ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಲಕ್ಷ ಕೋಟಿಗಿಂತ ಕೆಳಗಿಳಿದ ಜಿಎಸ್‌ಟಿ ಸಂಗ್ರಹ

Last Updated 6 ಜುಲೈ 2021, 19:14 IST
ಅಕ್ಷರ ಗಾತ್ರ

ನವದೆಹಲಿ: ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಸಂಗ್ರಹ ಆಗಿರುವ ಮಾಸಿಕ ವರಮಾನವು ₹ 1 ಲಕ್ಷ ಕೋಟಿಗಿಂತ ಕೆಳಕ್ಕೆ ಬಂದಿದೆ.

ಕೋವಿಡ್‌ ಪ್ರಕರಣ ಹೆಚ್ಚಳ ಮತ್ತು ಅದನ್ನು ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ನಿಂದಾಗಿ ವಾಣಿಜ್ಯ ವಹಿವಾಟುಗಳ ಮೇಲೆ ಪರಿಣಾಮ ಉಂಟಾಗಿದೆ. ಹೀಗಾಗಿ ಜೂನ್‌ನಲ್ಲಿ ₹ 92,849 ಕೋಟಿ ವರಮಾನ ಸಂಗ್ರಹ ಆಗಿದೆ.

2020ರ ಆಗಸ್ಟ್‌ ಬಳಿಕ ಅತ್ಯಂತ ಕಡಿಮೆ ಮಟ್ಟದ ವರಮಾನ ಸಂಗ್ರಹ ಇದಾಗಿದೆ. ಆದರೆ, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ವರಮಾನ ಸಂಗ್ರಹವು ಶೇಕಡ 2ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.

2020ರ ಜೂನ್‌ನಲ್ಲಿ ₹ 90,917 ಕೋಟಿ ವರಮಾನ ಸಂಗ್ರಹ ಆಗಿತ್ತು. ಈ ವರ್ಷದ ಜೂನ್‌ಗೂ ಮೊದಲು, ಮೇ ತಿಂಗಳವರೆಗೆ ಸತತ ಎಂಟು ತಿಂಗಳಿಂದ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಗಿಂತ ಹೆಚ್ಚು ಇತ್ತು.

ಜೂನ್‌ನಲ್ಲಿ ಆಗಿರುವ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ ಮೂಲಕ ₹ 16,424 ಕೋಟಿ, ರಾಜ್ಯ ಜಿಎಸ್‌ಟಿ ಮೂಲಕ ₹ 20,397 ಕೋಟಿ, ಸಮಗ್ರ ಜಿಎಸ್‌ಟಿ ಮೂಲಕ ₹ 49,079 ಕೋಟಿ ಹಾಗೂ ಸೆಸ್‌ ಮೂಲಕ ₹ 6,949 ಕೋಟಿ ಸಂಗ್ರಹ ಆಗಿದೆ ಎಂದು ಸಚಿವಾಲಯ ಹೇಳಿದೆ.

ಜೂನ್‌ನಲ್ಲಿ ಸಂಗ್ರಹ ಆಗಿರುವ ವರಮಾನವು ಮೇ ತಿಂಗಳಿನಲ್ಲಿ ಆಗಿರುವ ವಾಣಿಜ್ಯ–ವಹಿವಾಟುಗಳಿಗೆ ಸಂಬಂಧಿಸಿದ್ದಾಗಿದೆ. ಕೋವಿಡ್‌ನಿಂದಾಗಿ ಮೇ ತಿಂಗಳಿನಲ್ಲಿ ಬಹುತೇಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್‌ಡೌನ್‌ ಹೇರಿದ್ದವು ಎಂದು ಸಚಿವಾಲಯವು ತಿಳಿಸಿದೆ.

ಜೂನ್‌ನಲ್ಲಿ ಸೃಷ್ಟಿಯಾಗಿರುವ ಇ–ವೇ ಬಿಲ್ ಅಂಕಿ–ಅಂಶವನ್ನು ಗಮನಿಸಿದರೆ ಮುಂಬರುವ ತಿಂಗಳುಗಳಲ್ಲಿ ವರಮಾನ ಸಂಗ್ರಹವು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸಚಿವಾಲಯ ಹೇಳಿದೆ. ಮೇ ತಿಂಗಳಿನಲ್ಲಿ 3.99 ಕೋಟಿ ಇ–ವೇ ಬಿಲ್‌ ಸೃಷ್ಟಿಯಾಗಿತ್ತು. ಇದು ಜೂನ್‌ನಲ್ಲಿ 5.5 ಕೋಟಿಗೆ ಏರಿಕೆ ಕಂಡಿದೆ.

2020–21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಜಿಎಸ್‌ಟಿ ಸಂಗ್ರಹವು ಎರಡು ಪಟ್ಟು ಹೆಚ್ಚಿಗೆ ಇದೆ. ಕಳೆದ ವರ್ಷದ ಕಠಿಣ ಸ್ವರೂಪದ ಲಾಕ್‌ಡೌನ್‌ಗೆ ಹೋಲಿಸಿದರೆ ಈ ಬಾರಿಯ ಲಾಕ್‌ಡೌನ್‌ ಪರಿಣಾಮವು ಕಡಿಮೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT