ಗುರುವಾರ , ಜೂನ್ 30, 2022
25 °C

ಮೇ ತಿಂಗಳ ಜಿಎಸ್‌ಟಿ ಸಂಗ್ರಹ ₹ 1.02 ಲಕ್ಷ ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಮೇ ತಿಂಗಳಿನಲ್ಲಿ ₹ 1.02 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ ದಾಖಲೆಯ ₹ 1.41 ಲಕ್ಷ ಕೋಟಿಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ₹ 38,675 ಕೋಟಿಗಳಷ್ಟು ಕಡಿಮೆ ಸಂಗ್ರಹ ಆಗಿದೆ.

2020ರ ಮೇ ತಿಂಗಳಿಗೆ ಹೋಲಿಸಿದರೆ 2021ರ ಮೇ ತಿಂಗಳಿನಲ್ಲಿ ಶೇ 65ರಷ್ಟು ಹೆಚ್ಚು ತೆರಿಗೆ ಸಂಗ್ರಹ ಆದಂತಾಗಿದೆ. ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ 2020ರ ಮೇನಲ್ಲಿ ₹ 62,009 ಕೋಟಿಗಳಷ್ಟು ಮಾತ್ರವೇ ತೆರಿಗೆ ಸಂಗ್ರಹ ಆಗಿತ್ತು.

ಒಟ್ಟಾರೆ ಮೊತ್ತದಲ್ಲಿ ಸಿಜಿಎಸ್‌ಟಿ ಮೂಲಕ ₹ 17,592 ಕೋಟಿ, ಎಸ್‌ಜಿಎಸ್‌ಟಿ ಮೂಲಕ ₹ 22,653 ಕೋಟಿ, ಐಜಿಎಸ್‌ಟಿ ಮೂಲಕ ₹ 53,199 ಕೋಟಿ ಹಾಗೂ ಸೆಸ್‌ನಿಂದ ₹ 9,265 ಕೋಟಿ ಸಂಗ್ರಹ ಆಗಿದೆ ಎಂದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ನಿರಂತರವಾಗಿ ಎಂಟನೇ ತಿಂಗಳಿನಲ್ಲಿಯೂ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಯ ಗಡಿ ದಾಟಿದಂತಾಗಿದೆ. ಕೋವಿಡ್‌ನ ಎರಡನೇ ಅಲೆ ನಿಯಂತ್ರಿಸಲು ಬಹುತೇಕ ರಾಜ್ಯಗಳಲ್ಲಿ ಕಠಿಣ ಸ್ವರೂಪದ ಲಾಕ್‌ಡೌನ್‌ ಜಾರಿಯಲ್ಲಿದೆ. ಹೀಗಿದ್ದರೂ ಜಿಎಸ್‌ಟಿ ಸಂಗ್ರಹವು 4 1 ಲಕ್ಷ ಕೋಟಿಯ ಗಡಿಯನ್ನು ದಾಟಿದೆ ಎಂದು ಸಚಿವಾಲಯ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕವನ್ನು ಗಮನದಲ್ಲಿ ಇಟ್ಟುಕೊಂಡು, ವಾರ್ಷಿಕ ₹ 5 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ರಿಟರ್ನ್ಸ್‌ ಸಲ್ಲಿಸಲು ಜೂನ್‌ 4ರವರೆಗೆ ಅವಕಾಶ ನೀಡಲಾಗಿದೆ. ಇವರು ಸಾಮಾನ್ಯವಾಗಿ ಮೇ 20ರ ಒಳಗೆ ರಿಟರ್ನ್ಸ್‌ ಸಲ್ಲಿಸಬೇಕು. ಅದೇ ರೀತಿ ₹ 5 ಕೋಟಿಗಿಂತಲೂ ಕಡಿಮೆ ವಹಿವಾಟು ನಡೆಸುವವರಿಗೆ ಯಾವುದೇ ವಿಳಂಬ ಶುಲ್ಕ ಮತ್ತು ಬಡ್ಡಿ ಇಲ್ಲದೇ ಜುಲೈ ಮೊದಲ ವಾರದವರೆಗೂ ರಿಟರ್ನ್ಸ್‌ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಎಲ್ಲಾ ವಿಸ್ತರಿತ ದಿನಾಂಕಗಳು ಮುಕ್ತಾಯವಾದ ಬಳಿಕ ಮೇ ತಿಂಗಳ ನಿಜವಾದ ತೆರಿಗೆ ವರಮಾನ ತಿಳಿಯಲಿದ್ದು, ಅದು ಹೆಚ್ಚಿನ ಮಟ್ಟದಲ್ಲಿಯೇ ಇರಲಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು