ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾಗಲಿದೆ ಮೊಬೈಲ್‌ ಫೋನ್‌: ಜಿಎಸ್‌ಟಿ ಶೇ 18ಕ್ಕೆ ಏರಿಕೆ

Last Updated 14 ಮಾರ್ಚ್ 2020, 13:47 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಮೊಬೈಲ್‌ ಫೋನ್‌ಗಳ ಮೇಲಿನ ತೆರಿಗೆಯನ್ನು ಶೇ 12ರಿಂದ 18ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ಮೊಬೈಲ್‌ ಫೋನ್‌ಗಳು ಹಾಗೂ ನಿರ್ದಿಷ್ಟ ಬಿಡಿಭಾಗಗಳ ಮೇಲಿನ ಜಿಎಸ್‌ಟಿ ಶೇ 18ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಜಿಎಸ್‌ಟಿ ಶೇ 6ರಷ್ಟು ಏರಿಕೆಯಾಗುವುದರಿಂದ ಮೊಬೈಲ್‌ ಫೋನ್‌ಗಳ ಬೆಲೆ ಹೆಚ್ಚಳವಾಗಲಿದೆ.

ಸಿದ್ಧಪಡಿಸಿದ ವಸ್ತುವಿನ ಮೇಲೆ ವಿಧಿಸಲಾಗುವ ತೆರಿಗೆಯು ಕಚ್ಚಾ ವಸ್ತುಗಳ ಮೇಲಿನ ತೆರಿಗೆಗಿಂತಲೂ ಕಡಿಮೆ ಇದ್ದಾಗ ಸರ್ಕಾರ ಹೆಚ್ಚುವರಿ ಹಣವನ್ನು ಮರು ಪಾವತಿಸಬೇಕಾಗುತ್ತದೆ. ಇಂಥದ್ದೇ ತೆರಿಗೆ ರಚನೆಯನ್ನು ಮೊಬೈಲ್‌ ಫೋನ್ ಹೊಂದಿದ್ದು, ಅದನ್ನು ಕೊನೆ ಮಾಡಲು ನಿರ್ಧರಿಸಲಾಗಿದೆ.

ಯಂತ್ರಗಳಿಂದ ಸಿದ್ಧಪಡಿಸಿದ ಹಾಗೂ ಕೈಗಳಿಂದ ತಯಾರಿಸಿದ ಬೆಂಕಿ ಪೊಟ್ಟಣಗಳಿಗೆ ಏಕರೂಪದ ತೆರಿಗೆ ಇರಲಿದ್ದು, ಜಿಎಸ್‌ಟಿ ಶೇ 12 ನಿಗದಿ ಪಡಿಸಲಾಗಿದೆ.ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲಿಸುವ (ಎಂಆರ್‌ಒ) ಸೇವೆಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ನವದೆಹಲಿಯಲ್ಲಿ ಶನಿವಾರ 39ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

₹5 ಕೋಟಿಗಿಂತಲೂ ಕಡಿಮೆ ವಹಿವಾಟು ಹೊಂದಿರುವಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ತೆರಿಗೆದಾರರಿಗೆ 2018–19ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿಆರ್‌ 9ಸಿ ರೂಪದಲ್ಲಿ ಹೊಂದಾಣಿಕೆ ಮಾಡಿದ ಲೆಕ್ಕ ಪಟ್ಟಿ ಸಲ್ಲಿಕೆಗೆ ಸಡಿಲಿಕೆ ನೀಡಲಾಗಿದೆ. ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆ ಮತ್ತು ಲೆಕ್ಕ ಪಟ್ಟಿ ಸಲ್ಲಿಕೆಗೆ 2020ರ ಜೂನ್‌ 30ರ ವರೆಗೂ ಅವಧಿ ವಿಸ್ತರಿಸಲಾಗಿದೆ.

ಜಿಎಸ್‌ಟಿ ಜಾಲತಾಣದ ತಾಂತ್ರಿಕ ದೋಷಗಳನ್ನು ಪರಿಹರಿಸುವುದು, ಸಾಮರ್ಥ್ಯ ವೃದ್ಧಿ, ಸಿಬ್ಬಂದಿಯಿಂದ ಉತ್ತಮ ಸ್ಪಂದನೆ, ಪರಿಹಾರ ಚುರುಕುಗೊಳಿಸುವುದರ ನಂದನ್‌ ನಿಲೇಕಣಿ ನೀಡಿರುವ ಪ್ರಸ್ತಾಪಗಳು ಇದೇ ವರ್ಷ ಜುಲೈ ವೇಳೆಗೆ ಅನುಷ್ಠಾನಗೊಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. 2021ರ ಜನವರಿಗೆ ಅನುಷ್ಠಾನದ ಅವಧಿ ನಿಗದಿಗೊಳಿಸಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಒಟ್ಟು ₹2 ಕೋಟಿಗಿಂತ ಕಡಿಮೆ ವಹಿವಾಟು ಮೌಲ್ಯ ಹೊಂದಿರುವ ಕೈಗಾರಿಕೆಗಳ 2017–18 ಮತ್ತು 2018–19ರ ಲೆಕ್ಕ ಪಟ್ಟಿ ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ವಿಳಂಬ ಶುಲ್ಕ ವಿಧಿಸದಿರಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT