ಗುರುವಾರ , ಏಪ್ರಿಲ್ 2, 2020
19 °C
ಅನಧಿಕೃತ ಹೋಮ್‌ ಸ್ಟೇಗಳ ನೋಂದಣಿಗೆ ಅಸೋಸಿಯೇಷನ್ ಮನವಿ

ಹೋಮ್‌ ಸ್ಟೇ ಉದ್ದಿಮೆಗೂ ಜಿಎಸ್‌ಟಿ! ಮಾಲೀಕರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ:ಕಡಿಮೆ ಆದಾಯ ಪಡೆಯುವ ಹೋಮ್‌ ಸ್ಟೇ ಉದ್ದಿಮೆಗೂ ಸರ್ಕಾರದ ಜಿಎಸ್‌ಟಿ ಪಾವತಿಸುವ ನಿಯಮ ತಂದಿದೆ ಇದನ್ನು ಕೈ ಬಿಡಬೇಕು ಎಂದು ಜಿಲ್ಲಾ ಹೋಮ್‌ ಸ್ಟೇ ಅಸೋಸಿಯೇಷನ್ ಮನವಿ ಮಾಡಿದೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಬಿ.ಎ ಅನಂತಶಯನ ಮಾತನಾಡಿ, ಕೊಡಗಿನಲ್ಲಿ ಕಾನೂನು ಬಾಹಿರವಾಗಿ ತಲೆ ಎತ್ತಿರುವ ನೂರಾರು ಹೋಮ್‌ ಸ್ಟೇಗಳಿಂದ ಅಧಿಕೃತ ಹೋಮ್‌ ಸ್ಟೇಗಳಿಗೆ ತೊಂದರೆಯಾಗಿದೆ. ಈ ನಡುವೆ ವಾರ್ಷಿಕ ₹5ಲಕ್ಷಕ್ಕಿಂತಲೂ ಕಡಿಮೆ ಆದಾಯ ಪಡೆಯುವ ಹೋಮ್‌ ಸ್ಟೇಗಳಿಗೂ ಜಿಎಸ್‌ಟಿ ಪಾವತಿಸುವ ನಿಯಮಗಳಿಂದ ತೊಂದರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಅನಾಮಧೇಯ ವ್ಯಕ್ತಿಯೋರ್ವ ಹೋಮ್‌ ಸ್ಟೇಗಳ ಕಾರ್ಯವೈಖರಿ ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಪತ್ರ ಬರೆದಿದ್ದಾರೆ. ಇದರಿಂದ ಜಿಎಸ್‌ಟಿ ಪಾವತಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ. ಆದರೆ, ಇದೀಗ ಕನಿಷ್ಠ ವಾರ್ಷಿಕ ವ್ಯವಹಾರ ನಡೆಸುವ ಹೋಮ್‌ ಸ್ಟೇಗಳು ಜಿಎಸ್‌ಟಿಯಿಂದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ನಿಯಮ ಬಾಹಿರವಾಗಿ ತಲೆ ಎತ್ತಿರುವ ನೂರಾರು ಹೋಮ್‌ ಸ್ಟೇಗಳು ಪ್ರವಾಸಿಗರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವುದು, ಪ್ರವಾಸೋದ್ಯಮ ಇಲಾಖೆ ಮೂಲಕ ನೋಂದಣಿ ಮಾಡದಿರುವುದು, ಸರ್ಕಾರದ ಮಾನದಂಡ ಪಾಲಿಸದಿರುವುದು ತೆರಿಗೆ ಇಲಾಖೆಯ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ನೋಂದಣಿ ಮಾಡಿಕೊಳ್ಳಿ: ಅನಧಿಕೃತವಾಗಿ ಹೋಮ್‌ ಸ್ಟೇ ನಡೆಸುತ್ತಿರುವವರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸಿಗರಿಂದ ದುಪ್ಪಟ್ಟು ಹಣ ಸಂಗ್ರಹಿಸುತ್ತಿದ್ದರೆ ಎನ್ನುವ ದೂರುಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿವೆ. ಆದ್ದರಿಂದ ಅನಧಿಕೃತ ಹೋಮ್‌ ಸ್ಟೇಗಳ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ನಿಯಮದಂತೆ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಿ ಎಂದು ಕೋರಿದರು.

ತೆರಿಗೆ ಮತ್ತು ಸರಕು ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಈಗಾಗಲೇ ಅಸೋಸಿಯೇಷನ್ ನಿಯೋಗ ತೆರಳಿ ಚರ್ಚಿಸಿದೆ. ಆದರೆ, ಅಧಿಕಾರಿಗಳು ಕೂಡ ಅನಧಿಕೃತ ಹೋಮ್‌ ಸ್ಟೇಗಳ ಪಟ್ಟಿ ನೀಡಲು ತಿಳಿಸಿದ್ದಾರೆ. ಆದರೆ, ಪಟ್ಟಿ ನೀಡುವುದೂ ನಮ್ಮ ಕೆಲಸವಲ್ಲ. ಅಧಿಕಾರಿಗಳ ಕೆಲಸವಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅನಧಿಕೃತ ಹೋಮ್‌ ಸ್ಟೇಗಳನ್ನು ಪತ್ತೆಹಚ್ಚಲು ಇಲಾಖೆ ಮಟ್ಟದಲ್ಲಿ ಆಗುತ್ತಿಲ್ಲ ಎಂದು ದೂರಿದರು.

ಜಿಎಸ್‌ಟಿ ಪಾವತಿಗೆ ಕನಿಷ್ಟ ₹20 ಲಕ್ಷ ಆದಾಯಮಿತಿ ಇದೆ. ಹೋಮ್‌ ಸ್ಟೇ ಉದ್ದಿಮೆಗೂ ಇದೀಗ ತೆರಿಗೆ ವಿಧಿಸಲು ಮುಂದಾಗಿದೆ. ಇದರಿಂದ ಪ್ರವಾಸೋದ್ಯಮವನ್ನು ನಂಬಿರುವ ಹೋಮ್‌ ಸ್ಟೇ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅನಧಿಕೃತ ಹೋಮ್‌ ಸ್ಟೇ ಪತ್ತೆಗೆ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಮಾರ್ಚ್ 20ರೊಳಗೆ ನೋಂದಾಯಿಸಲು ಗಡುವನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಇದರಿಂದ ಸಮಸ್ಯೆ ದೂರವಾಗುತ್ತದೆ ಎಂಬ ವಿಶ್ವಾಸ ಇದೆ. ಇದರೊಂದಿಗೆ ಸರ್ವೀಸ್ ಅಪಾರ್ಟ್‌ಮೆಂಟ್, ಗೆಸ್ಟ್ ಹೌಸ್‌ಗಳು ಜಿಲ್ಲೆಯಲ್ಲಿದ್ದು ಇದಕ್ಕೆ ಯಾವುದೇ ಮಾನದಂಡವಿಲ್ಲದಿರುವುದು ಬೇಸರದ ಸಂಗತಿ ಎಂದರು.

ಅಸೋಸಿಯೇಷನ್ ನಿರ್ದೇಶಕಿ ಮೋಂತಿ ಗಣೇಶ್ ಮಾತನಾಡಿ, ಅನಧಿಕೃತ ಹೋಮ್‌ ಸ್ಟೇಗಳು ನೋಂದಣಿ ಮಾಡುವ ಮೂಲಕ ಕೊಡಗು ಪ್ರವಾಸೋದ್ಯಮವನ್ನು ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಾನದಂಡ ಪಾಲಿಸಿ ಹೋಂಸ್ಟೇಗಳು ಸೇವೆ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಅನಧಿಕೃತ ಹೋಮ್‌ ಸ್ಟೇ ಗಳ ಬಗ್ಗೆ ಮಾಹಿತಿ ನೀಡಲು ಮೊಬೈಲ್: 94480 48829, 92466 93234ಗೆ ಸಂಪರ್ಕಿಸಬೇಕೆಂದು ಕೋರಿದರು.
ನಿರ್ದೇಶಕ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಗ್ರಾ.ಪಂ ಮಟ್ಟದಲ್ಲಿ ಹೋಮ್‌ ಸ್ಟೇ ಆರಂಭಿಸಲು ನೀಡುವ ಪರವಾನಿಗೆಗೆ ನಿಗದಿತ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ಮೀನಾ ಕಾರ್ಯಪ್ಪ, ಮಾಜಿ ಅಧ್ಯಕ್ಷ ಮದನ್ ಸೋಮಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು