ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸೆ ಬರಿದು, ಬೆಲೆ ಭಾರ!

Last Updated 17 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೀದರ್‌ನಿಂದ ಚಾಮರಾಜನಗರದವರೆಗೆ, ಕಾರವಾರದಿಂದ ಕೋಲಾರದವರೆಗೆ ಎಲ್ಲಿಯೇ ಹೋದರೂ, ‘ಕಿಸೆಯಲ್ಲಿ ಕಾಸು ಕಡಿಮೆ ಆಗಿದೆ. ಖರ್ಚುಗಳು ಮಾತ್ರ ಹೆಚ್ಚಾಗುತ್ತಲೇ ಇವೆ’ ಎಂಬ ಮಾತುಗಳು ಜನಸಾಮಾನ್ಯರಿಂದ ಬರುತ್ತಿವೆ. ಆಗಸ್ಟ್‌ ತಿಂಗಳಲ್ಲಿ ಶೇಕಡ 6.69ರಷ್ಟಿದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇ 7.34ಕ್ಕೆ ಹೆಚ್ಚಾಗಿದೆ.

ಆಹಾರದ ಹಣದುಬ್ಬರ ಪ್ರಮಾಣ ಶೇ 10ರ ಗಡಿಯನ್ನು ದಾಟಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯು ಈಚೆಗೆ ನೀಡಿದ ವರದಿಯೊಂದರ ಅನ್ವಯ ದೇಶದಲ್ಲಿ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಒಟ್ಟು 2.1 ಕೋಟಿ ಉದ್ಯೋಗ ನಷ್ಟ ಆಗಿದೆ. ಹಲವು ಉದ್ಯಮ ವಲಯಗಳಲ್ಲಿ ವೇತನ ಕಡಿತ ಆಗಿದೆ. ವ್ಯಾಪಾರಿಗಳೂ ನಷ್ಟ ಅನುಭವಿಸಿದ್ದಾರೆ.

‘ಜನರ ಕೈಯಲ್ಲಿ ಹಣ ಕಡಿಮೆ ಆದಾಗ ಅವರ ಕೊಳ್ಳುವ ಶಕ್ತಿ ಕುಂದುತ್ತದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ವಸ್ತುಗಳಿಗೆ ಬೇಡಿಕೆ ತಗ್ಗುತ್ತದೆ. ಆಗ, ಆ ವಸ್ತುಗಳ ಬೆಲೆಯಲ್ಲಿ ಇಳಿಕೆ ಆಗುತ್ತದೆ’ ಎಂಬುದು ಅರ್ಥಶಾಸ್ತ್ರದ ಪ್ರಾಥಮಿಕ ಪಾಠಗಳಲ್ಲಿ ಒಂದು. ಆದರೆ, ವ್ಯವಸ್ಥೆಯಲ್ಲಿ ಹಣದ ಚಲಾವಣೆ ಕಡಿಮೆ ಆಗಿದ್ದರೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಆಗಿರುವುದಕ್ಕೆ ಕಾರಣವೇನು?!

‘ಈಗ ದೇಶದಲ್ಲಿ ಸೃಷ್ಟಿಯಾಗಿರುವ ಸ್ಥಿತಿಯನ್ನು ಸ್ಟ್ಯಾಗ್‌ಫ್ಲೇಷನ್ ಎನ್ನಬ ಹುದು. ನಿರುದ್ಯೋಗ ಪ್ರಮಾಣ ಹೆಚ್ಚಿದೆ, ಆರ್ಥಿಕ ಬೆಳವಣಿಗೆ ದರ ಕುಸಿದಿದೆ. ಆದರೆ, ಹಣದುಬ್ಬರ ಮಾತ್ರ ಹೆಚ್ಚಳವಾಗುತ್ತಲೇ ಇದೆ. ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಲಿದೆ’ ಎಂದು ಎಚ್ಚರಿಕೆಯ ಮಾತುಗಳನ್ನಾಡುತ್ತಾರೆ ನಿವೃತ್ತ ಅರ್ಥಶಾಸ್ತ್ರ ಪ್ರೊಫೆಸರ್ ಡಾ.ಜಿ.ವಿ. ಜೋಶಿ.

‘ಈಗಿನ ಪರಿಸ್ಥಿತಿಯಲ್ಲಿ ಹಣದ ಚಲಾವಣೆ ಕಡಿಮೆ ಮಾಡಿದರೆ ನಿರುದ್ಯೋಗ ಇನ್ನಷ್ಟು ಹೆಚ್ಚುತ್ತದೆ. ನಿರುದ್ಯೋಗದಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಣದ ಚಲಾವಣೆ ಹೆಚ್ಚಿಸಿದರೆ, ಹಣದುಬ್ಬರ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ. ಈಗ ನಾವಿರುವ ಸ್ಥಿತಿ ಹೀಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಕೆಲವೆಡೆ ಆಗಿರುವ ಪ್ರಾಕೃತಿಕ ವಿಕೋಪಗಳ ಕಾರಣದಿಂದಾಗಿ ಅಗತ್ಯವಸ್ತುಗಳ ಪೂರೈಕೆ ತಗ್ಗಿದೆ. ಮುಂದಿನ 4–5 ತಿಂಗಳುಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಆಗ ನಿರುದ್ಯೋಗವೂ ಹೆಚ್ಚಾಗಬಹುದು, ಬೆಲೆ ಏರಿಕೆಯೂ ಜಾಸ್ತಿ ಆಗಬಹುದು’ ಎನ್ನುವುದು ಡಾ. ಜೋಶಿ ಅವರ ಮಾತು.

ಆಹಾರ ವಸ್ತುಗಳ ಬೆಲೆ ಏರಿಕೆ: ‘ಈಗ ಬೆಲೆ ಏರಿಕೆ ಜಾಸ್ತಿ ಆಗುತ್ತಿರುವುದು ಆಹಾರ ವಸ್ತುಗಳದ್ದು. ಲಾಕ್‌ಡೌನ್‌ ಹೇರಿದ ನಂತರ ಜನ ಅಗತ್ಯವಸ್ತುಗಳ ಬಳಕೆಯನ್ನು ತಗ್ಗಿಸಿದರು. ಅದರಿಂದಾಗಿ ಬೇಡಿಕೆ ಕಡಿಮೆ ಆಯಿತು. ಇದು ಪೂರೈಕೆ ವ್ಯವಸ್ಥೆಯ ಮೇಲೆ ಏಟು ಕೊಟ್ಟಿತು. ಈಗ ಅಗತ್ಯ ವಸ್ತುಗಳ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಹಾಗಾಗಿ, ಬೆಲೆ ಏರಿಕೆ ಜಾಸ್ತಿಯಾಗಿದೆ’ ಎಂದು ಸಾರ್ವಜನಿಕ ನೀತಿ ಸಂಶೋಧಕ ಪವನ್ ಶ್ರೀನಾಥ್ ವಿಶ್ಲೇಷಿಸಿದರು.

ಆದಾಯ ಕುಸಿದಿರುವ ಕಾರಣ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಿಗೆ ಇದ್ದ ಬೇಡಿಕೆ ತಗ್ಗಿರಬಹುದು. ಆದರೆ ಆ ವಸ್ತುಗಳ ಪೂರೈಕೆ ಬೇಡಿಕೆಗಿಂತಲೂ ಕಡಿಮೆ ಆಗಿದೆ ಎಂಬುದನ್ನು ಗಮನಿಸಬೇಕು. ಇದು ಕೂಡ ಬೆಲೆ ಏರಿಕೆಯನ್ನು ಹೆಚ್ಚು ಮಾಡುತ್ತಿದೆ ಎಂದು ಪವನ್ ಹೇಳಿದರು.

ನಿತ್ಯ ಬಳಸುವ ಧಾನ್ಯ, ಅಡುಗೆಎಣ್ಣೆ, ತರಕಾರಿ ಬೆಲೆಗಳು ತಿಂಗಳಿಂದಏರುತ್ತಲೇ ಇವೆ. ಕೈಯ್ಯಲ್ಲಿ ಹಣ ಕಡಿಮೆ ಇರುವುದರಿಂದ ಜನಸಾಮಾನ್ಯರು ಬವಣೆ ಪಡುತ್ತಲೇ ಇದ್ದಾರೆ.

ಲಾಕ್‌ಡೌನ್‌ ಜಾರಿಗೆ ಬಂದ ನಂತರ ದೊಡ್ಡ ಸಭೆ, ಸಮಾರಂಭಗಳು ರದ್ದಾದವು. ಅಲ್ಲಿ ಬಳಕೆಯಾಗುತ್ತಿದ್ದ ಬಗೆಬಗೆಯ ಹೂವುಗಳಿಗೆ ಬೇಡಿಕೆ ಇಲ್ಲವಾಯಿತು. ಇದರಿಂದಾಗಿ ಹೂವು ಬೆಳೆಯುತ್ತಿದ್ದ ಒಂದಿಷ್ಟು ಮಂದಿಗೆ ಹೂಡಿಕೆ ಮಾಡಿದ್ದ ಹಣವೂ ಸಿಗದಂತೆ ಆಯಿತು. ಅವರು ಹೆಚ್ಚು ಹೂವು ಬೆಳೆಯಲಿಲ್ಲ. ಅದರ ಪರಿಣಾಮವಾಗಿ ಈಗ ಹಬ್ಬದ ಹೊಸ್ತಿಲಿನಲ್ಲಿ ಹೂವಿನ ದರ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ಅನಿಸಿಕೆ ಹಂಚಿಕೊಂಡರು.

ಹಿಂದೆಂದೂ ಹೀಗಾಗಿರಲಿಲ್ಲ

ಈಗ ಎದುರಾಗಿರುವಂತಹ ಸ್ಥಿತಿಯನ್ನು ದೇಶವೂ ಹಿಂದೆಂದೂ ಕಂಡಿಲ್ಲ. ಜಾಗತಿಕ ಪೂರೈಕೆ ವ್ಯವಸ್ಥೆ ಮುರಿದುಬಿದ್ದಿದೆ. ಈಗಿನ ಬೆಲೆ ಏರಿಕೆಗೆ ಅದೂ ಒಂದು ಕಾರಣ ಎಂದು ಹಣಕಾಸು ತಜ್ಞರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಅಭಿಪ್ರಾಯ ಹಂಚಿಕೊಂಡರು.

‘ನೋಟು ರದ್ದತಿ ಆದಾಗ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಜಾರಿಗೊಳಿಸಿದಾಗ ಅರ್ಥ ವ್ಯವಸ್ಥೆಗೆ ಧಕ್ಕೆ ಆಗಿತ್ತೇ ವಿನಾ, ಪೂರೈಕೆ–ಬೇಡಿಕೆ ಸಂಬಂಧಕ್ಕೆ ಧಕ್ಕೆ ಆಗಿರಲಿಲ್ಲ. ಆದರೆ, ಈಗ ಆ ಸಂಬಂಧಕ್ಕೇ ಧಕ್ಕೆ ಆಗಿದೆ. ಎಲ್ಲವೂ ಸರಿಹೋಗಲು ಒಂದು ವರ್ಷ ಬೇಕಾಗಬಹುದು’ ಎಂದು ಅವರು ಅಂದಾಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT