‘ಅದಾನಿ’ ಪ್ರತಿಕ್ರಿಯೆ ಎಲ್‌ಐಸಿಯಿಂದ ಪರಿಶೀಲನೆ

ನವದೆಹಲಿ: ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಗೆ ಅದಾನಿ ಸಮೂಹ ನೀಡಿರುವ ಪ್ರತಿಕ್ರಿಯೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಪರಿಶೀಲಿಸುತ್ತಿದ್ದು, ಸಮೂಹದ ಆಡಳಿತ ಮಂಡಳಿ ಜೊತೆ ಕೆಲವು ದಿನಗಳಲ್ಲಿ ಮಾತುಕತೆ ನಡೆಸಲಿದೆ.
‘ವಾಸ್ತವ ಸಂಗತಿ ಏನು ಎಂಬುದು ನಮಗೆ ಖಚಿತವಾಗಿಲ್ಲ... ನಾವು ದೊಡ್ಡ ಹೂಡಿಕೆದಾರ ಆಗಿರುವ ಕಾರಣ, ಅಗತ್ಯ ಪ್ರಶ್ನೆಗಳನ್ನು ಕೇಳುವ ಅಧಿಕಾರ ನಮಗೆ ಇದೆ. ನಾವು ಖಂಡಿತವಾಗಿಯೂ ಅವರ ಜೊತೆ ಮಾತುಕತೆ ನಡೆಸುತ್ತೇವೆ’ ಎಂದು ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್ ಅವರು ತಿಳಿಸಿದ್ದಾರೆ.
‘ನಾವು ಅದಾನಿ ಸಮೂಹ ನೀಡಿರುವ 413 ಪುಟಗಳ ವರದಿಯನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ದೀರ್ಘಾವಧಿ ಹೂಡಿಕೆದಾರರು ತನ್ನ ಮೇಲೆ ಸಂಪೂರ್ಣ ವಿಶ್ವಾಸ ಇರಿಸಿದ್ದಾರೆ ಎಂದು ಅದಾನಿ ಸಮೂಹ ಹೇಳಿದ ನಂತರದಲ್ಲಿ ಕುಮಾರ್ ಅವರು ಈ ಹೇಳಿಕೆ ನೀಡಿದ್ದಾರೆ.
‘ತೀರಾ ಕೆಟ್ಟದ್ದೇನೂ ಇಲ್ಲವೆಂದಾದರೆ ಎಲ್‌ಐಸಿ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿರುತ್ತದೆ. ಈಗಿನ ಸಂದರ್ಭದಲ್ಲಿ ಕೆಟ್ಟದ್ದು ಯಾವುದೂ ಕಾಣುತ್ತಿಲ್ಲ’ ಎಂದು ಅವರು ಅದಾನಿ ಸಮೂಹದ ವಿಚಾರವಾಗಿ ಹೇಳಿದ್ದಾರೆ.
ಒಟ್ಟು ಹೂಡಿಕೆ ₹ 36 ಸಾವಿರ ಕೋಟಿ
ಮುಂಬೈ (ಪಿಟಿಐ): ಅದಾನಿ ಸಮೂಹದ ಈಕ್ವಿಟಿ ಹಾಗೂ ಸಾಲಪತ್ರಗಳಲ್ಲಿ ತಾನು ತೊಡಗಿಸಿರುವ ಹಣದ ಒಟ್ಟು ಮೊತ್ತ ₹ 36,474 ಕೋಟಿ ಎಂದು ಎಲ್‌ಐಸಿ ಸೋಮವಾರ ಹೇಳಿದೆ. ತನ್ನ ಒಟ್ಟು ಹೂಡಿಕೆಯ ಶೇಕಡ 1ಕ್ಕಿಂತ ಕಡಿಮೆ ಮೊತ್ತವು ಅದಾನಿ ಸಮೂಹದಲ್ಲಿ ವಿನಿಯೋಗವಾಗಿದೆ ಎಂದು ಅದು ತಿಳಿಸಿದೆ.
ಎಲ್‌ಐಸಿ ನಿರ್ವಹಿಸುತ್ತಿರುವ ಹೂಡಿಕೆಗಳ ಒಟ್ಟು ಮೊತ್ತವು 2022ರ ಸೆಪ್ಟೆಂಬರ್‌ಗೆ ₹ 41.66 ಲಕ್ಷ ಕೋಟಿ ಆಗಿತ್ತು. ಅದಾನಿ ಸಮೂಹದ ಕೆಲವು ಕಂಪನಿಗಳ ಷೇರುಮೌಲ್ಯವು ಭಾರಿ ಇಳಿಕೆ ಕಾಣುತ್ತಿರುವ ಹೊತ್ತಿನಲ್ಲಿ ಎಲ್‌ಐಸಿ ಈ ಮಾಹಿತಿ ನೀಡಿದೆ. ಎಲ್‌ಐಸಿ, ದೇಶದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ.
ಈಕ್ವಿಟಿಗಳಲ್ಲಿ ತೊಡಗಿಸಿರುವ ಹಣದ ಮೊತ್ತವು ₹ 30,127 ಕೋಟಿ. ಜನವರಿ 27ರ ವಹಿವಾಟಿನ ಕೊನೆಯಲ್ಲಿ ಈ ಹೂಡಿಕೆಯು ₹ 56,142 ಕೋಟಿ ಆಗಿತ್ತು ಎಂದು ಅದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.