ಗುರುವಾರ , ಆಗಸ್ಟ್ 13, 2020
24 °C

ಹೆಚ್ಚಿನ ಗಳಿಕೆಗೆ ಷೇರುಪೇಟೆ ಹೂಡಿಕೆಯೇ ಸೂಕ್ತ

ವೈಭವ್‌ ಅಗರ್‌ವಾಲ್‌ Updated:

ಅಕ್ಷರ ಗಾತ್ರ : | |

ಜಾಗತಿಕವಾಗಿ, ದೀರ್ಘಾವಧಿಯ ಹೂಡಿಕೆಯ ಬಗ್ಗೆ ಯೋಚನೆ ಮಾಡುವವರಿಗೆ ಷೇರುಗಳಲ್ಲಿ ಹೂಡಿಕೆ ಮಾಡುವುದು (ನೇರವಾಗಿ ಅಥವಾ ಮ್ಯೂಚುವಲ್‌ ಫಂಡ್‌ ಮೂಲಕ) ಒಂದು ಅನಿವಾರ್ಯ ಆಯ್ಕೆ ಎಂಬಂತಾಗಿದೆ. ಎಲ್ಲ ಆರ್ಥಿಕ ಏರುಪೇರುಗಳನ್ನು ನಿಭಾಯಿಸಿಕೊಂಡು, ಎಂಟರಿಂದ ಹತ್ತು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಗಳಿಕೆ ತಂದುಕೊಡುವಲ್ಲಿ ಷೇರುಗಳಿಗೆ ಸರಿಸಮನಾದ ಹೂಡಿಕಾ ಉತ್ಪನ್ನಗಳು ಬೇರೆ ಇರಲಾರವು. ಆದರೆ, ಹೂಡಿಕೆದಾರರು ಒಳ್ಳೆಯ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಲು ಮರೆಯಬಾರದು.

ಜಾಗತಿಕ ಮಟ್ಟದಲ್ಲಿ ಸರಿ, ಭಾರತದಲ್ಲೂ ಇಂಥ ಸ್ಥಿತಿ ಇದೆಯೇ? ಆ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಬೇಕಾದರೆ ಷೇರು ಸೂಚ್ಯಂಕದತ್ತ ಒಮ್ಮೆ ಗಮನ ಹರಿಸಬೇಕು.

ಸೆನ್ಸೆಕ್ಸ್‌ನ ನಾಲ್ಕು ದಶಕ
1979ರಲ್ಲಿ ಮುಂಬೈ ಷೇರು ಸೂಚ್ಯಂಕ ಆರಂಭವಾದಾಗ ಅದು 100 ಅಂಶಗಳಲ್ಲಿತ್ತು. ನಾಲ್ಕು ದಶಕಗಳ ಬಳಿಕ ಈಗ ಅದು ಸುಮಾರು 38 ಸಾವಿರ ಅಂಶಗಳಿಗೆ ತಲುಪಿದೆ. ಅಂದರೆ 40 ವರ್ಷಗಳ ಹಿಂದೆ ಯಾರಾದರೂ ಮುಂಬೈ ಷೇರುಪೇಟೆಯಲ್ಲಿ 100 ರೂಪಾಯಿ ಹೂಡಿಕೆ ಮಾಡಿ ಮರೆತು ಬಿಟ್ಟಿದ್ದರೆ, ಅ ಮೊತ್ತ ಇಂದು 38 ಸಾವಿರ ರೂಪಾಯಿಗಳಾಗಿವೆ. ಅಂದರೆ ಸರಾಸರಿ ವಾರ್ಷಿಕ ಗಳಿಕೆ
ಶೇ 16.45ರಷ್ಟಾಯಿತು. ಇದರಲ್ಲಿ ಡಿವಿಡೆಂಡ್‌ ಗಳಿಕೆಯನ್ನು ಸೇರಿಸಿಲ್ಲ. ವಾರ್ಷಿಕ ಸುಮಾರು ಶೇ 1.50ರಷ್ಟು ಡಿವಿಡೆಂಡ್‌ ಅನ್ನೂ ಸೇರಿಸಿದರೆ ಗಳಿಕೆಯು ಸುಮಾರು ಶೇ 17.95ರಷ್ಟಾಗುತ್ತದೆ.  

ಬೇರೆ ಯಾವ ಹೂಡಿಕೆ ಇಷ್ಟೊಂದು ಗಳಿಗೆ ಮಾಡಬಲ್ಲದು. ಕಳೆದ 20 ವರ್ಷಗಳ ಅಂಕಿ ಅಂಶಗಳನ್ನು ನೋಡಿದಾಗ ಷೇರು ಪೇಟೆ
ಆಧಾರಿತ ಮ್ಯೂಚುವಲ್‌ ಫಂಡ್‌ಗಳು ಮಾತ್ರ ಹಣದುಬ್ಬರವನ್ನು ಸಮರ್ಥವಾಗಿ ಎದುರಿಸಿ, ಒಳ್ಳೆಯ ಗಳಿಕೆ ತಂದುಕೊಟ್ಟಿವೆ ಎಂಬುದೂ ಸ್ಪಷ್ಟವಾಗುತ್ತದೆ.

ಇತಿಹಾಸವನ್ನು ನೋಡಿದರೆ, ಜಾಗತಿಕ ಮಾರುಕಟ್ಟೆಯಲ್ಲೂ ಇದೇ ರೀತಿಯ ಬೆಳವಣಿಗೆ ಕಾಣಿಸಿದೆ. ಅಮೆರಿಕದ ಷೇರುಪೇಟೆಯಲ್ಲಿ ಮಾಡಿರುವ ಹೂಡಿಕೆಯು  ಸಾಲಪತ್ರಗಳ ನಿಧಿಗಳಲ್ಲಿ ಮಾಡಿರುವ ಹೂಡಿಕೆಯ ಗಳಿಕೆಗಿಂತ ಎರಡು ಪಟ್ಟು ಗಳಿಕೆ ಮಾಡಿರುವುದು ಸ್ಪಷ್ಟವಾಗಿದೆ.

ನೇರವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಲ್ಲಿ, ಒಮ್ಮೆ ಹೂಡಿಕೆ ಮರೆತು ಬಿಡುವವರೇ ಹೆಚ್ಚು. ಅದರ ಬದಲು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡಿದರೆ ಹೆಚ್ಚು ಲಾಭವಿದೆ. ಯಾಕೆಂದರೆ ಅಲ್ಲಿ ಫಂಡ್‌ ಮ್ಯಾನೇಜರ್‌ಗಳಿರುತ್ತಾರೆ. ಅವರು ಕಾಲಕಾಲಕ್ಕೆ ಒಳ್ಳೆಯ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆಯನ್ನು ಬದಲಿಸುತ್ತಾ ಇರುತ್ತಾರೆ.

ಹೆಚ್ಚು ಗಳಿಕೆ ಹೇಗೆ ಸಾಧ್ಯ?
ಯಾವುದೇ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿದಿರಿ ಎಂದರೆ, ನೀವೂ ಕಂಪನಿಯ ಸಣ್ಣ ಪ್ರಮಾಣದ ಮಾಲೀಕತ್ವ ಪಡೆದಂತೆಯೇ. ಅಂದರೆ ಕಂಪನಿಯ ಅಭಿವೃದ್ದಿಯಲ್ಲಿ ನಿಮಗೂ ಪಾಲು ಲಭಿಸುತ್ತದೆ.

ಹನಿ, ಹನಿ ಗೂಡಿ ಹಳ್ಳ ಎಂಬ ಮಾತಿದೆ. ಷೇರುಗಳಲ್ಲಿ ದೀರ್ಘಾವಧಿಯ ಹೂಡಿಕೆ ಮಾಡುವುದೆಂದರೆ ಈ ರೀತಿ ಹನಿ ಹನಿಗಳನ್ನು ಸೇರಿಸಿ ಒಂದು ದೊಡ್ಡ ನಿಧಿಯನ್ನು ರೂಪಿಸುವುದೆಂದೇ ಅರ್ಥ. ಪ್ರತಿ ವರ್ಷವೂ ಬರುವ ಗಳಿಕೆಯನ್ನು ಮತ್ತೆ ಅದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ನಿಧಿಯನ್ನು ಸೃಷ್ಟಿಸಲಾಗುತ್ತದೆ.

ನೀವು ಒಳ್ಳೆಯ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದ್ದೀರಿ ಎಂದರೆ, ಷೇರುಪೇಟೆಯ ಏರುಪೇರುಗಳು ದೀರ್ಘಾವಧಿಯ ಹೂಡಿಕೆಯ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಲಾರವು. ಷೇರುಗಳ ಗಳಿಕೆ ಮತ್ತು ಆ ಗಳಿಕೆಯ ಮರು ಹೂಡಿಕೆಯ ಮುಖಾಂತರ ಹಣದುಬ್ಬರವನ್ನು ನಿಭಾಯಿಸಿ ಒಳ್ಳೆಯ ಗಳಿಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಸಾಲಪತ್ರಗಳ ಹೂಡಿಕೆಗೆ ಹೋಲಿಸಿದರೆ ಷೇರು ಪೇಟೆಯ ಹೂಡಿಕೆಯಲ್ಲಿ ಅಪಾಯ ಹೆಚ್ಚು ಇರುತ್ತದೆ ಎಂಬುದು ನಿಜ. ಆದರೆ, ಯೋಜನಾಬದ್ಧವಾಗಿ ಈ ಅಪಾಯವನ್ನು ನಿಭಾಯಿಸಲು ಸಾಧ್ಯವಿದೆ. ಇತರ ಹೆಚ್ಚಿನ ಹೂಡಿಕಾ ವಿಧಾನಗಳಲ್ಲಿ ಇದು ಅಸಾಧ್ಯ. ದಿನನಿತ್ಯ ಷೇರುಪೇಟೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದವರಿಗಾಗಿಯೇ ಮ್ಯೂಚುವಲ್‌ ಫಂಡ್‌ ಮೂಲಕ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಮಾರ್ಗ ಇದ್ದೇ ಇದೆ.

(ಲೇಖಕ: ಏಂಜೆಲ್‌ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು