ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹೂಡಿಕೆಗೆ ಸಕಾಲವೇ?

Last Updated 14 ಜುಲೈ 2020, 19:30 IST
ಅಕ್ಷರ ಗಾತ್ರ

ಹಣ ಹೂಡಿಕೆಗೆ ಇದು ಸಕಾಲವೇ?– ಇತ್ತೀಚಿನ ಕೆಲವು ದಿನಗಳಲ್ಲಿ ಹೂಡಿಕೆದಾರರು ಬಾರಿ ಬಾರಿ ಕೇಳುತ್ತಿರುವ ಪ್ರಶ್ನೆ ಇದು. ಕೆಲವೇ ಕೆಲವರಲ್ಲಿ ಮಾತ್ರ ಇದಕ್ಕೆ ಉತ್ತರ ಇರಬಹುದು. ಹೂಡಿಕೆಯ ವಿಚಾರ ಬಂದಾಗಲೆಲ್ಲಾ ನಮ್ಮಲ್ಲಿ ಹೆಚ್ಚಿನವರು ಪಾಲಿಸುವ ಸರಳ ಸಿದ್ಧಾಂತವೆಂದರೆ, ‘ನಿಧಾನ ಮತ್ತು ಸ್ಥಿರತೆಯಿಂದ ಓಟವನ್ನು ಗೆಲ್ಲಬಹುದು (slow and steady wins the race)’ ಎಂಬುದು. ಹೂಡಿಕೆಯಲ್ಲಿ ಮಾಡಬಹುದಾದ ಬದಲಾವಣೆಗಳ ಕಡೆಗೆ ಯಾರೂ ಗಮನಹರಿಸುವುದಿಲ್ಲ. ಅಪಾಯವನ್ನು ತಾಳಬಲ್ಲ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆಯಲ್ಲಿ ಆಗಾಗ ಬದಲಾವಣೆಗಳನ್ನು ಮಾಡುತ್ತಿರುತ್ತೇವೆ. ಕಳೆದ ಕೆಲವು ದಶಕಗಳಲ್ಲಿ ಸಾರ್ಸ್‌ (2003), ಎಬೋಲಾ (2013) ಝಿಕಾ (2015) ಮುಂತಾಗಿ ಹಲವು ಪಿಡುಗುಗಳು ಜಗತ್ತನ್ನು ಕಾಡಿವೆ. ಈಗ ಕೋವಿಡ್‌–19 ದಾಳಿ ಮಾಡಿದೆ. ಇಂತಹ ಸಂದರ್ಭಗಳಲ್ಲೆಲ್ಲ ಮಾರುಕಟ್ಟೆ ಭಾರಿ ಏರುಪೇರು ದಾಖಲಿಸಿದೆ. ‘ಆಗಲೇ ನಾವು ಹೂಡಿಕೆ ಮಾಡಿದ್ದಿದ್ದರೆ’ ಎಂದು ಅನೇಕರು ಈಗ ಯೋಚನೆ ಮಾಡುವುದಿದೆ.

ಪಿಡುಗಿನ ಸನ್ನಿವೇಶಗಳಲ್ಲಿ ನಿರಂತರವಾಗಿ ಆತಂಕ ಇದ್ದರೂ, ಹೂಡಿಕೆದಾರರು ತಮ್ಮ ಹಣವನ್ನು ಹಿಂತೆಗೆದುಕೊಂಡಿಲ್ಲ. ಇಂಥ ಸನ್ನಿವೇಶಗಳ ಬಗ್ಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮಟ್ಟದಲ್ಲಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿರುತ್ತಾರೆ. ಯಾಕೆಂದರೆ ಮಾರುಕಟ್ಟೆ ಈ ಪ್ರಮಾಣದಲ್ಲಿ ಏರುಪೇರಾಗುತ್ತಿದ್ದರೆ ಯಾರೊಬ್ಬರೂ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ.

ಈಗ ಮತ್ತೆ ಮೂಲ ಪ್ರಶ್ನೆಗೆ ಬರೋಣ. ಹೂಡಿಕೆಗೆ ಇದು ಸಕಾಲವೇ. ಹಿಂದಿನ ಅಂಕಿ ಅಂಶಗಳೆಲ್ಲಾ ‘ಹೌದು’ ಎಂಬ ಉತ್ತರವನ್ನೇ ನೀಡುತ್ತವೆ. ಯಾವುದೇ ಪಿಡುಗು ಬಂದು ಹೋದ ನಂತರ ಮಾರುಕಟ್ಟೆಯಲ್ಲಿ ಭಾರಿ ತೇಜಿ ಕಾಣಿಸಿಕೊಂಡಿದೆ. ನಿಮ್ಮಲ್ಲಿ ಸೀಮಿತ ಅವಕಾಶ ಹಾಗೂ ಅಪಾಯ ತಾಳಿಕೆಯ ಸಾಮಾನ್ಯ ಮಟ್ಟದ ಸಾಮರ್ಥ್ಯ ಇರುವುದಾದರೆ, ಬಹುಶಃ ಹೂಡಿಕೆಗೆ ಇದು ಸಕಾಲವೇ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ತನ್ನ ಈಗಿನ ಕನಿಷ್ಠ ಮಟ್ಟದಿಂದ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರುತ್ತದೆ. ಈ ಹಿಂದಿನ ಪಿಡುಗಿನ ಸಂದರ್ಭದ ದಾಖಲೆಗಳು ಇದನ್ನು ತೋರಿಸುತ್ತವೆ.

‘ಸಾರ್ಸ್‌’ ಪಿಡುಗಿನ ಸಂದರ್ಭದಲ್ಲಿ ಸೂಚ್ಯಂಕವು ಶೇ 10ರಷ್ಟು ಕುಸಿತ ಕಂಡಿತ್ತು. ಆದರೆ ನಂತರದ ಒಂದು ವರ್ಷದಲ್ಲಿ ಅದು ಶೇ 84ರಷ್ಟು ಏರಿತ್ತು. ಎಬೊಲಾ ಸಮಯದಲ್ಲಿ ಶೇ 3ರಷ್ಟು ಕುಸಿದಿದ್ದ ಸೂಚ್ಯಂಕಗಳು ನಂತರದ ಒಂದು ವರ್ಷದಲ್ಲಿ ಶೇ 42.5ರಷ್ಟು ಏರಿಕೆ ಕಂಡಿವೆ. ಝಿಕಾ ಅವಧಿಯಲ್ಲಿ ಶೇ 12ರಷ್ಟು ಕುಸಿದಿದ್ದ ಮಾರುಕಟ್ಟೆಯು ವರ್ಷದೊಳಗೆ ಶೇ 24ರಷ್ಟು ಏರಿಕೆ ದಾಖಲಿಸಿತ್ತು. ಯಾವುದೇ ಪಿಡುಗು ಕಾಡಿದಾಗ ಮಾರುಕಟ್ಟೆ ಕುಸಿಯುತ್ತದೆ ಮತ್ತು ಆತಂಕ ದೂರವಾದಾಗ ಅತಿ ವೇಗದಲ್ಲಿ ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮುತ್ತದೆ ಎಂಬುದನ್ನು ಈ ಹಿಂದಿನ ಅಂಕಿ ಅಂಶಗಳು ಸಾಬೀತುಪಡಿಸಿವೆ.

ಕೊರೊನಾ ಸೋಂಕಿನ ನಡುವೆಯೂ ಮಾರ್ಚ್‌ ತಿಂಗಳಲ್ಲಿ 26,000 ಅಂಶಗಳ ಸನಿಹ ಏರಿಳಿತ ಕಾಣುತ್ತಿದ್ದ ಸೂಚ್ಯಂಕವು ಮೇ ಅಂತ್ಯಕ್ಕೆ 31,000 ಅಂಶಗಳಿಗೆ ತಲುಪಿತ್ತು. ಅದ್ದರಿಂದ, ಷೇರುಪೇಟೆಯಲ್ಲಿ ನೇರವಾಗಿ,ಯೂಲಿಪ್‌ ಅಥವಾ ಮ್ಯೂಚುವಲ್‌ ಫಂಡ್‌ ಮೂಲಕ ಹೂಡಿಕೆಗೆ ಇಂತಹ ಸನ್ನಿವೇಶವು ಸೂಕ್ತವಾದುದಾಗಿರುತ್ತದೆ ಎಂದರೆ ತಪ್ಪಾಗಲಾರದು. ಆದರೆ, ಬಂಡವಾಳವನ್ನು ಖಚಿತಪಡಿಸುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.

ಬೆಲೆ ಇಳಿಕೆಯಾಗಿದ್ದ ಸಂದರ್ಭದಲ್ಲಿ ಹೂಡಿಕೆ ಮಾಡುವುದು ಬುದ್ಧಿವಂತಿಕೆ. ಯಾಕೆಂದರೆ ಬೆಲೆ ಏರಿಕೆಯಾದಾಗ ಇಂಥ ಹೂಡಿಕೆಯಿಂದ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಇಂದಿನ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ, ಯೂಲಿಪ್‌ ಹಾಗೂ ಪಾರಂಪರಿಕವಾದ ಕ್ಯಾಪಿಟಲ್ ಗ್ಯಾರಂಟಿ ಸೊಲ್ಯೂಷನ್‌ ಪ್ಲ್ಯಾನ್‌ಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ. ಇಂತಹ ಯೋಜನೆಗಳಲ್ಲಿ ಪಾಲಿಸಿ ಅವಧಿಯಲ್ಲಿ ನೀವು ಮಾಡುವ ಪ್ರೀಮಿಯಂನ ಹಣಕ್ಕೆ ಶೇ 100ರಷ್ಟು ಖಾತರಿ ಇರುತ್ತದೆ. ಅಂದರೆ, ಮಾರುಕಟ್ಟೆ ಎಷ್ಟೇ ಏರುಪೇರಾಗಲಿ ನೀವು ಪಾವತಿಸಿದ ಹಣವು ಖಂಡಿತವಾಗಿಯೂ ನಿಮಗೆ ಲಭ್ಯವಾಗುತ್ತದೆ. ಜತೆಗೆ ಮಾರುಕಟ್ಟೆಯ ಗಳಿಕೆಯ ಲಾಭವೂ ಸಿಗುತ್ತದೆ.

ಉದಾಹರಣೆಗೆ, ನೀವು ಬಜಾಜ್‌ ಅಲಯನ್ಸ್‌ ಲೈಫ್‌ ಕ್ಯಾಪಿಟಲ್‌ ಗ್ಯಾರಂಟಿ ಸೊಲ್ಯೂಷನ್‌ ಪ್ಲ್ಯಾನ್‌ 15 ವರ್ಷದ ಅವಧಿಯ ಯೋಜನೆಯಲ್ಲಿ, ಮಾಸಿಕ ₹10,000ದಂತೆ 10ವರ್ಷಗಳ ಕಾಲ ಹೂಡಿಕೆ ಮಾಡುತ್ತಾ ಹೋದರೆ, ಯೋಜನೆ ಪಕ್ವವಾಗುವಾಗ ನಿಮಗೆ ₹29,31,337 ಲಭಿಸಬಹುದು (ಯೂಲಿಪ್‌ ಗಳಿಕೆಯು ಏಳು ವರ್ಷಗಳ ಅವಧಿಯಲ್ಲಿ ಶೇ 13.7ರಷ್ಟಿದ್ದರೆ).

ಇಂತಹ ಯೋಜನೆಗಳಲ್ಲಿ ಮಾಡಿದ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ 80(ಸಿ) ಅಡಿ ತೆರಿಗೆ ವಿನಾಯಿತಿಯೂ ಇರುತ್ತದೆ. ಜತೆಗೆ ವಾರ್ಷಿಕ ಕಂತಿನ 10ಪಟ್ಟು ಮೊತ್ತದ ವಿಮೆಯ ಸೌಲಭ್ಯವೂ ಇರುತ್ತದೆ. ಈ ಯೋಜನೆಗಳ ಇನ್ನೊಂದು ವೈಶಿಷ್ಟ್ಯವೆಂದರೆ, ರಿಟರ್ನ್ ಆಫ್ ಮೊರ್ಟ್ಯಾಲಿಟಿ ಚಾರ್ಜ್ (ಆರ್‌ಒಎಂಸಿ). ಅಂದರೆ, ಪಾಲಿಸಿಯ ಅವಧಿಯುದ್ದಕ್ಕೂ ಒದಗಿಸಲಾದ ಜೀವ ವಿಮಾ ಸೌಲಭ್ಯದ ಭದ್ರತೆಗಾಗಿ ಕಡಿತಗೊಳಿಸಲಾಗಿದ್ದ ವಾಸ್ತವಿಕ ವೆಚ್ಚವನ್ನು ಪಾಲಿಸಿಯ ಅವಧಿಯ ಕೊನೆಯಲ್ಲಿ ಫಂಡ್ ಮೌಲ್ಯಕ್ಕೆ ಸೇರಿಸಲಾಗುತ್ತದೆ.

(ಲೇಖಕ: ಪಾಲಿಸಿಬಜಾರ್‌ ಡಾಟ್‌ಕಾಂನ ಹೂಡಿಕೆ ಘಟಕದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT