ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ ತಿಂಗಳ ಜಿಎಸ್‌ಟಿ ಸಂಗ್ರಹ ಶೇ 26ರಷ್ಟು ಹೆಚ್ಚಳ

7ನೇ ತಿಂಗಳಿನಲ್ಲಿಯೂ ₹1.4 ಲಕ್ಷ ಕೋಟಿ ದಾಟಿದ ವರಮಾನ ಸಂಗ್ರಹ
Last Updated 1 ಅಕ್ಟೋಬರ್ 2022, 11:13 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಸೆಪ್ಟೆಂಬರ್‌ನಲ್ಲಿ ₹1.47 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಶೇ 26ರಷ್ಟು ಹೆಚ್ಚಾಗಿದೆ.

2021ರ ಸೆಪ್ಟೆಂಬರ್‌ನಲ್ಲಿ ₹1.17 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು. 2022ರ ಆಗಸ್ಟ್‌ನಲ್ಲಿ ಸಂಗ್ರಹ ಆಗಿದ್ದ ₹1.43 ಲಕ್ಷ ಕೋಟಿಗೆ ಹೋಲಿಸಿದರೂ ಸೆಪ್ಟೆಂಬರ್‌ನಲ್ಲಿ ಆಗಿರುವ ಸಂಗ್ರಹವು ಹೆಚ್ಚಿನದ್ದಾಗಿದೆ.

ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಮತ್ತು ಜಿಎಸ್‌ಟಿ ಜಾಲತಾಣವು ಸ್ಥಿರವಾಗಿದೆ ಎನ್ನುವುದನ್ನು ಸೆಪ್ಟೆಂಬರ್‌ ತಿಂಗಳ ಅಂಕಿ–ಅಂಶವು ಸೂಚಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ಸೆಪ್ಟೆಂಬರ್‌ ತಿಂಗಳ ಒಟ್ಟು ಸಂಗ್ರಹದಲ್ಲಿ ಸಿಜಿಎಸ್‌ಟಿ ಪಾಲು ₹25,271 ಕೋಟಿ, ಎಸ್‌ಜಿಎಸ್‌ಟಿ ₹31,813 ಕೊಟಿ, ಐಜಿಎಸ್‌ಟಿ ₹80,464 ಕೋಟಿ ಹಾಗೂ ಸೆಸ್‌ ಮೂಲಕ ₹10,137 ಕೋಟಿ ಸಂಗ್ರಹ ಆಗಿದೆ.

ಸೆಪ್ಟೆಂಬರ್‌ನಲ್ಲಿ ಆಗಿರುವ ವರಮಾನ ಸಂಗ್ರಹವು ಆಗಸ್ಟ್‌ನಲ್ಲಿ ಸರಕು ಮತ್ತು ಸೇವೆಗಳನ್ನು ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಕೆಪಿಎಂಜಿ ಇಂಡಿಯಾದ ಪರೋಕ್ಷ ತೆರಿಗೆಯ ಪಾಲುದಾರ ಅಭಿಷೇಕ್‌ ಜೈನ್‌ ಹೇಳಿದ್ದಾರೆ.

ಹಬ್ಬದ ಋತು ಇರುವುದರಿಂದ ಮುಂಬರುವ ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹವು ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದ್ದಾರೆ.

ತೆರಿಗೆ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆಗಳು ಮತ್ತು ಹಲವು ವಿನಾಯಿತಿಗಳನ್ನು ಕೈಬಿಟ್ಟಿರುವ ಕಾರಣಗಳಿಂದಾಗಿ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಜಿಎಸ್‌ಟಿ ವ್ಯವಸ್ಥೆಯು ಸ್ಥಿರವಾಗುತ್ತಿರುವಂತೆ ತೋರುತ್ತಿದೆ ಎಂದು ಎನ್‌.ಎ. ಶಾ ಅಸೋಸಿಯೇಟ್ಸ್‌ನ ಪಾಲುದಾರ ಪರಾಗ್‌ ಮೆಹ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇ–ವೇ ಬಿಲ್‌: 2022ರ ಆಗಸ್ಟ್‌ನಲ್ಲಿ 7.29 ಲಕ್ಷ ಇ–ವೇ ಬಿಲ್‌ ಮತ್ತು 3.77 ಲಕ್ಷ ಇ–ಇನ್‌ವಾಯ್ಸ್‌ ಸೃಷ್ಟಿಯಾಗಿದ್ದು, ಎರಡನ್ನೂ ಒಳಗೊಂಡು 1.1 ಕೋಟಿಯನ್ನೂ ದಾಟಿದೆ. ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT