ಸೋಮವಾರ, ಮಾರ್ಚ್ 20, 2023
24 °C

ಇನ್ಫೊಸಿಸ್ ಲಾಭ ಶೇ 13.4 ಹೆಚ್ಚಳ: ವರಮಾನದ ಅಂದಾಜು ಪರಿಷ್ಕರಿಸಿದ ಐ.ಟಿ. ಕಂಪನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌, ಡಿಸೆಂಬರ್ ತ್ರೈಮಾಸಿಕದಲ್ಲಿ ₹ 6,586 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿ ಗಳಿಸಿದ್ದ ಲಾಭಕ್ಕೆ ಹೋಲಿಸಿದರೆ ಶೇಕಡ 13.4ರಷ್ಟು ಹೆಚ್ಚಳ ಆಗಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ₹ 5,809 ಕೋಟಿ ಆಗಿತ್ತು.

ಕಂಪನಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ದಾಖಲಿಸಿರುವ ಲಾಭವು ಮಾರುಕಟ್ಟೆ ತಜ್ಞರ ಅಂದಾಜಿಗಿಂತ ತುಸು ಜಾಸ್ತಿ ಇದೆ. ‘ಕಂಪನಿಯು ಸರಿಸುಮಾರು ₹ 6,500 ಕೋಟಿ ಲಾಭ ಗಳಿಸಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರು’ ಎಂಬುದಾಗಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕಂಪನಿಯ ವರಮಾನವು ಶೇಕಡ 20.2ರಷ್ಟು ಹೆಚ್ಚಳವಾಗಿದೆ.

ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್) ತನ್ನ ತ್ರೈಮಾಸಿಕ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಟಿಸಿಎಸ್ ಲಾಭದ ಪ್ರಮಾಣವು ಮಾರುಕಟ್ಟೆ ತಜ್ಞರ ಅಂದಾಜಿಗಿಂತ ತುಸು ಕಡಿಮೆ ಇತ್ತು.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ಹೊಸದಾಗಿ 134 ಗ್ರಾಹಕರನ್ನು ಸಂಪಾದಿಸಿಕೊಂಡಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ 111 ಗ್ರಾಹಕರನ್ನು ಕಂಪನಿ ಹೊಸದಾಗಿ ಪಡೆದುಕೊಂಡಿತ್ತು. ಸ್ವಇಚ್ಛೆಯಿಂದ ಕಂಪನಿಯನ್ನು ತೊರೆಯುವ ಉದ್ಯೋಗಿಗಳ ಪ್ರಮಾಣವು ಡಿಸೆಂಬರ್ ತ್ರೈಮಾಸಿಕದಲ್ಲಿ ತುಸು ಕಡಿಮೆ ಆಗಿದ್ದು, ಶೇ 24.3ಕ್ಕೆ ತಲುಪಿದೆ.

‘ನಮ್ಮ ಸುತ್ತಲಿನ ಕೆಲವು ಸೂಚನೆಗಳು ಜಾಗತಿಕ ಅರ್ಥ ವ್ಯವಸ್ಥೆಯು ನಿಧಾನಗತಿಗೆ ತಿರುಗುತ್ತಿರುವುದನ್ನು ತೋರಿಸುತ್ತಿವೆ. ಹಣಕಾಸು ಸೇವೆಗಳು, ರಿಟೇಲ್ ವಹಿವಾಟು, ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ನಂತಹ ವಲಯಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದ್ದು, ಈ ವಲಯಗಳಲ್ಲಿ ವೆಚ್ಚಗಳ ಬಗ್ಗೆ ತೀರ್ಮಾನ ಕೈಗೊಳ್ಳುವಲ್ಲಿ ಅನಿಶ್ಚಿತತೆಗೆ ಕಾರಣವಾಗುತ್ತಿವೆ’ ಎಂದು ಇನ್ಫೊಸಿಸ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಲೀಲ್ ಪಾರೇಖ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಂಪನಿಯ ವರಮಾನವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 16ರಿಂದ ಶೇ 16.5ರಷ್ಟು ಹೆಚ್ಚಾಗಬಹುದು ಎಂಬ ಅಂದಾಜು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು