ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ₹ 60 ಸಾವಿರ ಕೋಟಿ ನೆರವು ಅಗತ್ಯ: ರಘುರಾಂ ರಾಜನ್‌ ಸಲಹೆ

ರಾಹುಲ್‌ ಜತೆಗಿನ ಸಂವಾದ
Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಜಾರಿಯಲ್ಲಿ ಇರುವ ದಿಗ್ಬಂಧನಗಳನ್ನು ತೆರವುಗೊಳಿಸುವ ವಿಷಯದಲ್ಲಿ ಭಾರತವು ಹೆಚ್ಚು ಜಾಣ್ಮೆ ತೋರಬೇಕು ಮತ್ತು ಆರ್ಥಿಕ ಚಟುವಟಿಕೆಗಳಿಗೆಜಾಗರೂಕ ಮತ್ತು ನಿಯಂತ್ರಿತ ವಿಧಾನದಲ್ಲಿ ಚಾಲನೆ ನೀಡಬೇಕು ಎಂದು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ ಬಿಕ್ಕಟ್ಟಿನಿಂದ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ₹ 65 ಸಾವಿರ ಕೋಟಿ ಮೊತ್ತದ ನೆರವಿನ ಅಗತ್ಯ ಇದೆ ಎಂದೂ ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ವ್ಯವಸ್ಥೆ ಮಾಡಿದ್ದ, ಪಕ್ಷದ ಮುಖಂಡ ರಾಹುಲ್‌ ಗಾಂಧಿ ಜತೆಗಿನ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ರಾಜನ್‌ ಅವರು ಅಮೆರಿಕದಿಂದ ಭಾಗವಹಿಸಿದ್ದರು.

‘ಆರ್ಥಿಕತೆಯನ್ನು ದಿಗ್ಬಂಧನದಿಂದ ತೆರವುಗೊಳಿಸಲು ಹೆಚ್ಚು ಜಾಗರೂಕತೆ ತೋರಬೇಕು. ಜನರು ಉದ್ಯೋಗ ಅವಕಾಶ ಪಡೆಯುವ ರೀತಿಯಲ್ಲಿ ಈ ಪ್ರಕ್ರಿಯೆ ತ್ವರಿತವಾಗಿಯೂ ನಡೆಯಬೇಕು. ದೀರ್ಘಾವಧಿವರೆಗೆ ಜನರ ಬೆಂಬಲಕ್ಕೆ ನಿಲ್ಲಲು ನಮಗೆ (ಭಾರತಕ್ಕೆ) ಸಾಮರ್ಥ್ಯವಿಲ್ಲ. ಲಾಕ್‌ಡೌನ್‌ ಮುಂದುವರೆಸುವುದು ಸುಲಭ. ಆದರೆ ಅದರಿಂದ ಆರ್ಥಿಕತೆಗೆ ಒಳಿತೇನೂ ಆಗಲಾರದು’ಎಂದು ರಾಜನ್ ಹೇಳಿದ್ದಾರೆ.

ರಾಹುಲ್‌ ಮತ್ತು ರಾಜನ್‌ ನಡುವಣ ಸಂವಾದದ ಆಯ್ದ ಭಾಗ ಇಲ್ಲಿದೆ.

ರಾ: ಬಡವರಿಗೆ ಆಹಾರ, ನಗದು ಮತ್ತು ಸಬ್ಸಿಡಿ ರೂಪದ ನೆರವಿಗೆ ಎಷ್ಟು ಹಣ ಬೇಕಾಗಬಹುದು?

ರ: ಈ ಉದ್ದೇಶಕ್ಕೆ ಕೇಂದ್ರ ಸರ್ಕಾರ ₹ 65 ಸಾವಿರ ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೊತ್ತವು ₹ 200 ಲಕ್ಷ ಕೋಟಿಗಳಷ್ಟಿದೆ. ಅದಕ್ಕೆ ಹೋಲಿಸಿದರೆ ₹ 65 ಸಾವಿರ ಕೋಟಿ ದೊಡ್ಡ ಮೊತ್ತವೇನಲ್ಲ.

ಇದರಿಂದ ಬಡವರ ಜೀವ ಮತ್ತು ಜೀವನೋಪಾಯ ಉಳಿಸಲು ನೆರವಾಗುವಂತಿದ್ದರೆ ನಾವು ಇಷ್ಟು ವೆಚ್ಚ ಮಾಡಲೇಬೇಕು.

ರಾ: ಜನರಲ್ಲಿನ ಒಡಕು ಮತ್ತು ದ್ವೇಷ ಭಾವನೆ ದೊಡ್ಡ ಸಮಸ್ಯೆ ಒಡ್ಡಿದೆಯಲ್ಲ. ಇದಕ್ಕೆ ಪರಿಹಾರವೇನು?

ರ:ಅಂತಹ ಪರಿಸ್ಥಿತಿ ಉದ್ಭವಿಸಿರುವುದು ನಿಜ. ಎಲ್ಲರ ಒಳಿತಿಗೆ ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವ ಅಗತ್ಯ ಇದೆ. ಪ್ರತಿಯೊಬ್ಬರೂ ತಾವು ವ್ಯವಸ್ಥೆಯ ಭಾಗವಾಗಿರುವುದಾಗಿ ಒಪ್ಪಿಕೊಂಡಿರುವಾಗ, ವ್ಯವಸ್ಥೆಯ ಸಮಾನ ಪಾಲುದಾರರಾಗುವುದೂ ಮುಖ್ಯವಾಗುತ್ತದೆ. ನಮ್ಮ ಮುಂದೆ ದೊಡ್ಡ ಸವಾಲು ಇರುವಾಗ ಒಡಕಿನ ಮನೆಯು ನಮಗೆಲ್ಲ ದೊಡ್ಡ ಭಾರವಾಗಿ ಪರಿಣಮಿಸಲಿದೆ.

ರಾ: ದೇಶದಲ್ಲಿ ಅಧಿಕಾರ ಕೇಂದ್ರೀಕರಣದ ಬಿಕ್ಕಟ್ಟು ಇದೆಯೇ?

ರ: ಜನರ ಸಬಲೀಕರಣಕ್ಕೆ ವಿಕೇಂದ್ರೀಕರಣ ಮಹತ್ವದ ಕೊಡುಗೆ ನೀಡುತ್ತದೆ ಎನ್ನುವುದು ನನ್ನ ನಂಬಿಕೆಯಾಗಿದೆ.

ರಾ: ಉದಾರ ಧೋರಣೆ ಪ್ರಶ್ನಿಸುವ ನಿರಂಕುಶಾಧಿಕಾರತ್ವ ದೇಶದಲ್ಲಿ ದಿನೇ ದಿನೇ ಬಲಿಷ್ಠಗೊಳ್ಳುತ್ತಿದೆಯಲ್ಲ?

ರ: ಸರ್ವಾಧಿಕಾರಿ ಮನೋಭಾವ ರೂಢಿಸಿಕೊಂಡವರು ‘ನಾನೇ ಜನರ ಶಕ್ತಿಯಾಗಿದ್ದೇನೆ. ಹೀಗಾಗಿ ನಾನು ಹೇಳಿದ್ದೆಲ್ಲವೂ ನಡೆಯಬೇಕು. ನಾನು ರೂಪಿಸಿದ ಕಾನೂನು ಕಟ್ಟಲೆಗಳಿಗೆ ಯಾವುದೇ ಅಡೆ ತಡೆ ಇರಲೇಬಾರದು. ಯಾವುದೇ ಸಂಸ್ಥೆ ನನ್ನ ನಿರ್ಧಾರ ಪ್ರಶ್ನಿಸಬಾರದು. ಅಧಿಕಾರ ವಿಕೇಂದ್ರೀಕರಣವೂ ಇರಬಾರದು. ಪ್ರತಿಯೊಂದು ವಿಷಯವೂ ನನ್ನ ಮೂಲಕವೇ ಹೋಗಬೇಕು’ ಎನ್ನುವ ಮನೋಭಾವ ರೂಢಿಸಿಕೊಂಡಿರುತ್ತಾರೆ. ಅಧಿಕಾರ ಕೇಂದ್ರಿತ ವ್ಯವಸ್ಥೆಯು ತನ್ನ ಭಾರಕ್ಕೆ ಕುಸಿದು ಬಿದ್ದ ಅನೇಕ ನಿದರ್ಶನಗಳು ಇತಿಹಾಸದಲ್ಲಿ ಇವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT