ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಲಕ್ಷಾಂತರ ಸಣ್ಣ ವರ್ತಕರಿಗೆ ನೆರವು

ವಿನಾಯ್ತಿ ಮಿತಿ ಏರಿಕೆ: ಎಂಎಸ್‌ಎಂಇ ವಲಯದ ಸ್ಪರ್ಧಾತ್ಮಕತೆ ಹೆಚ್ಚಳ * ಉದ್ಯಮದ ಸ್ವಾಗತ
Last Updated 10 ಜನವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ ವಿನಾಯ್ತಿ ಮಿತಿಯನ್ನು ₹ 40 ಲಕ್ಷಕ್ಕೆ ಹೆಚ್ಚಿಸಿರುವ ಜಿಎಸ್‌ಟಿ ಮಂಡಳಿಯ ನಿರ್ಧಾರದಿಂದ
ಲಕ್ಷಾಂತರ ವರ್ತಕರಿಗೆ ನೆರವಾಗಲಿದೆ ಎಂದು ಉದ್ದಿಮೆ ವಲಯವು ಅಭಿಪ್ರಾಯಪಟ್ಟಿದೆ.

ಈ ನಿರ್ಧಾರದಿಂದ ಉತ್ಪಾದನಾ ವೆಚ್ಚ ತಗ್ಗಲಿದ್ದು, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸ್ಪರ್ಧಾತ್ಮಕತೆ ಹೆಚ್ಚಿಸಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಅಭಿಪ್ರಾಯಪಟ್ಟಿದೆ.

‘ಜಿಎಸ್‌ಟಿಯ ಹಲವಾರು ವಿಭಾಗಗಳಲ್ಲಿ ಗರಿಷ್ಠ ಮಿತಿ ಹೆಚ್ಚಿಸಿರುವುದರಿಂದ ‘ಎಂಎಸ್‌ಎಂಇ’ಗಳ ತೆರಿಗೆ ಪಾವತಿಸುವ ಬದ್ಧತೆ ಹೆಚ್ಚಲಿದೆ. ಸುಲಲಿತ ಉದ್ದಿಮೆ ವಹಿವಾಟಿಗೆ ಉತ್ತೇಜನ ಸಿಗಲಿದೆ. ಪ್ರತಿ ತಿಂಗಳ ತೆರಿಗೆ ಪಾವತಿಯನ್ನು ಮೂರು ತಿಂಗಳಿಗೆ ವಿಸ್ತರಿಸಿರುವುದು ಮತ್ತು ರಾಜಿ ತೆರಿಗೆ ವ್ಯವಸ್ಥೆಯಡಿ ವರ್ಷಕ್ಕೆ ಒಂದು ಬಾರಿ ರಿಟರ್ನ್‌ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿರುವುದು ತೆರಿಗೆ ವ್ಯವಸ್ಥೆಯನ್ನು ಸರಳೀಕೃತಗೊಳಿಸಲಿದೆ. ಎಂಎಸ್‌ಎಂಇ ವಲಯದ ಮೇಲಿನ ಅತಿ ದೊಡ್ಡ ಭಾರವನ್ನು ಇಳಿಸಿದೆ’ ಎಂದು ‘ಸಿಐಐ’ನ ಮಹಾ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಮಂಡಳಿಯು ಗುರುವಾರ ತೆಗೆದುಕೊಂಡ ನಿರ್ಧಾರದಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಲಕ್ಷಾಂತರ ಉದ್ಯಮಿಗಳಿಗೆ ಲಾಭ ಆಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ)
ಬಣ್ಣಿಸಿದೆ.

‘ವಿನಾಯ್ತಿ ಮಿತಿ ಹೆಚ್ಚಳದಿಂದ ನೋಂದಾಯಿತ ತೆರಿಗೆದಾರರ ಸಂಖ್ಯೆಯು ಶೇ 50 ರಿಂದ ಶೇ 60ರಷ್ಟು ಕಡಿಮೆಯಾಗಲಿದೆ. ಇದರಿಂದ ತೆರಿಗೆ ಪಾವತಿ ಹೊರೆ ಕಡಿಮೆಯಾಗಲಿದೆ’ ಎಂದು ಕೆಪಿಎಂಜಿ (ಇಂಡಿಯಾ) ಮುಖ್ಯಸ್ಥ ಸಚಿನ್‌ ಮೆನನ್‌ ಪ್ರತಿಕ್ರಿಯಿಸಿದ್ದಾರೆ.

‘ಸೇವೆ ಒದಗಿಸುವವರಿಗೂ ‘ಕಂಪೋಸಿಷನ್‌ ಸ್ಕೀಂ’ ಸೌಲಭ್ಯ ಒದಗಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ’ ಎಂದು ಡೆಲಾಯ್ಟ್‌ನ ಇಂಡಿಯಾ ಪಾರ್ಟನರ್‌ ಮಹೇಶ್‌ ಜೈಸಿಂಗ್‌ ಹೇಳಿದ್ದಾರೆ.

‘ನಿರ್ಮಾಣ ಹಂತದಲ್ಲಿ ಇರುವ ರಿಯಲ್‌ ಎಸ್ಟೇಟ್‌ ಯೋಜನೆಗಳಿಗೆ ಹೂಡುವಳಿ ತೆರಿಗೆ ಜಮೆಗೆ (ಐಟಿಸಿ) ಅವಕಾಶ ಕಲ್ಪಿಸಿಕೊಡದಿದ್ದರೆ ವಸತಿ ಯೋಜನೆಗಳ ಬೆಲೆಗಳು ಏರಿಕೆಯಾಗಲಿವೆ’ ಎಂದು ಟುಲಿಪ್‌ ಇನ್ಫ್ರಾಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಜೈನ್‌ ಆತಂಕ
ವ್ಯಕ್ತಪಡಿಸಿದ್ದಾರೆ.

ಗರಿಷ್ಠ ಮಿತಿಗಿಂತ ಕಡಿಮೆ ವಹಿವಾಟು ಇದ್ದವರೂ ಸ್ವ ಇಚ್ಛೆಯಿಂದ ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವ ಅವಕಾಶವನ್ನೂ ಒದಗಿಸಲಾಗಿದೆ.

ಏಪ್ರಿಲ್‌ 1 ರಿಂದ ಜಾರಿ
ವಾರ್ಷಿಕ ವಹಿವಾಟು ಆಧರಿಸಿ ತೆರಿಗೆ ಪಾವತಿಸುವ ವ್ಯವಸ್ಥೆ ಇರುವ ಕಂಪೋಸಿಷನ್‌ ಸ್ಕೀಮ್‌ (ರಾಜಿ ತೆರಿಗೆ) ಒಪ್ಪಿಕೊಳ್ಳುವವರ ವಹಿವಾಟಿನ ಗರಿಷ್ಠ ಮಿತಿಯನ್ನು ₹ 1 ಕೋಟಿಯಿಂದ ₹ 1.5 ಕೋಟಿಗೆ ಹೆಚ್ಚಿಸಲಾಗಿದೆ. ಇದು ಈ ವರ್ಷದ ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ. ಈ ವ್ಯವಸ್ಥೆಯಡಿ ವಹಿವಾಟು ಆಧರಿಸಿ ಶೇ 1ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ರೆಸ್ಟೊರೆಂಟ್ಸ್‌ಗಳು
ಶೇ 5ರಷ್ಟು ಪಾವತಿಸಬೇಕಾಗಿದೆ.

₹ 50 ಲಕ್ಷದವರೆಗೆ ವಾರ್ಷಿಕ ವಹಿವಾಟು ನಡೆಸುವ ಸರಕು ಮತ್ತು ಸೇವೆಗಳ ಪೂರೈಕೆದಾರರು ಮತ್ತು ಸೇವೆ ಒದಗಿಸುವವರು ರಾಜಿ ತೆರಿಗೆ ಆಯ್ಕೆ ಮಾಡಿಕೊಳ್ಳಲು ಅರ್ಹರಾಗಲಿದ್ದಾರೆ. ಇವರು ಶೇ 6ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಈ ಎಲ್ಲ ಕ್ರಮಗಳು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಹೆಚ್ಚು ಪ್ರಯೋಜನಕಾರಿಯಾಗಿರಲಿವೆ.

‘ರಾಜಿ ತೆರಿಗೆ’ಗೆ ಒಳಪಟ್ಟವರು ವರ್ಷಕ್ಕೆ ಒಂದು ಬಾರಿ ತೆರಿಗೆ ಲೆಕ್ಕಪತ್ರ (ರಿಟರ್ನ್‌) ಸಲ್ಲಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಮಾತ್ರ ತೆರಿಗೆ ಪಾವತಿಸಬಹುದಾಗಿದೆ.

ಶೇ 1ರಷ್ಟು ವಿಪತ್ತು ತೆರಿಗೆಗೆ ಸಮ್ಮತಿ
.ಅತಿವೃಷ್ಟಿಯಿಂದ ತೀವ್ರವಾಗಿ ನಲುಗಿರುವ ಕೇರಳವು ಹೆಚ್ಚಿನ ಸಂಪನ್ಮೂಲ ಸಂಗ್ರಹಿಸಲು ರಾಜ್ಯದ ಒಳಗಿನ ಮಾರಾಟಕ್ಕೆ ಎರಡು ವರ್ಷಗಳವರೆಗೆ ಶೇ 1ರಷ್ಟು ವಿಪತ್ತು ಸೆಸ್‌ ವಿಧಿಸುವುದಕ್ಕೆ ಮಂಡಳಿಯು ಅನುಮತಿ ನೀಡಿದೆ.

ಸಚಿವರ ಸಮಿತಿ ರಚನೆ: ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌ ಮತ್ತು ಲಾಟರಿಗಳನ್ನು ಸೇರ್ಪಡೆ ಮಾಡುವ ಬಗ್ಗೆ ನಿರ್ಧಾರಕ್ಕೆ ಬರಲು ಮಂಡಳಿಯು ಏಳು ಸದಸ್ಯರ ಸಮಿತಿ ರಚಿಸಿದೆ.

ಈ ವಿಷಯದ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿದ್ದರಿಂದ
ಈ ನಿರ್ಧಾರಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT