ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ನಿಂಬೆ ಬೆಳೆಗಾರರಿಗೆ ನಷ್ಟ

ಟ್ಯಾಂಕರ್‌ನಲ್ಲಿ ನೀರು ಪೂರೈಕೆ * ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ
Last Updated 13 ಜುಲೈ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ಎರಡು ವರ್ಷಗಳ ಸತತ ಬರಗಾಲ ಹಾಗೂಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆ ಆಗಿರುವುದರಿಂದ ಜಿಲ್ಲೆಯ ನಿಂಬೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಬದುಕು ಸಾಗಿಸಲು ನಿಂಬೆಯನ್ನೇ ಅವಲಂಬಿಸಿದ್ದಾರೆ. ಇಂಡಿ, ಸಿಂದಗಿ ಸೇರಿದಂತೆ ಜಿಲ್ಲೆಯ ಹಲವೆಡೆ ಒಟ್ಟು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಗಿಡಗಳಿದ್ದು, ಈ ಪೈಕಿ 3 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ.

ನಿಂಬೆ ಬೆಳೆಗಾರರು ಟ್ಯಾಂಕರ್ ಮೊರೆ ಹೋಗಿದ್ದು, ಟ್ಯಾಂಕರ್‌ಗೆ ₹1,300 ರಿಂದ ₹1,500 ಪಾವತಿಸಿ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಆದಾಗ್ಯೂ ಶೇ 50ರಷ್ಟು ಗಿಡಗಳು ಒಣಗಿ ಹೋಗಿವೆ.

‘3–4 ವರ್ಷಗಳಿಂದ ಮಳೆ ಆಗಿಲ್ಲ. ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ನಿಂಬೆ ಗಿಡಗಳು ಸಂಪೂರ್ಣ ಒಣಗಿ ಹೋಗಿವೆ. ಸಾಲ ಮಾಡಿ, ಟ್ಯಾಂಕರ್ ನೀರು ಪೂರೈಸಿದರೂ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಂಬೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ತಕ್ಷಣ ಎಲ್ಲಾ ಬೆಳೆಗಾರರಿಗೆ ಪರಿಹಾರ ನೀಡಬೇಕು’ ಎಂದು ಮುಳಸಾವಳಗಿಯ ರೈತ ಶಂಕರಗೌಡ ಬಿರಾದಾರ ಒತ್ತಾಯಿಸುತ್ತಾರೆ.

‘ಎರಡು ಕೊಳವೆಬಾವಿ ಕೊರೆಸಿದರೂ ನೀರು ಸಿಗಲಿಲ್ಲ. ಇದಕ್ಕಾಗಿ ₹2 ಲಕ್ಷ ಖರ್ಚು ಮಾಡಿದ್ದೆವು. ಟ್ಯಾಂಕರ್ ಮೂಲಕ ನೀರುಣಿಸಿದರೂ ಗಿಡಗಳು ಒಣಗಿ ಹೋಗಿವೆ. ನಮ್ಮ ಗೋಳು ಯಾರಿಗೆ ಹೇಳಬೇಕು’ ಎಂದು ನಾಗಠಾಣದ ರೈತ ಮಹಿಳೆ ರತ್ನಾಬಾಯಿ ಸಿದ್ದಣ್ಣ ಜನವಾಡ ‘ಪ್ರಜಾವಾಣಿ’ ಎದುರು ತಮ್ಮ ಅಳಲು ತೋಡಿಕೊಂಡರು.

‘ಒಂದು ಎಕರೆ ನಿಂಬೆಯ ಆದಾಯದಿಂದ ನಾಲ್ಕು ಜನರ ಒಂದು ಕುಟುಂಬ ನೆಮ್ಮದಿಯಾಗಿ ಬಾಳಬಹುದಾಗಿದೆ. ದ್ರಾಕ್ಷಿ ಎರಡನೇ ವರ್ಷಕ್ಕೆ ಫಸಲು ಕೊಡುತ್ತದೆ. ಆದರೆ, ನಿಂಬೆ ಫಸಲಿಗೆ 4–5 ವರ್ಷ ಕಾಯಬೇಕು. ಗಿಡಗಳನ್ನು ಉಳಿಸಿಕೊಳ್ಳಬೇಕು. ಈಗ ಮಳೆ ಕೈಕೊಟ್ಟಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಅಲಿಯಾಬಾದ್‌ನ ರೈತ ಸೋಮಪ್ಪ ಬಿರಾದಾರ ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಾದ್ಯಂತ ಬಹಳಷ್ಟು ನಿಂಬೆ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ನಿಂಬೆ ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ಒಂದು ಒಣಗಿದ ಗಿಡಕ್ಕೆ ₹100 ಪರಿಹಾರ ನೀಡುವ ಬಗ್ಗೆ ಮಂಡಳಿಯ ಸಭೆಯಲ್ಲಿ ತೀರ್ಮಾನವಾಗಿದೆ. ಸರ್ಕಾರಿ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT