ನವದೆಹಲಿ (ರಾಯಿಟರ್ಸ್): ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತಾನು ಯಾವುದೇ ಕಂಪನಿಗಳಲ್ಲಿ ಮಾಡಬಹುದಾದ ಹೂಡಿಕೆ ಹಾಗೂ ನೀಡಬಹುದಾದ ಸಾಲಕ್ಕೆ ಮಿತಿ ಹೇರಲು ಚಿಂತನೆ ನಡೆಸಿದೆ.
ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್‌ಐಸಿ ಮಾಡಿರುವ ಕೆಲವು ಹೂಡಿಕೆಗಳು ಟೀಕೆಗೆ ಗುರಿಯಾಗಿವೆ. ಈ ಹಿನ್ನೆಲೆಯಲ್ಲಿ, ಒಂದೇ ಕಡೆ ಭಾರಿ ಹೂಡಿಕೆ ಮಾಡಿ ಅಥವಾ ಒಂದೇ ಕಂಪನಿಗೆ ಹೆಚ್ಚು ಸಾಲ ನೀಡಿ ರಿಸ್ಕ್ ಹೆಚ್ಚಿಸಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಎಲ್‌ಐಸಿಯಲ್ಲಿ ಈ ಆಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಎಂಬ ಹೆಗ್ಗಳಿಕೆ ಎಲ್‌ಐಸಿಗೆ ಇದೆ. ಒಂದೇ ಪ್ರವರ್ತಕರಿಗೆ ಸೇರಿದ ಕಂಪನಿಗಳಲ್ಲಿ ಹಾಗೂ ಸಮೂಹದಲ್ಲಿ ಮಾಡುವ ಹೂಡಿಕೆ ಮತ್ತು ಅವುಗಳಿಗೆ ನೀಡುವ ಸಾಲಕ್ಕೆ ಮಿತಿ ಹಾಕಲು ಎಲ್‌ಐಸಿ ಆಲೋಚಿಸುತ್ತಿದೆ ಎಂದು ಮೂಲಗಳು ವಿವರಿಸಿವೆ.
ಈ ಆಲೋಚನೆಗೆ ಎಲ್‌ಐಸಿ ಆಡಳಿತ ಮಂಡಳಿಯ ಅನುಮೋದನೆ ಬೇಕಿದೆ. ಈ ಕುರಿತು ಎಲ್‌ಐಸಿ ಹಾಗೂ ಕೇಂದ್ರ ಹಣಕಾಸು ಸಚಿವಾಲಯದಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈಗಿರುವ ನಿಯಮಗಳ ಪ್ರಕಾರ ಎಲ್‌ಐಸಿ ಒಂದು ಕಂಪನಿಯ ಶೇಕಡ 10ಕ್ಕಿಂತ ಹೆಚ್ಚಿನ ಪ್ರಮಾಣದ ಷೇರುಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಹೊಸ ಆಲೋಚನೆಯು ಜಾರಿಗೆ ಬಂದಲ್ಲಿ, ಎಲ್‌ಐಸಿ ಹೂಡಿಕೆಗಳ ಮೇಲೆ ಇನ್ನಷ್ಟು ಮಿತಿಗಳು ಎದುರಾಗಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.