ಸೋಮವಾರ, ಅಕ್ಟೋಬರ್ 26, 2020
20 °C
ತುಮಕೂರಿನತ್ತ ‘ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ’

ಬೆಂಗಳೂರಿನ ಹೊರಗೆ ಮೊದಲ ಹೆಜ್ಜೆ; ‘ಶೇ 70ರಷ್ಟು ಉದ್ಯೋಗ ರಾಜ್ಯದವರಿಗೆ’

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಸಗಟು ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ‘ಮೆಟ್ರೊ ಕ್ಯಾಶ್‌ ಆ್ಯಂಡ್ ಕ್ಯಾರಿ’ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ಹೊರಗೆ ಕಾಲಿರಿಸುತ್ತಿದೆ. ‘ಮೆಟ್ರೊ’ದ ಮಳಿಗೆಯೊಂದು ತುಮಕೂರಿನಲ್ಲಿ ಶನಿವಾರ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ‘ಮೆಟ್ರೊ’ದ ಕೊಡುಗೆಗಳ ನಿರ್ವಹಣಾ ವಿಭಾಗದ ನಿರ್ದೇಶಕ ಮನೀಶ್ ಸಬ್ನಿಸ್ ಅವರು, ‘ಕರ್ನಾಟಕದಲ್ಲಿರುವ ಮಳಿಗೆಗಳಲ್ಲಿ ಶೇಕಡ 70ರಷ್ಟು ಉದ್ಯೋಗವನ್ನು ಕರ್ನಾಟಕದ ಯುವಕರಿಗೇ ನೀಡಿದ್ದೇವೆ’ ಎಂದು ಹೇಳಿದ್ದಾರೆ.

ಅವರ ಜೊತೆಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ‘ಮೆಟ್ರೊ’ ಬೆಂಗಳೂರಿನ ಹೊರಗಡೆ ಮಳಿಗೆ ಆರಂಭಿಸುವುದು ವಿಳಂಬವಾಯಿತು ಅನ್ನಿಸುತ್ತಿದೆಯೇ ಅಥವಾ ಇದು ಕಾರ್ಯತಂತ್ರದ ಭಾಗವೇ?

ಬೆಂಗಳೂರಿಗೆ ಹೋಲಿಸಿದರೆ ತುಮಕೂರಿನ ಜನಸಂಖ್ಯೆ ಬಹಳ ಕಡಿಮೆ. ನಾವು ದೊಡ್ಡ ನಗರಗಳಿಗೆ ಸೂಕ್ತವಾದ 1 ಲಕ್ಷ ಚದರ ಅಡಿ ಹಾಗೂ 50 ಸಾವಿರ ಚದರ ಅಡಿಗಳ ಮಳಿಗೆಗಳನ್ನು ಈಗಾಗಲೇ ಹೊಂದಿದ್ದೇವೆ. ತುಮಕೂರಿನಲ್ಲಿ 25 ಸಾವಿರ ಚದರ ಅಡಿಯ ಮಳಿಗೆ ಆರಂಭಿಸುತ್ತಿದ್ದೇವೆ. ಇದು ಯೋಜನಾಬದ್ಧ ಕಾರ್ಯತಂತ್ರದ ಭಾಗ. ಈಗ ಹೆಚ್ಚು ಬೆಳವಣಿಗೆ ಕಾಣುತ್ತಿರುವುದು ಸಣ್ಣ ಪ್ರಮಾಣದ ನಗರಗಳು ಎಂಬುದನ್ನು ಯಾವುದೇ ಆರ್ಥಿಕ ಸೂಚ್ಯಂಕ ಗಮನಿಸಿ ತಿಳಿದುಕೊಳ್ಳಬಹುದು. ಸಾಕಷ್ಟು ಪೂರ್ವಸಿದ್ಧತೆ ನಡೆಸಿ, ತುಮಕೂರಿಗೆ ಸೂಕ್ತವಾಗುವಂತಹ ವಿನ್ಯಾಸದ ಮಳಿಗೆ ಆರಂಭಿಸುತ್ತಿದ್ದೇವೆ.

* ಕರ್ನಾಟಕದ ಇನ್ನೂ ಕೆಲವು ನಗರಗಳಲ್ಲಿ ಮೆಟ್ರೊ ಮಳಿಗೆ ಆರಂಭವಾಗಲಿದೆ ಎಂಬ ವರದಿಗಳಿವೆ. ಈ ಬಗ್ಗೆ ಪ್ರತಿಕ್ರಿಯೆ?

ಕೆಲವು ನಗರಗಳಲ್ಲಿ ನಮ್ಮ ಮಳಿಗೆ ಆರಂಭಿಸುವ ಕಾರ್ಯ ಈಗಾಗಲೇ ನಡೆದಿದೆ. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಮ್ಮ ಮಳಿಗೆ ಆರಂಭವಾಗಲಿದೆ. ಒಂದು ನಗರದಲ್ಲಿ ನಮ್ಮ ಮಳಿಗೆ ಎಲ್ಲಿ ಆರಂಭಿಸಬೇಕು ಎಂಬ ಬಗ್ಗೆ ವಿಸ್ತೃತ ಅಧ್ಯಯನ ನಡೆಸುತ್ತೇವೆ. ಹುಬ್ಬಳ್ಳಿ, ಮೈಸೂರು ಮಳಿಗೆಗಳು ಯಶಸ್ಸು ಕಂಡುಕೊಂಡ ನಂತರದಲ್ಲಿ ಬೇರೆ ನಗರಗಳಲ್ಲಿಯೂ ಅದೇ ಮಾದರಿಯ ಮಳಿಗೆಗಳನ್ನು ಶುರುಮಾಡುತ್ತೇವೆ.

* ಬೆಂಗಳೂರಿನ ನಂತರ ತುಮಕೂರಿನಲ್ಲೇ ಮಳಿಗೆ ಆರಂಭಿಸಲು ತೀರ್ಮಾನಿಸಿದ್ದು ಏಕೆ? ಬೆಂಗಳೂರಿನಿಂದ ಹೊರಗೆ ಹೆಜ್ಜೆ ಇರಿಸುತ್ತಿರುವುದು ‘ಸ್ಥಳೀಯವಾಗುವ’ ನಡೆಯೇ?

ನಮ್ಮಲ್ಲಿ ಮಾರಾಟವಾಗುವ ಶೇಕಡ 99ರಷ್ಟು ವಸ್ತುಗಳು ಭಾರತದಲ್ಲೇ ತಯಾರಾದವು. ತುಮಕೂರಿನಲ್ಲಿ ನಾವು ಅಲ್ಲಿಗೆ ಸ್ಥಳೀಯವಾದ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದೇವೆ. ಅಲ್ಲಿನ ಸಂಬಾರ ಪದಾರ್ಥಗಳು, ಸ್ಥಳೀಯ ಚಿಕ್ಕಿ, ಸ್ಥಳೀಯ ತಿನಿಸುಗಳು, ಅಕ್ಕಿ ನಮ್ಮ ಮಳಿಗೆಯ ಮೂಲಕ ಮಾರಾಟ ಆಗಲಿವೆ.

ತುಮಕೂರು ಸುತ್ತಲಿನ 50 ಕಿ.ಮೀ. ಪ್ರದೇಶದಲ್ಲಿ ನೂರಾರು ಹಳ್ಳಿಗಳಿವೆ. ಅಲ್ಲಿನವರು ತುಮಕೂರಿಗೆ ಬಂದು ಸಗಟು ಉತ್ಪನ್ನಗಳನ್ನು ಖರೀದಿಸುತ್ತಿದ್ದರು, ತುಮಕೂರಿನ ವ್ಯಾಪಾರಿಗಳು ಬೆಂಗಳೂರಿಗೆ ಹೋಗಿ ಖರೀದಿ ಮಾಡುತ್ತಿದ್ದರು. ತುಮಕೂರು ಹಾಗೂ ಅದರ ಸುತ್ತಲಿನ ಊರುಗಳ ವ್ಯಾಪಾರಿಗಳಿಗೆ ಬೆಂಗಳೂರಿನಲ್ಲಿ ಸಿಗುವಂತಹ ಆಯ್ಕೆಗಳು ತುಮಕೂರಿನಲ್ಲೇ ಒಂದೇ ಕಡೆ ಸಿಗಬೇಕು ಎಂದು ನಾವು ಆಲೋಚಿಸಿದೆವು. ಅವರಿಗೆ ಇಲ್ಲಿ ಎಲ್ಲವೂ ಒಂದೇ ಕಡೆ ಸಿಗಲಿದೆ. ಹಾಗಾಗಿ, ನಮ್ಮ ವಹಿವಾಟು ತುಮಕೂರಿನಲ್ಲಿ ಯಶಸ್ಸು ಕಾಣಲಿದೆ ಎಂಬ ವಿಶ್ವಾಸವಿದೆ.

ತುಮಕೂರಿನಲ್ಲಿ ಹಲವು ಸಂಸ್ಥೆಗಳಿವೆ, ತಯಾರಿಕಾ ಘಟಕಗಳಿವೆ. ಅದು ಸಂಪದ್ಭರಿತ ಊರು. ಅಲ್ಲಿನ ಮಂಡಿಪೇಟೆ ರಸ್ತೆಯಲ್ಲಿ ನಾವು ಮಳಿಗೆ ಆರಂಭಿಸುತ್ತಿದ್ದೇವೆ. ಇದು ಅಲ್ಲಿನ ಸಗಟು ವ್ಯಾಪಾರದ ಕೇಂದ್ರವೂ ಹೌದು.

* ಕೋವಿಡ್‌–19ಕ್ಕೂ ಮೊದಲು ಹಾಗೂ ಈಗ ಗ್ರಾಹಕರ ವರ್ತನೆಯಲ್ಲಿ ಯಾವ ಬಗೆಯ ಬದಲಾವಣೆ ಕಂಡುಬಂದಿದೆ?

ಗ್ರಾಹಕರು ಬರುತ್ತಿರುವುದು ಕಡಿಮೆ ಆಗಿದೆ. ಆದರೆ, ಅವರು ಬಂದಾಗ ಹೆಚ್ಚೆಚ್ಚು ಖರೀದಿ ಮಾಡುತ್ತಿದ್ದಾರೆ. ರೆಸ್ಟಾರೆಂಟ್‌ಗಳು ಈಗ ಆರಂಭವಾಗಿವೆ. ಆ ಗ್ರಾಹಕ ನೆಲೆ ಕೂಡ ಮತ್ತೆ ನಮಗೆ ಸಿಗುತ್ತಿದೆ. ಕೋವಿಡ್‌ ಪೂರ್ವ ಸ್ಥಿತಿಯತ್ತ ನಾವು ಬರುತ್ತಿದ್ದೇವೆ.

***

ತುಮಕೂರಿನಲ್ಲಿ ನಾವು 200 ಉದ್ಯೋಗ ಸೃಷ್ಟಿಸಲಿದ್ದೇವೆ. ನಮ್ಮ ಉದ್ಯೋಗಿಗಳಿಗೆ ಒಳ್ಳೆಯ ತರಬೇತಿ ನೀಡಲಿದ್ದೇವೆ. ಕಿರಾಣಿ ಅಂಗಡಿಗಳಿಗಾಗಿ ಆ್ಯಪ್‌ ಅಭಿವೃದ್ಧಿಪಡಿಸಿ, ತಾವು ಕೂತಲ್ಲಿಂದಲೇ ವಸ್ತುಗಳಿಗೆ ಆರ್ಡರ್ ಮಾಡುವ ಸೌಲಭ್ಯವನ್ನು ಅವರಿಗೆ ನೀಡಲಿದ್ದೇವೆ. ಸ್ಮಾರ್ಟ್‌ ಕಿರಾಣಾ ಯೋಜನೆಯ ಅಡಿಯಲ್ಲಿ ಕೆಲವು ಅಂಗಡಿಗಳನ್ನು ಅಭಿವೃದ್ಧಿಪಡಿಸಿದ್ದೇವೆ.

– ಮನೀಶ್ ಸಬ್ನಿಸ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು