ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಖರೀದಿಯಿಂದ ಹಿಂದೆ ಸರಿದ ಇಲಾನ್ ಮಸ್ಕ್‌

Last Updated 9 ಜುಲೈ 2022, 2:35 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು 44 ಶತಕೋಟಿ ಡಾಲರ್‌ಗೆ (₹3.49 ಲಕ್ಷ ಕೋಟಿ) ಖರೀದಿಸುವ ಒಪ್ಪಂದವನ್ನು ಕೈಬಿಡುತ್ತಿರುವುದಾಗಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿಶ್ವದ ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್ ಅವರು ಶುಕ್ರವಾರ ಹೇಳಿದ್ದಾರೆ.

‘ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್‌ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ’ ಎಂದು ಮಸ್ಕ್‌ ತಿಳಿಸಿದ್ದಾರೆ.

ಟ್ವಿಟರ್‌ನ ಪ್ರತಿ ಷೇರನ್ನು 54.20 ಡಾಲರ್‌ಗಳಿಗೆ (₹4,299) ಖರೀದಿಸುವುದಾಗಿ ಮಸ್ಕ್ ಏಪ್ರಿಲ್‌ನಲ್ಲಿ ತಿಳಿಸಿದ್ದರು.

ಮಸ್ಕ್‌ ನಿರ್ಧಾರದ ಬೆನ್ನಿಗೇ ಟ್ವಿಟರ್‌ನ ಷೇರುಗಳು ಶೇಕಡ 7ರಷ್ಟು ಕುಸಿತ ಕಂಡವು.

ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳನ್ನು ವೀಕ್ಷಿಸುತ್ತಿರುವ ಬಳಕೆದಾರರ ಪೈಕಿ ನಕಲಿ ಮತ್ತು ಬೋಟ್ ಖಾತೆಗಳು ಶೇ 5ಕ್ಕಿಂತ ಕಡಿಮೆ ಇವೆ ಎಂಬುದನ್ನು ಟ್ವಿಟರ್‌ ಪುರಾವೆ ಸಹಿತ ತೋರಿಸದೇ ಇದ್ದರೆ ಒಪ್ಪಂದವನ್ನು ಮುರಿಯುವುದಾಗಿ ಮಸ್ಕ್‌ ಈ ಹಿಂದೆ ಎಚ್ಚರಿಸಿದ್ದರು.

ದೈನಂದಿನ ಕೋಟ್ಯಂತರ ಟ್ವೀಟ್‌ಗಳ ದತ್ತಾಂಶದ ಭಂಡಾರವಿರುವ ಟ್ವಿಟರ್‌ನ ‘ಫೈರ್‌ಹೋಸ್‌’ ಪ್ರವೇಶಕ್ಕೆ ಟ್ವಿಟರ್‌ ಮಸ್ಕ್‌ ಅವರಿಗೆ ಕಳೆದ ತಿಂಗಳು ಅನುಮತಿ ನೀಡಿತ್ತು.

ಕಾನೂನು ಹೋರಾಟ ನಡೆಸುತ್ತೇವೆ : ಟ್ವಿಟರ್‌

44 ಶತಕೋಟಿ ಡಾಲರ್‌ಗಳ ಖರೀದಿ ಒಪ್ಪಂದವನ್ನು ಮುಂದುವರಿಸುವಂತೆ ಮಾಡಲು ಎಲಾನ್‌ ಮಸ್ಕ್‌ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್‌ ಆಡಳಿತ ಮಂಡಳಿ ಅಧ್ಯಕ್ಷರು ಶುಕ್ರವಾರ ತಿಳಿಸಿದ್ದಾರೆ.

‘ಮಸ್ಕ್‌ ಅವರೊಂದಿಗೆ ಒಪ್ಪಿದ ಬೆಲೆ ಮತ್ತು ನಿಯಮಗಳಂತೆ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಲು ಟ್ವಿಟ್ಟರ್ ಮಂಡಳಿಯು ಬದ್ಧವಾಗಿದೆ. ಒಪ್ಪಂದ ಮುಂದುವರಿಸುವಂತೆ ಮಾಡಲು ಕಾನೂನು ಕ್ರಮವನ್ನು ಅನುಸರಿಸಲು ಯೋಜಿಸಲಾಗಿದೆ’ ಎಂದು ಆಡಳಿತ ಮಂಡಳಿ ಅಧ್ಯಕ್ಷ ಬ್ರೆಟ್ ಟೇಲರ್ ಟ್ವೀಟ್ ಮಾಡಿದ್ದಾರೆ.

‘ನಾವು ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT