ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಲಾಕ್‌ಡೌನ್‌: ಜವಳಿ ಮಾರಾಟ ಶೇ 84ರಷ್ಟು ಕುಸಿತ

Last Updated 8 ಜೂನ್ 2020, 9:20 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಉಡುಪುಗಳ ಮಾರಾಟ ನೆಲಕಚ್ಚಿದೆ. ಬಟ್ಟೆ ಮಾರಾಟ ಶೇ 84ರಷ್ಟು ಕುಸಿದಿದೆ.

ಭಾರತೀಯ ಸಿದ್ಧ ಉಡುಪು ತಯಾರಿಕಾ ಸಂಘಟೆ (ಸಿಎಂಎಐ) ಸುಮಾರು 1,000 ಫ್ಯಾಕ್ಟರಿಗಳಲ್ಲಿ ಸಮೀಕ್ಷೆ ನಡೆಸಿದ್ದು, ಮಾರಾಟ ಕುಸಿತದ ಅಂದಾಜು ಲೆಕ್ಕ ಪ್ರಕಟಿಸಿದೆ.

ಲಾಕ್‌ಡೌನ್‌ ಸಡಿಸಲಾದ ನಂತರ‌ ಮೇ ಅಂತ್ಯದಿಂದ ಕೇವಲ ಶೇ 22ರಷ್ಟು ಫ್ಯಾಕ್ಟರಿಗಳು ಮಾತ್ರ ಕಾರ್ಯಾಚರಿಸುತ್ತಿವೆ.ಆ ಪೈಕಿ ಶೇ 40ರಷ್ಟು ಫ್ಯಾಕ್ಟರಿಗಳು ಸ್ವ ರಕ್ಷಕ ಕವಚಗಳನ್ನು (ಪಿಪಿಇ) ಸಿದ್ಧಪಡಿಸುತ್ತಿವೆ. ಜಾಗತಿಕ ಮಾರ್ಕೆಟಿಂಗ್ ಸಂಶೋಧನಾ ಸಂಸ್ಥೆ ಎಸಿ ನೆಲ್ಸನ್ ಸಹಕಾರದೊಂದಿಗ ಶೇ 83ರಷ್ಟು ಫ್ಯಾಕ್ಟರಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

2019ರಲ್ಲಿ ₹6.5 ಲಕ್ಷ ಕೋಟಿಯಷ್ಟಿದ್ದ ಉಡುಪು ತಯಾರಿಕಾ ಮಾರುಕಟ್ಟೆ ಮೌಲ್ಯವು ಈ ವರ್ಷ ಶೇ 15ರಷ್ಟು ಇಳಿಕೆಯೊಂದಿಗೆ ₹5.85 ಲಕ್ಷ ಕೋಟಿ ತಲುಪುವುದಾಗಿ ಅಂದಾಜಿಸಲಾಗಿದೆ. ಏಪ್ರಿಲ್-ಜೂನ್‌ನಲ್ಲಿ ಬಹುತೇಕ ಬ್ರ್ಯಾಂಡ್‌ಗಳು ಹಾಗೂ ರಿಟೇಲರ್‌ಗಳು ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ ದಾಖಲಿಸಿದ ಮಾರಾಟದ ಶೇ 15–20ರಷ್ಟನ್ನೂ ನಡೆಸಲು ಸಾಧ್ಯವಾಗದಿರಬಹುದು ಎಂದು ಸಿಎಂಎಐನ ಪ್ರಮುಖ ಸಲಹೆಗಾರ ರಾಹುಲ್‌ ಮೆಹ್ತಾ ಹೇಳಿದ್ದಾರೆ.

ಜವಳಿ ಕೈಗಾರಿಕೆಗಳು ಭಾರತದ ಜಿಡಿಪಿಗೆ ಶೇ 4ರಿಂದ 5ರಷ್ಟು ಕೊಡುಗೆ ನೀಡುತ್ತಿದ್ದು, ಸುಮಾರು 1.20 ಕೋಟಿ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಬಟ್ಟೆ ಬೇಡಿಕೆಗೆ ಸಾರ್ವಕಾಲಿಕ ಕುಸಿತ ಉಂಟಾಗಿದೆ. ಸರ್ಕಾರ ಸಹ ತನ್ನಲ್ಲಿರುವ ಜವಳಿ ಸಂಗ್ರಹವನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕಳೆದ 15 ದಿನಗಳಲ್ಲಿ ಸಂಗ್ರಹದಲ್ಲಿರುವ ಶೇ 10ರಷ್ಟು ಸರಕು ಮಾತ್ರ ಮಾರಾಟ ಮಾಡಲಾಗಿದೆ. ರಫ್ತು ಮಾರುಕಟ್ಟೆಯೂ ಇಳಿಮುಖವಾಗಿದೆ. ಐಷಾರಾಮಿ ತಯಾರಿಕೆಗಳು ಮಾರಾಟವಾಗುತ್ತಿಲ್ಲ. ಬೇಡಿಕೆಯೇ ಇಲ್ಲದಂತಾಗಿದೆ ಎಂದು ಜವಳಿ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜವಳಿ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್‌ ಟೆಕ್ಸ್‌ಟೈಲ್‌ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಕೊಳ್ಳುವವರಿಲ್ಲದೆ ₹130 ಕೋಟಿ ಮೌಲ್ಯದ ಸಿದ್ಧ ಉಡುಪುಗಳು ಉಳಿದುಕೊಂಡಿವೆ. ₹70 ಕೋಟಿ ಮೌಲ್ಯದ ಕಚ್ಚಾ ವಸ್ತುಗಳು ಬಳಕೆಯಾಗದೆ ಉಳಿದಿವೆ.

ಕೇಂದ್ರ ಸರ್ಕಾರ 2.2 ಕೋಟಿ ಪಿಪಿಇ ಸ್ಯೂಟ್‌ ತಯಾರಿಸುವಂತೆ ಬೇಡಿಕೆ ಇಟ್ಟಿತು. ಪ್ರತಿ ಪಿಪಿಇ ಸ್ಯೂಟ್‌ಗೆ ₹635ರಂತೆ 2.2 ಕೋಟಿ ಸ್ಯೂಚ್‌ಗಳ ಬೇಡಿಕೆ ಮೂಲಕ ಮೂರು ತಿಂಗಳಲ್ಲಿ ₹1,400 ಕೋಟಿ ಜವಳಿ ವಲಯಕ್ಕೆ ಬಂದಂತಾಗಿದೆ. ಆದರೆ, ಒಟ್ಟಾರೆ ನಷ್ಟಕ್ಕೆ ಹೋಲಿಸಿದರೆ ಇದು ಏನೂ ಅಲ್ಲ ಎಂದು ಇಂಡಿಯನ್‌ ಟೆಕ್ನಿಕಲ್‌ ಟೆಕ್ಸ್‌ಟೈಲ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಸುಂದರಂ‌ ಹೇಳಿದ್ದಾರೆ.

ಜವಳಿ ಉದ್ಯಮ ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ ₹5,500 ಕೋಟಿ ನಷ್ಟ ಅನುಭವಿಸಿದೆ. ಮುಂದಿನ ಹಾದಿ ಸುಲಭದ್ದಾಗಿ ಕಾಣುತ್ತಿಲ್ಲ ಎಂದು ಸೌತ್‌ ಇಂಡಿಯಾ ಮಿಲ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಸೆಲ್ವರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಜವಳಿ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಶೇ 70ರಷ್ಟು ನೌಕರರು ವಲಸಿಗರಾಗಿದ್ದಾರೆ. ಲಾಕ್‌ಡೌನ್‌ನಿಂದ ಬಹುತೇಕರು ಅವರ ಊರುಗಳಿಗೆ ಮರಳಿದ್ದಾರೆ. ಮುಂಗಾರಿನ ನಂತರವೇ ಅವರೆಲ್ಲ ನಗರಗಳಿಗೆ ಹಿಂದಿರುಗುವ ಸಾಧ್ಯತೆ ಇದೆ. ಇನ್ನೂ ಭಾರತದಿಂದ ಅತಿ ಹೆಚ್ಚು ಬಟ್ಟೆ ರಫ್ತು ಆಗುವ ಅಮೆರಿಕದಲ್ಲಿ ಕೊರೊನಾ ಸೋಂಕು ಪ್ರಭಾವ ಹೆಚ್ಚಿದೆ ಹಾಗೂ ಜನಾಂಗೀಯ ದ್ವೇಷದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದಾಗಿ ಬೇಡಿಕೆ ಕುಸಿಯುವ ಸಾಧ್ಯತೆ ಇದೆ. ಭಾರತದಿಂದ ರಫ್ತಾಗುವ ಜವಳಿ ಪೈಕಿ ಅಮೆರಿಕ ಮತ್ತು ಯುರೋಪ್‌ ಪಾಲು ಶೇ 60ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT