೈಗೊಂಡಿಲ್ಲ.

ತ್ಯಾಜ್ಯವನ್ನು ಖರೀದಿ ಮಾಡುವವರೇ ಜಿಎಸ್‌ಟಿ ಪಾವತಿಸುವ ವ್ಯವಸ್ಥೆಯ ಜಾರಿಯ ವಿಚಾರವು ಜಿಎಸ್‌ಟಿ ಮಂಡಳಿಯ ಮುಂದೆ ಪ್ರಸ್ತಾವದ ಹಂತದಲ್ಲಿ ಇದೆ ಎಂದು ಕೇಂದ್ರ ಉಕ್ಕು ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ ಈಚೆಗೆ ಹೇಳಿದ್ದಾಗಿ ‍‍ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಬೆಂಗಳೂರಿನಲ್ಲಿ ಸಂಗ್ರಹಿಸುವ ಉಕ್ಕು ತ್ಯಾಜ್ಯವನ್ನು ಆಂಧ್ರಪ್ರದೇಶದ ಹಿಂದೂಪುರ ಹಾಗೂ ಬೆಂಗಳೂರಿನ ಉಕ್ಕು ತಯಾರಿಕಾ ಕಾರ್ಖಾನೆಗಳಿಗೆ ರವಾನಿಸಲಾಗುತ್ತದೆ. ಮಹಾರಾಷ್ಟ್ರದ ಜಾಲ್ನಾ ಎಂಬಲ್ಲಿಗೂ ಇದನ್ನು ಸಾಗಿಸಲಾಗುತ್ತದೆ. ಕಾರ್ಖಾನೆಗಳ ಮಾಲೀಕರಿಂದ ಉಕ್ಕು ತ್ಯಾಜ್ಯಕ್ಕೆ ಜಿಎಸ್‌ಟಿ ಮೊತ್ತ ಸೇರಿಸಿ ಹಣ ಪಡೆಯುವ ತ್ಯಾಜ್ಯ ಸಂಗ್ರಹಕಾರರು ನಂತರದಲ್ಲಿ ಅದನ್ನು ತೆರಿಗೆ ಇಲಾಖೆಗೆ ಪಾವತಿ ಮಾಡದೆ ನುಣುಚಿಕೊಳ್ಳುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಬರಬೇಕಿರುವ ತೆರಿಗೆ ಮೊತ್ತ ಬಂದಿಲ್ಲ ಎಂಬ ಕಾರಣಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರನ್ನು ವಿಚಾರಣೆಗೆ ಗುರಿಪಡಿಸುವುದೂ ಇದೆ. ಇದನ್ನು ತಪ್ಪಿಸಬೇಕು ಎಂದಾದರೆ, ಉಕ್ಕು ತ್ಯಾಜ್ಯ ಮಾರಾಟದ ಮೇಲಿನ ಜಿಎಸ್‌ಟಿಯನ್ನು ಕಾರ್ಖಾನೆ ಮಾಲೀಕರಿಂದಲೇ ಸಂಗ್ರಹಿಸಿದರೆ ಒಳಿತು ಎಂದು ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ತ್ಯಾಜ್ಯದ ಜಿಎಸ್‌ಟಿ ವಂಚನೆಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳೂ ಶಾಮೀಲಾಗಿರಬಹುದು. ಅಲ್ಲದೆ, ವಾಣಿಜ್ಯ ತೆರಿಗೆ ಇಲಾಖೆಯ ವಿಚಕ್ಷಣೆ ಹಾಗೂ ಜಾರಿ ತಂಡದಲ್ಲಿ ಸಿಬ್ಬಂದಿ ಕೊರತೆಯೂ ಇದೆ ಎಂದು ತಿಳಿಸಿದರು. ಸಿಬ್ಬಂದಿ ಕೊರತೆ ಕುರಿತು ಪ್ರತಿಕ್ರಿಯೆ ಕೇಳಿ ಕಳುಹಿಸಿದ ಇ–ಮೇಲ್‌ಗೆ ಇಲಾಖೆಯಿಂದ ಉತ್ತರ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT