ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್‌: ಕೇಂದ್ರ ಘೋಷಿಸಿದ ಪರಿಹಾರಗಳ ಮುಖ್ಯಾಂಶಗಳು ಇಲ್ಲಿದೆ

Last Updated 26 ಮಾರ್ಚ್ 2020, 9:37 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ 21 ದಿನಗಳ ವರೆಗೂ ಲಾಕ್‌ಡೌನ್‌ ಘೋಷಿಸಿರುವುದರಿಂದ ಬಡವರು ಹಾಗೂ ಕಾರ್ಮಿಕರಿಗೆ ನಿತ್ಯ ಬದುಕು ದೂಡುವುದೇ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಹೊತ್ತಿನ ಹಸಿವು ನೀಗಿಸಲು ಕೂಲಿ ಮಾಡಿಯೇ ಗಳಿಸಬೇಕಾದ ಸ್ಥಿತಿಯಲ್ಲಿ ಕೋಟ್ಯಂತರ ಜನರಿದ್ದಾರೆ. ಕೋವಿಡ್‌–19ನಿಂದ ವ್ಯಾಪಾರ, ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಈ ಎಲ್ಲದರಿಂದ ಆರ್ಥಿಕತೆಗೂ ಪೆಟ್ಟು ಬೀಳಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಅವರು ಗುರುವಾರ ದೇಶದ ಬಡ ಜನರಿಗಾಗಿಯೇ ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಘೋಷಣೆಗಳ ಪ್ರಮುಖಾಂಶಗಳು:

* ವಲಸೆ ಬಂದಿರುವ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ ₹1.7 ಲಕ್ಷ ಕೋಟಿ ಪ್ಯಾಕೇಜ್‌ ಸಿದ್ಧವಿದೆ. ಯಾರನ್ನೂ ಹಸಿವಿನಿಂದ ಬಳಲಲು ಬಿಡುವುದಿಲ್ಲ.

* ಮಹಿಳಾ ಜನ ಧನ್‌ ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ ₹500 ಪಡೆಯಲಿದ್ದಾರೆ. ಇದು ಮುಂದಿನ 3 ತಿಂಗಳ ವರೆಗೂ ಮುಂದುವರಿಯಲಿದೆ. ಇದರಿಂದ 20 ಕೋಟಿ ಮಹಿಳಾ ಖಾತೆದಾರರಿಗೆ ಅನುಕೂಲವಾಗಲಿದೆ.

* ಮುಂದಿನ 3 ತಿಂಗಳ ವರೆಗೂ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ನಡೆಯಲಿದೆ. ಇದರ ಅಡಿಯಲ್ಲಿ 80 ಕೋಟಿ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥ ಸಿಗಲಿದೆ. ಈಗಾಗಲೇ ಪ್ರತಿ ವ್ಯಕ್ತಿಗೆ ನಿಗದಿಯಾಗಿರುವ 5ಕೆ.ಜಿ ಅಕ್ಕಿ ಅಥವಾ ಗೋದಿಯ ಜತೆಗೆ 5ಕೆ.ಜಿ. ಆಹಾರ ಪದಾರ್ಥ ಉಚಿತವಾಗಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಬೇಳೆ ಕಾಳು ಸಿಗಲಿದೆ.

* ಕೊರೊನಾ ವೈರಸ್‌ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ 3 ತಿಂಗಳ ವರೆಗೂ ₹50 ಲಕ್ಷ ಮೊತ್ತದ ಆರೋಗ್ಯ ವಿಮೆ ಒದಗಿಸಲಾಗುತ್ತದೆ.

* ನೇರ ನಗದು ವರ್ಗಾವಣೆ ಯೋಜನೆ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. 8.6 ಕೋಟಿ ರೈತರು ಏಪ್ರಿಲ್‌ ಮೊದಲ ವಾರದಲ್ಲಿ ₹2,000 ಪಡೆಯಲಿದ್ದಾರೆ.

* ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್‌ಗಳು ಉಚಿತವಾಗಿ ಪೂರೈಕೆಯಾಗಲಿದೆ. ಇದರಿಂದಾಗಿ 8 ಕೋಟಿ ಮಹಿಳೆಯರು ಲಾಭ ಪಡೆಯಲಿದ್ದಾರೆ.

* ಹಿರಿಯ ನಾಗರಿಕರು, ವಿಧವೆ, ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ ₹1,000 ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ.

* ಮುಂದಿನ 3 ತಿಂಗಳ ಇಪಿಎಫ್‌ ಮೊತ್ತವನ್ನು (ಸಂಸ್ಥೆಗಳು ಮತ್ತು ಉದ್ಯೋಗಿಗಳ) ಸರ್ಕಾರವೇ ತುಂಬಲಿದೆ.

* 100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ ₹15,000ದ ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿಎಫ್‌ ಕೊಡುಗೆ.

* ಇಪಿಎಫ್‌ ಯೋಜನೆಗೆ ತಿದ್ದುಪಡಿ ತರಲಾಗುತ್ತದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ 75ರಷ್ಟು ಇಪಿಎಫ್‌ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ 75ರಷ್ಟು ಮುಂಗಡ ಮೊತ್ತ; ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್‌ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

* ಕಟ್ಟಡ ನಿರ್ಮಾಣ ಕಾರ್ಮಿಕರ ( ನೋಂದಾಯಿತ 3.5 ಕೋಟಿ ಕಾರ್ಮಿಕರು) ಪರಿಹಾರಕ್ಕಾಗಿ ರಾಜ್ಯ ಸರ್ಕಾರಗಳು ₹31,000 ಕೋಟಿ ನಿಧಿಯನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

* ಡಿಸ್ಟ್ರಿಕ್ಟ್‌ ಮಿನೆರಲ್‌ ಫಂಡ್‌: ವೈದ್ಯಕೀಯ ಪರೀಕ್ಷೆ, ಆರೋಗ್ಯ ಸೇವೆಗಳಿಗಾಗಿ ರಾಜ್ಯ ಸರ್ಕಾರಗಳು ಈ ಫಂಡ್‌ನ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸೂಚಿಸಿದೆ

* ನರೇಗಾ ಕಾರ್ಯಕ್ರಮದ ಅಡಿಯಲ್ಲಿ ದಿನ ಕೂಲಿಯನ್ನು ₹182ರಿಂದ ₹202ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ 5 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT