ನವದೆಹಲಿ: ಜಪಾನ್‌ನ ಸೋನಿ ಮತ್ತು ಭಾರತದ ಜೀ ಎಂಟರ್‌ಟೈನ್‌ಮೆಂಟ್ ನಡುವಣ ವಿಲೀನದ ಒಪ್ಪಂದವು ಮುರಿದು ಬಿದ್ದಿದ್ದರಿಂದ ಜೀ ಷೇರುಗಳ ಮೌಲ್ಯವು ಮಂಗಳವಾರ ಶೇ 30ರಷ್ಟು ಕುಸಿದಿವೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹5,500 ಕೋಟಿಯಷ್ಟು ಕುಸಿದಿದೆ.
ವಿಲೀನದ ಬಳಿಕ ಹೊಸ ಸಂಸ್ಥೆಯನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಕುರಿತ ಭಿನ್ನಾಭಿಪ್ರಾಯಗಳ ಕಾರಣದಿಂದ ವಿಲೀನ ಒಪ್ಪಂದವು ಮುರಿದು ಬಿತ್ತು. ಇದರಿಂದಾಗಿ, ಅತ್ಯಂತ ಸ್ಪರ್ಧಾತ್ಮಕವಾಗಿರುವ ಮನೋರಂಜನಾ ಮಾರುಕಟ್ಟೆಯಲ್ಲಿ ಜೀ ಸಂಸ್ಥೆಯ ಉಳಿವಿನ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಡಿಸ್ನಿಯ ಭಾರತ ಘಟಕದೊಂದಿಗೆ ವಿಲೀನದ ಮಾತುಕತೆ ನಡೆಸುತ್ತಿದೆ. ಈ ಸಂದರ್ಭದಲ್ಲಿಯೇ ಸೋನಿ–ಜೀ ಒಪ್ಪಂದವು ಮುರಿದು ಬಿದ್ದಿದೆ. ಇದು ಎರಡೂ ಕಂಪನಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.