ಭಾನುವಾರ, ಅಕ್ಟೋಬರ್ 24, 2021
28 °C

ಜಿಎಸ್‌ಟಿ ವ್ಯಾಪ್ತಿಗಿಲ್ಲ ಪೆಟ್ರೋಲ್‌, ಡೀಸೆಲ್‌: ನಿರ್ಮಲಾ ಸೀತಾರಾಮನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಸಮಯ ಪಕ್ವವಾಗಿಲ್ಲ ಎಂದು ಜಿಎಸ್‌ಟಿ ಮಂಡಳಿ ಶುಕ್ರವಾರ ಅಭಿಪ್ರಾಯಪಟ್ಟಿದೆ.

‘ಪೆಟ್ರೋಲ್ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಚಾರವು ಕೇರಳ ಹೈಕೋರ್ಟ್‌ ನೀಡಿದ್ದ ಸೂಚನೆಯ ಕಾರಣದಿಂದಾಗಿ ಮಾತ್ರ ಚರ್ಚೆಗೆ ಬಂದಿತು. ಆದರೆ, ಇವುಗಳನ್ನು ಈ ವ್ಯವಸ್ಥೆಯ ಅಡಿಯಲ್ಲಿ ತರಲು ಕಾಲ ಪಕ್ವವಾಗಿಲ್ಲ ಎಂಬ ಅನಿಸಿಕೆಯು ಮಂಡಳಿಯ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಲಖನೌನಲ್ಲಿ ಈ ಸಭೆ ನಡೆಯಿತು. 2019ರ ಡಿಸೆಂಬರ್‌ ನಂತರ ಸಭೆಯು ಭೌತಿಕವಾಗಿ ನಡೆದಿರುವುದು ಇದೇ ಮೊದಲು. ಕೋವಿಡ್‌ ಕಾರಣ ದಿಂದಾಗಿ ಸಭೆಗಳು ವರ್ಚುವಲ್ ಆಗಿ ನಡೆದಿದ್ದವು.

ಪೆಟ್ರೋಲಿಯಂ ಉತ್ಪನ್ನಗಳನ್ನು ಈ ಸಂದರ್ಭದಲ್ಲಿ ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ತಮ್ಮ ಸಮ್ಮತಿ ಇಲ್ಲ ಎಂದು ಹಲವು ರಾಜ್ಯಗಳು ಹೇಳಿದವು. ಈ ವಿಚಾರವನ್ನು ಕೇಂದ್ರ ಸರ್ಕಾರವು ಕೇರಳ ಹೈಕೋರ್ಟ್‌ಗೆ ತಿಳಿಸಲಿದೆ ಎಂದು ನಿರ್ಮಲಾ ಅವರು ವಿವರಿಸಿದರು. ರಿಟ್ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್‌, ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಜೂನ್‌ನಲ್ಲಿ ಜಿಎಸ್‌ಟಿ ಮಂಡಳಿಗೆ ಸೂಚಿಸಿತ್ತು.

ಪೆಟ್ರೋಲ್ ಹಾಗೂ ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಇವುಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ತಗ್ಗುತ್ತದೆ. ಪರಿಣಾಮವಾಗಿ, ಇವುಗಳ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಗಣನೀಯವಾಗಿ ಇಳಿಕೆ ಆಗುತ್ತದೆ. ಆದರೆ, ಹೀಗೆ ಮಾಡುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವರಮಾನಕ್ಕೆ ಪೆಟ್ಟು ಬೀಳುತ್ತದೆ.

ಆಹಾರ ವಸ್ತುಗಳನ್ನು ರೆಸ್ಟಾರೆಂಟ್‌, ಹೋಟೆಲ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಜೊಮ್ಯಾಟೊದಂತಹ ಕಂಪನಿಗಳು ಶೇಕಡ 5ರಷ್ಟು ಜಿಎಸ್‌ಟಿ ಪಾವತಿಸ ಬೇಕು ಎಂಬ ತೀರ್ಮಾನವನ್ನು ಮಂಡಳಿ ಕೈಗೊಂಡಿದೆ. ಈ ಪ್ರಮಾಣದ ತೆರಿಗೆಯನ್ನು ಆಹಾರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸಂದರ್ಭದಲ್ಲಿ ವಸೂಲು ಮಾಡಬೇಕಿದೆ. ಇದುವರೆಗೆ ತೆರಿಗೆಯನ್ನು ರೆಸ್ಟಾರೆಂಟ್‌ಗಳು ಪಾವತಿಸುತ್ತಿದ್ದವು.

ಜಿಎಸ್‌ಟಿ ಪರಿಹಾರ ಸೆಸ್‌ಅನ್ನು 2026ರ ಮಾರ್ಚ್‌ವರೆಗೆ ವಿಸ್ತರಿಸಲು ಮಂಡಳಿ ತೀರ್ಮಾನಿಸಿದೆ. ಇದು 2022ರ ಜುಲೈಗೆ ಅಂತ್ಯಗೊಳ್ಳಬೇಕಿತ್ತು.

ಪ್ರಮುಖ ತೀರ್ಮಾನಗಳು

l ಕೋವಿಡ್‌ ಚಿಕಿತ್ಸೆಯಲ್ಲಿ ಬಳಸುವ ಕೆಲವು ಔಷಧಗಳಿಗೆ ಜಿಎಸ್‌ಟಿ ದರದಲ್ಲಿ ವಿನಾಯಿತಿ ಡಿಸೆಂಬರ್‌ 31ರವರೆಗೆ ಮುಂದುವರಿಕೆ. ಆದರೆ, ಕೆಲವು ವೈದ್ಯಕೀಯ ಉಪಕರಣಗಳಿಗೆ ನೀಡಿದ್ದ ವಿನಾಯಿತಿಯು ಸೆಪ್ಟೆಂಬರ್‌ 30ಕ್ಕೆ ಕೊನೆಗೊಳ್ಳಲಿದೆ.

l ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ.

l ಸ್ನಾಯು ಕ್ಷೀಣತೆ ಚಿಕಿತ್ಸೆಯಲ್ಲಿ ಬಳಸುವ ಕೆಲವು ಔಷಧಗಳಿಗೆ (Zolgensma, Viltepso) ಜಿಎಸ್‌ಟಿಯಿಂದ ವಿನಾಯಿತಿ.

l ಡೀಸೆಲ್‌ ಜೊತೆ ಬೆರೆಸಲು ಬಳಸುವ ಜೈವಿಕ–ಡೀಸೆಲ್‌ ಮೇಲಿನ ತೆರಿಗೆ ಶೇ 12ರಷ್ಟು ಇದ್ದಿದ್ದು ಶೇ 5ಕ್ಕೆ ಇಳಿಕೆ.

l ಸರಕು ಸಾಗಣೆ ವಾಹನಕ್ಕೆ ರಾಷ್ಟ್ರೀಯ ಪರವಾನಗಿ ಶುಲ್ಕಕ್ಕೆ ಜಿಎಸ್‌ಟಿ ವಿನಾಯಿತಿ.

l ಎಲ್ಲ ಬಗೆಯ ಪೆನ್‌ಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು