ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ ಉತ್ಪನ್ನಗಳಿಗೆ ಭಾರಿ ತೆರಿಗೆ ಹೇರಿದ ಬೈಡನ್‌: ಇವಿಗಳ ಮೇಲೆ ಶೇ 100 ಸುಂಕ

Published 15 ಮೇ 2024, 2:42 IST
Last Updated 15 ಮೇ 2024, 2:42 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ, ಸ್ಟೀಲ್‌, ಸೋಲಾರ್ ಸೆಲ್ ಹಾಗೂ ಅಲ್ಯುಮಿನಿಯಂ ಮೇಲೆ ಅಮೆರಿಕ ಭಾರಿ ತೆರಿಗೆ ಹೇರಿದೆ. ನ್ಯಾಯಬದ್ಧವಲ್ಲದ ವ್ಯಾಪಾರ ರೂಢಿಯಿಂದ ಅಮೆರಿಕದ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಎಲೆಕ್ಟ್ರಿಕ್‌ ವಾಹನಗಳ ಮೇಲೆ ಶೇ 100, ಸೆಮಿಕಂಡಕ್ಟರ್‌ಗಳ ಮೇಲೆ ಶೇ 50, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸಲಾಗಿದೆ.

ಶ್ವೇತಭವನದ ರೋಸ್‌ ಗಾರ್ಡನ್‌ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮಗೆ ಬೇಕಾದ ಯಾವುದೇ ಕಾರುಗಳನ್ನು ಬೇಕಾದರೂ ನಾವು ಖರೀದಿ ಮಾಡುತ್ತೇವೆ. ಆದರೆ ಈ ಕಾರುಗಳ ಮಾರುಕಟ್ಟೆ ಮೇಲೆ ಚೀನಾ ಅನ್ಯಾಯವಾಗಿ ನಿಯಂತ್ರಣ ಹೊಂದಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

‘ಚೀನಾದೊಂದಿಗೆ ನ್ಯಾಯಸಮ್ಮತವಾದ ಸ್ಪರ್ಧೆ ನಾನು ಬಯಸುತ್ತಿದ್ದೇನೆ. ಸಂಘರ್ಷವಲ್ಲ. 21ನೇ ಶತಮಾನದ ಚೀನಾ ವಿರುದ್ಧದ ವಾಣಿಜ್ಯ ಸ್ಪರ್ಧೆಯಲ್ಲಿ ಬೇರೆ ದೇಶಗಳಿಗಿಂತ ನಾವು ಬಲಿಷ್ಠ ಸ್ಥಾನದಲ್ಲಿದ್ದೇವೆ’ ಎಂದು ಹೇಳಿದ್ದಾರೆ.

ಸ್ಟೀಲ್, ಅಲ್ಯುಮಿನಿಯಂ, ಸೆಮಿಕಂಡಕ್ಟರ್‌, ಎಲೆಕ್ಟ್ರಿಕ್ ವಾಹನಗಳು, ಸೋಲಾರ್‌ ಪ್ಯಾನಲ್‌ಗಳು, ಅಗತ್ಯ ಆರೋಗ್ಯ ಸಾಧನಗಳಾದ ಗ್ಲೌಸ್‌ ಹಾಗೂ ಮಾಸ್ಕ್‌ಗಳ ತಯಾರಿಕೆಗೆ ಚೀನಾ ಸರ್ಕಾರವು ಖಜಾನೆಯ ಹಣವನ್ನು ಕಂಪನಿಗಳಿಗೆ ಸುರಿಸಿದೆ ಎಂದು ಆರೋಪಿಸಿದ್ದಾರೆ.

ಈ ಉತ್ಪನ್ನಗಳಿಗೆ ಭಾರಿ ಪ್ರಮಾಣದ ಸಬ್ಸಿಡಿಗಳನ್ನು ನೀಡಿ, ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ತಯಾರಿಸುತ್ತಿದೆ. ಬಳಿಕ ಅವುಗಳನ್ನು ಕಡಿಮೆ ದರದಲ್ಲಿ ವಿಶ್ವ ಮಾರುಕಟ್ಟೆಗೆ ಸುರಿಯುತ್ತಿದೆ. ಇದರಿಂದ ಬೇರೆ ಉದ್ಯಮಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೈಡನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಉತ್ಪನ್ನಗಳ ಬೆಲೆ ನ್ಯಾಯಸಮ್ಮತವಾಗಿರುವುದಿಲ್ಲ. ಚೀನಾ ಸರ್ಕಾರ ಭಾರಿ ಪ್ರಮಾಣದಲ್ಲಿ ಸಬ್ಸಿಡಿ ಕೂಡ ನೀಡುತ್ತಿರುವುದರಿಂದ ಕಂಪನಿಗಳು ಲಾಭದ ಬಗ್ಗೆಯೂ ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT